75 ಕಡೆಗಳಲ್ಲಿ ಕನ್ನಡ ರಾಜ್ಯೋತ್ಸವ ವಿಶೇಷ ಅಂಚೆಚೀಟಿಗಳ ಪ್ರದರ್ಶನ

Update: 2021-10-27 13:27 GMT

ಉಡುಪಿ, ಅ.27: ಉಡುಪಿಯ ಸ್ವಚ್ಛ ಭಾರತ್ ಫ್ರೆಂಡ್ಸ್ ನೇತೃತ್ವದಲ್ಲಿ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಅಂಚೆಚೀಟಿ ಸಂಗ್ರಹಕಾರ ಕಲ್ಯಾಣಪುರ ಲಕ್ಷ್ಮೀ ನಾರಾಯಣ ನಾಯಕ್ ಅವರ ಕನ್ನಡ ನಾಡು, ನುಡಿಯನ್ನು ಪ್ರತಿಬಿಂಬಿಸುವ ಕನ್ನಡ ರಾಜ್ಯೋತ್ಸವ ವಿಶೇಷ ಅಂಚೆ ಚೀಟಿಗಳ ಪ್ರದರ್ಶನಕ್ಕೆ ಬುಧವಾರ ಪತ್ರಿಕಾ ಭವನದಲ್ಲಿ ಚಾಲನೆ ನೀಡಲಾಯಿತು.

ಕಳೆದ ನಾಲ್ಕು ದಶಕಗಳಿಂದ ಅಂಚೆ ಚೀಟಿ ಸಂಗ್ರಹ ಮಾಡುತ್ತಿರುವ ಲಕ್ಷ್ಮೀ ನಾರಾಯಣ ಅವರಲ್ಲಿ ಜಗತ್ತಿನ ಸುಮಾರು 180 ದೇಶಗಳ ಒಟ್ಟು 28ಸಾವಿರ ಅಂಚೆಚೀಟಿ ಹಾಗೂ 160 ದೇಶಗಳ 6,000ಕ್ಕೂ ಅಧಿಕ ನಾಣ್ಯಗಳು ಮತ್ತು ನೋಟಗಳ ಬೃಹತ್ ಸಂಗ್ರಹ ಇದೆ. ರಾಜ್ಯ ಸರಕಾರ ವಿವಿಧ ಸಾಧಕರ, ಪ್ರವಾಸಿ ಸ್ಥಳಗಳ, ಶ್ರದ್ಧಾಕೇಂದ್ರಗಳ ಹಾಗೂ ರಾಜ್ಯದ ನೆಲ ಜಲ, ಸಂಸ್ಕೃತಿಗೆ ಸಂಬಂಧಿಸಿ ಬಿಡುಗಡೆ ಮಾಡಿರುವ 95 ಅಂಚೆ ಚೀಟಿಗಳ ಪೈಕಿ ಇವರ ಬಳಿ 75 ಅಂಚೆ ಚೀಟಿಗಳ ಸಂಗ್ರಹ ಇವೆ.

ರಾಜ್ಯಕ್ಕೆ ಸಂಬಂಧಿಸಿದ ಈ 75 ಅಂಚೆಚೀಟಿಗಳನ್ನು ಸ್ವಾತಂತ್ರೋತ್ಸವದ ಅಮೃತ ಮಹೋತ್ಸವದ ಸವಿನೆಪಿಗಾಗಿ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಜಿಲ್ಲೆಯ ಒಟ್ಟು 75 ಕಡೆಗಳಲ್ಲಿ ಪ್ರದರ್ಶಿಸಲು ಇವರು ಉದ್ದೇಶಿಸಿದ್ದಾರೆ. ಇದರಲ್ಲಿ ಡಾ.ರಾಜ್‌ ಕುಮಾರ್, ವಿಶ್ವೇಶರಯ್ಯ, ಟಿಪ್ಪು ಸುಲ್ತಾನ್, ಉಡುಪಿಗೆ ಸಂಬಂಧಿಸಿದ ಶಂಕರಪುರ ಮಲ್ಲಿಗೆ, ಕವಿ ಮುದ್ದಣ್ಣ, ಕೃಷ್ಣಮಠ, ಇತರೆ ಪ್ರೇಕ್ಷಣೀಯ ಸ್ಥಳಗಳ, ವಿಜ್ಞಾನಿಗಳ, ಗಣ್ಯ ವ್ಯಕ್ತಿಗಳ ಅಂಚೆ ಚೀಟಿಗಳಿವೆ. ಸರಕಾರ ವಿಶೇಷ ಸಂದರ್ಭಗಳಲ್ಲಿ ಹೊರತಂದ ನಾಣ್ಯ, ಅಂಚೆ ಚೀಟಿಗಳನ್ನು ಕೂಡ ಇವರು ಸಂಗ್ರಹಿಸಿದ್ದಾರೆ.

ಈ ಸಂದರ್ಭದಲ್ಲಿ ಲಕ್ಷ್ಮೀನಾರಾಯಣ, ನಗರಸಭೆ ಸದಸ್ಯ ರಶ್ಮಿ ಚಿತ್ತರಂಜನ್ ಭಟ್, ವಾರ್ತಾಧಿಕಾರಿ ಮುಂಜುನಾಥ, ಸ್ವಚ್ಛ ಭಾರತ್ ಫ್ರೆಂಡ್ಸ್ ಜಗದೀಶ್ ಶೆಟ್ಟಿ, ರಾಘವೇಂದ್ರ ಪ್ರಭು, ಗಣೇಶ್ ನಾಯಕ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News