ಬೆಳ್ತಂಗಡಿ; ದಲಿತ ಬಾಲಕಿಯ ಅತ್ಯಾಚಾರ ಪ್ರಕರಣ: ಆರೋಪಿಗೆ 15 ವರ್ಷ ಕಠಿಣ ಶಿಕ್ಷೆ

Update: 2021-10-27 14:40 GMT

ಮಂಗಳೂರು, ಅ. 27: ದಲಿತ ಸಮುದಾಯದ ಬಾಲಕಿಯನ್ನು ಅತ್ಯಾಚಾರ ಎಸಗಿದ ಆರೋಪಿಯ ಅಪರಾಧ ಸಾಬೀತಾಗಿದ್ದು, ಆತನಿಗೆ 15 ವರ್ಷ ಕಠಿನ ಸಜೆ ವಿಧಿಸಿ ಮಂಗಳೂರಿನ ಹೆಚ್ಚುವರಿ ಸತ್ರ ನ್ಯಾಯಾಲಯ ಹಾಗೂ ಎಫ್‌ಟಿಎಸ್‌ಸಿ-1 (ಪೊಕ್ಸೊ) ನ್ಯಾಯಾಲಯದ ನ್ಯಾಯಾಧೀಶೆ ಸಾವಿತ್ರಿ ವಿ. ಭಟ್ ತೀರ್ಪು ನೀಡಿದ್ದಾರೆ.

ಬೆಳ್ತಂಗಡಿ ತಾಲೂಕಿನ ನೆರಿಯ ಗ್ರಾಮದ ಪಿ.ಜೆ.ಜೇಕಬ್ ಶಿಕ್ಷೆಗೊಳಗಾದ ಅಪರಾಧಿ.

2015ರ ಫೆಬ್ರವರಿಯಲ್ಲಿ ಶಾಲೆಯಿಂದ ಮನೆಗೆ ನಡೆದುಕೊಂಡು ಹೋಗುತ್ತಿದ್ದ ಬಾಲಕಿಯನ್ನು ಬಲಾತ್ಕಾರವಾಗಿ ತಡೆದು ನಿಲ್ಲಿಸಿ ಅತ್ಯಾಚಾರವೆಸಗಿದ್ದ. ಅಲ್ಲದೆ ಈ ವಿಚಾರವನ್ನು ಯಾರಿಗಾದರೂ ಹೇಳಿದರೆ ನದಿಗೆ ಹಾಕಿ ಕೊಲೆ ಮಾಡುವುದಾಗಿ ಬೆದರಿಸಿದ್ದ. ಬಳಿಕವೂ ಬಾಲಕಿ ಶಾಲೆಯಿಂದ ಮನೆಗೆ ಮರಳುವಾಗ ತಡೆದು ಪಕ್ಕದ ರಬ್ಬರ್ ತೋಟಕ್ಕೆ ಬಲಾತ್ಕಾರವಾಗಿ ಕರೆದೊಯ್ದು ಅತ್ಯಾಚಾರವೆಸಗಿ ಬೆದರಿಕೆ ಹಾಕಿದ್ದ. ಪರಿಣಾಮವಾಗಿ ಬಾಲಕಿ ಗರ್ಭಿಣಿಯಾಗಿ ಮಗುವಿಗೆ ಜನ್ಮ ನೀಡಿದ್ದಳು. ಡಿಎನ್‌ಎ ಪರೀಕ್ಷೆಯಲ್ಲಿ ಬಾಲಕಿಯ ಗರ್ಭಕ್ಕೆ ಪಿ.ಜೆ.ಜೇಕಬ್ ಕಾರಣ ಎಂದು ದೃಢಪಟ್ಟಿತ್ತು. ಪುತ್ತೂರು ಎಎಸ್ಪಿ ರಾಹುಲ್ ಕುಮಾರ್ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

ವಾದ-ಪ್ರತಿವಾದ ಆಲಿಸಿದ ನ್ಯಾಯಾಧೀಶರು ಅಪರಾಧಿಗೆ ಅತ್ಯಾಚಾರ ಎಸಗಿದ್ದಕ್ಕೆ 6 ವರ್ಷ ಕಠಿನ ಸಜೆ, 1 ಲಕ್ಷ ರೂ. ದಂಡ, ದಂಡ ಪಾವತಿಸಲು ತಪ್ಪಿದರೆ ಹೆಚ್ಚುವರಿ 6 ತಿಂಗಳ ಕಠಿಣ ಸಜೆ, ಬಲವಂತವಾಗಿ ತಡೆದು ನಿಲ್ಲಿಸಿರುವುದಕ್ಕೆ 500 ರೂ. ದಂಡ, ದಂಡ ಪಾವತಿಸಲು ತಪ್ಪಿದರೆ 15 ದಿನ ಸಜೆ, ಕೊಲೆ ಬೆದರಿಕೆ ಹಾಕಿರುವುದಕ್ಕೆ 6 ತಿಂಗಳು ಕಠಿನ ಸಜೆ ಮತ್ತು 5,000 ರೂ. ದಂಡ, ದಂಡ ಪಾವತಿಸಲು ತಪ್ಪಿದರೆ 1 ತಿಂಗಳು ಹೆಚ್ಚುವರಿ ಕಠಿನ ಸಜೆ ಹಾಗೂ ಪೋಕ್ಸೊ ಕಾಯಿದೆಯಡಿ 15 ವರ್ಷ ಕಠಿನ ಸಜೆ ಮತ್ತು ಒಂದು ಲಕ್ಷರೂ. ದಂಡ, ದಂಡ ಪಾವತಿಸಲು ತಪ್ಪಿದರೆ 1 ವರ್ಷ ಕಠಿನ ಸಜೆ, ಎಸ್‌ಸಿ/ಎಸ್‌ಟಿ ಕಾಯ್ದೆಯಡಿ 2 ವರ್ಷ ಕಠಿನ ಸಜೆ, 50,000 ರೂ. ದಂಡ ಹಾಗೂ ದಂಡ ಪಾವತಿಸಲು ತಪ್ಪಿದರೆ 3 ತಿಂಗಳು ಹೆಚ್ಚುವರಿ ಸಜೆ ವಿಧಿಸಿದ್ದಾರೆ.

3 ಲ.ರೂ. ಪರಿಹಾರ: ದಂಡದ ಮೊತ್ತದಲ್ಲಿ 2 ಲ.ರೂ. ಹಾಗೂ ಸರಕಾರದಿಂದ 1 ಲ.ರೂ. ಪರಿಹಾರವನ್ನು ನೊಂದ ಬಾಲಕಿಗೆ ನೀಡುವಂತೆಯೂ ನ್ಯಾಯಾಧೀಶರು ಆದೇಶದಲ್ಲಿ ತಿಳಿಸಿದ್ದಾರೆ. ಪ್ರಾಸಿಕ್ಯೂಷನ್ ಪರವಾಗಿ ವಿಶೇಷ ಸರಕಾರಿ ಅಭಿಯೋಜಕ (ಪೋಕ್ಸೊ) ವೆಂಕಟರಮಣ ಸ್ವಾಮಿ ಸಿ. ವಾದಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News