ಮಂಗಳೂರು ವಿವಿಯಲ್ಲಿ ನ.8ರಿಂದ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ : ಡಾ. ಯಡಪಡಿತ್ತಾಯ

Update: 2021-10-27 16:38 GMT
ಡಾ. ಯಡಪಡಿತ್ತಾಯ

ಮಂಗಳೂರು, ಅ.27: ಮಂಗಳೂರು ವಿಶ್ವ ವಿದ್ಯಾನಿಲಯದಲ್ಲಿ ನೂತನ ರಾಷ್ಟ್ರೀಯ ಶಿಕ್ಷಣ ನೀತಿ(ಎನ್‌ಇಪಿ)ಯನ್ನು ನ.8ರಿಂದ ಅಧಿಕೃತವಾಗಿ ಅನುಷ್ಠಾನಗೊಳಿಸಲಾಗುವುದು ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಡಾ.ಪಿ.ಎಸ್. ಯಡಪಡಿತ್ತಾಯ ತಿಳಿಸಿದ್ದಾರೆ.

ಮಂಗಳೂರು ವಿವಿಯ ಆಡಳಿತ ಸೌಧದ ರಾಣಿ ಅಬ್ಬಕ್ಕ ಸಭಾಂಗಣದಲ್ಲಿ ಇಂದು ನಡೆದ ವಿವಿಯ ಶೈಕ್ಷಣಿಕ ಮಂಡಳಿಯ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.

ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರಾಜ್ಯದ ವಿಶ್ವವಿದ್ಯಾನಿಲಯಗಳು ಮತ್ತು ಸಂಯೋಜಿತ ಕಾಲೇಜುಗಳಲ್ಲಿ 2021-22ನೇ ಸಾಲಿನಲ್ಲಿ ಅನುಷ್ಠಾನಗೊಳಿಸಲು ಪದವಿ ಕಾರ್ಯಕ್ರಮಗಳ ಪಠ್ಯಕ್ರಮಗಳ ರೂಪುರೇಷೆ ಮತ್ತು ಮಾರ್ಗಸೂಚಿಗಳೊಂದಿಗೆ ಸರಕಾರದ ನಿರ್ದೇಶನದ ಪ್ರಕಾರ ತಜ್ಞರ ಸಮಿತಿ ರಚಿಸಲಾಗಿತ್ತು. ಈ ಸಮಿತಿ ರಚಿಸಿರುವ ಮಾರ್ಗಸೂಚಿಯನ್ನು ಶೈಕ್ಷಣಿಕ ಮಂಡಳಿಯ ಸಭೆಯಲ್ಲಿ ಮಂಡಿಸಿ ನಿರ್ಣಯಿಸಲಾಯಿತು.

ರಾಷ್ಟ್ರೀಯ ನೂತನ ಶಿಕ್ಷಣ ನೀತಿಯ ಪಠ್ಯಕ್ರಮದಲ್ಲಿ ರಾಷ್ಟ್ರೀಯ ಮಟ್ಟದ ಗುಣಮಟ್ಟ ಪಾಲನೆಗಾಗಿ ರಾಜ್ಯ ಉನ್ನತ ಶಿಕ್ಷಣ ಪರಿಷತ್‌ನ ನೇತೃತ್ವದಲ್ಲಿ ಸಮಿತಿ ರಚಿಸಿ ಶಿಕ್ಷಣ ನೀತಿ ರೂಪಿಸಲಾಗಿದೆ. ಆಗಸ್ಟ್ 2018ರಲ್ಲಿ ನಿರಪೇಕ್ಷಣಾ ಪತ್ರದ ಮೂಲಕ ಅನುಮತಿ ದೊರೆತಿದ್ದು, ವಿದ್ಯಾರ್ಥಿಗಳ ಶೈಕ್ಷಣಿಕ ಮತ್ತು ಭವಿಷ್ಯ ರೂಪಿಸುವ ಪಠ್ಯಕ್ರಮ, ಭೋದನಾ ಶೈಲಿಯಲ್ಲಿ ಬದಲಾವಣೆ ಬಗ್ಗೆ ಪ್ರತಿಪಾದಿಸಿದೆ. ಅದನ್ನೇ ಮಾದರಿಯನ್ನಾಗಿಸಿ ಪಠ್ಯಕ್ರಮ ರೂಪಿಸಲಾಗಿದೆ. ಪಠ್ಯಕ್ರಮ ರೂಪಿಸಲು 48 ಬೋರ್ಡ್‌ಗಳಿದ್ದು, ಹತ್ತು ಬೋರ್ಡ್ ಗಳು ಪಠ್ಯಕ್ರಮ ನೀಡಿದ್ದರೂ ಎನ್‌ಇಪಿ-2020ಕ್ಕೆ ಸಂಬಂಧಿಸಿದಂತೆ ಕೆಲವು ಬದಲಾವಣೆಯ ಅಗತ್ಯವಿದೆ. ಕೆಲವು ವಿಷಯಗಳಿಗೆ ಸಮಿತಿ ರಚನೆಯಾಗಿಲ್ಲ. ವಾರದೊಳಗೆ ಪಠ್ಯಕ್ರಮ ರೂಪಿಸಬೇಕು ಮತ್ತು ಶೀಘ್ರದಲ್ಲಿ 41 ವಿಷಯದಲ್ಲೂ ಪಠ್ಯಕ್ರಮ ಅಳವಡಿಕೆ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.

ಅನುಮೋದನೆ: ವಿ.ವಿ ಅಧೀನದಲ್ಲಿ ಸ್ವಾಯತ್ತೆ ಕಾಲೇಜುಗಳ ನಿಯಂತ್ರಿಸುವ ಅನುಶಾಸನ ತಿದ್ದುಪಡಿ, ಬಿ. ವೊಕೇಷನಲ್ ಪದವೀಧರರನ್ನು ಸ್ನಾತಕೋತ್ತರ ಕಾರ್ಯಕ್ರಮಗಳ ವಿದ್ಯಾರ್ಥಿ ಪ್ರವೇಶಾರ್ಹತೆಗೆ ಪರಿಗಣನೆ, ಮಂಗಳೂರು ವಿವಿ ಮತ್ತು ಯುಎಸ್ ಎ ವೇನ್ನ್ ಸ್ಟೇಟ್ ಯುನಿವರ್ಸಿಟಿ ಡೆಟ್ರೋಯ್ಟೋ ನಡುವಿನ ಒಡಬಂಡಿಕೆ ಪ್ರಸ್ತಾವ, ಶೈಕ್ಷಣಿಕ ಮಂಡಳಿ ಸದಸ್ಯ ಕರುಣಾಕರ್ ಜೈನ್ ಸಲ್ಲಿಸಿರುವ ಯೋಗ ವಿಜ್ಞಾನವನ್ನು ಪದವಿ ಕಾಲೇಜುಗಳಲ್ಲಿ ಆಯ್ಕೆ ವಿಷಯವಾಗಿ ಅಧ್ಯಯನ ಮಾಡುವ ಗೊತ್ತುವಳಿಗೆ ಶೈಕ್ಷಣಿಕ ಮಂಡಳಿ ಸಭೆಯಲ್ಲಿ ಅನುಮೋದನೆ ನೀಡಲಾಯಿತು.

ಪದವಿ ಮಟ್ಟದಲ್ಲಿ ಗ್ರಾಹಕ ವ್ಯವಹಾರಗಳು ವಿಷಯ ಆಯ್ಕೆ ಕೋರ್ಸ್ ಆಗಿ ಅಳವಡಿಕೆ, ಆಯ್ಕೆ ಆಧಾರಿತ ಶ್ರೇಯಾಂಕ ಪದ್ಧತಿಯ ಪದವಿ ಮಟ್ಟದ ನಾಲ್ಕನೇ ಸೆಮಿಸ್ಟರ್‌ನ ಕನ್ನಡ ಭಾಷೆ ಮತ್ತು ಕನ್ನಡ ಕೋರ್ ಕೋರ್ಸ್‌ಗಳ ಪರಿಷ್ಕೃತ ಪಠ್ಯಕ್ರಮ, ಆಯ್ಕೆ ಆಧಾರಿತ ಶ್ರೇಯಾಂಕ ಪದ್ಧತಿಯ ಬಿಎಸ್ಸಿ-ಹೋಂ ಸಾಯನ್ಸ್ ಪದವಿ ಕಾರ್ಯಕ್ರಮದ ಪಠ್ಯಕ್ರಮದಲ್ಲಿ ಮಾರ್ಪಾಡು ಮಾಡಲು ತೀರ್ಮಾನಿಸಲಾಯಿತು.

ಪದವಿ ಮಟ್ಟದ ಕಾರ್ಯಕ್ರಮಗಳಿಗೆ ರಾಷ್ಟ್ರೀಯ ಶಿಕ್ಷಣ ನೀತಿಯ ನುಸಾರ ತಯಾರಿಸಲಾದ ವಿನಿಮಯ, ಕಾನೂನು ವಿಷಯಗಳ ಪಿಜಿ ಡಿಪ್ಲೊಮಾ ಮತ್ತು ಸರ್ಟಿಫಿಕೇಟ್ ಕಾರ್ಯಕ್ರಮದ ವಿನಿಮಯ ಮತ್ತು ಪಠ್ಯಕ್ರಮ, ಶೈಕ್ಷಣಿಕ ವರ್ಷ ಸ್ನಾತಕೋತ್ತರ/ ಪಿಎಚ್ ಡಿ ಕಾರ್ಯಕ್ರಮಗಳಿಗೆ ವಿದೇಶಿ ವಿದ್ಯಾರ್ಥಿಗಳ ಪ್ರವೇಶಾತಿ ವಿಷಯ ಗಳಿಗೆ ಅನುಮೋದನೆ ನೀಡಿತು.

ಕುಲಸಚಿವ (ಆಡಳಿತ) ಡಾ.ಕಿಶೋರ್ ಕುಮಾರ್, ಪರೀಕ್ಷಾಂಗ ಕುಲಸಚಿವ ಪ್ರೊ.ಪಿ.ಎಲ್.ಧರ್ಮ, ಹಣಕಾಸು ಅಧಿಕಾರಿ ಪ್ರೊ.ಬಿ. ನಾರಾಯಣ ಉಪಸ್ಥಿತರಿದ್ದರು.

ತೆರೆದ ಪುಸ್ತಕದೊಂದಿಗೆ ಪರೀಕ್ಷೆ

ಮಂಗಳೂರು ವಿವಿಯಲ್ಲಿ ತೆರದ ಪುಸ್ತಕದೊಂದಿಗೆ (ಮುಕ್ತ)ಪರೀಕ್ಷೆಯ ವಿಧಾನವನ್ನು ಪ್ರಾಯೋಗಿಕವಾಗಿ ಮುಂಬರುವ ಶೈಕ್ಷಣಿಕ ವರ್ಷ ದಿಂದ ಅನುಷ್ಠಾನ ಮಾಡಲಾಗು ವುದು. ಈ ಮಾದರಿಯ ಪರೀಕ್ಷೆ ಯಲ್ಲಿ ಆನ್‌ಲೈನ್ ಮೂಲಕ ಪ್ರಶ್ನೆ ಪತ್ರಿಕೆಯನ್ನು ನೀಡಲಾಗುತ್ತದೆ. ವಿದ್ಯಾರ್ಥಿಯು ಎಲ್ಲೇ ಇದ್ದರೂ ಅಲ್ಲಿಂದಲೇ ನಿಗದಿತ ಅವದಿಯಲ್ಲಿ ಪರೀಕ್ಷೆಗೆ ಆನ್‌ಲೈನ್ ಮೂಲಕ ಉತ್ತರ ಬರೆಯಬಹುದು ಕುಲಪತಿ ಪ್ರೊ.ಪಿ.ಎಸ್.ಯಡಪಡಿತ್ತಾಯ ತಿಳಿಸಿದ್ದಾರೆ.

ಹೊಸ ಶಿಕ್ಷಣ ನೀತಿಯ ಪ್ರಕಾರ ಮೂರು ಗಂಟೆಯ ಬದಲು ಎರಡು ಗಂಟೆಯ ಪರೀಕ್ಷೆ ನಡೆಯಲಿದೆ. ಹೊಸ ಶಿಕ್ಷಣ ನೀತಿಯಡಿ ಪಠ್ಯ ಕ್ರಮವನ್ನು ಈ ಶೈಕ್ಷಣಿಕ ವರ್ಷದಲ್ಲೇ ಜಾರಿಗೊಳಿಸಲಾಗುತ್ತಿದೆ. ಫ್ರೆಂಚ್, ಡಾಟಾ ಪ್ರೊಸೆಸಿಂಗ್, ತುಳು, ಕಂಪ್ಯೂಟರ್ ಅಪ್ಲಿಕೇಶನ್, ಅರೆಬಿಕ್ ಹಾಗೂ ಸಾಮಾನ್ಯ ಕಲಾ ಕೋರ್ಸ್‌ಗಳ ಪಠ್ಯ ಅಂತಿಮವಾಗಿಲ್ಲ. ನ.6ರೊಳಗೆ ಈ ಪಠ್ಯ ಅಂತಿಮವಾಗಲಿದೆ. ಇಲ್ಲವಾದರೆ ರಾಜ್ಯ ಪಠ್ಯಪುಸ್ತಕ ಸಮಿತಿ ಮಾಡಿದ ಪಠ್ಯವನ್ನೇ ಎರಡು ಸೆಮಿಸ್ಟರ್‌ವರೆಗೆ ಅನುಸರಿಸಲಾಗುವುದು. ಅದು ಸಾಧ್ಯವಾಗದಿದ್ದರೆ ವಿವಿ ತಜ್ಞರ ಸಮಿತಿಯಿಂದಲೇ ಪಠ್ಯ ರಚಿಸಲಾಗುವುದು 55 ಕೋರ್ಸ್‌ಗಳ ಪಠ್ಯ ಅಂತಿಮವಾಗಿದೆ ಎಂದು ಅವರು ವಿವರಿಸಿದರು. ವಿದೇಶದ ಸುಮಾರು 64 ವಿದ್ಯಾರ್ಥಿಗಳ ಅರ್ಜಿಗಳನ್ನು ಈ ಬಾರಿಯ ಸ್ನಾತಕೋತ್ತರ/ಪಿಎಚ್‌ಡಿಗೆ ಹೆಚ್ಚುರಿಯಾಗಿ ಸ್ವೀಕರಿಸಲಾಗಿದೆ ಎಂದು ಪ್ರೊ. ಯಡಪಡಿತ್ತಾಯ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News