ಭಾರತೀಯ ಸೇನೆಯು ರಷ್ಯಾದ ಉಪಕರಣಗಳಿಲ್ಲದೆ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸದು: ಅಮೆರಿಕದ ಸಿಆರ್‌ಎಸ್ ವರದಿ

Update: 2021-10-28 15:35 GMT
ಸಾಂದರ್ಭಿಕ ಚಿತ್ರ

ವಾಷಿಂಗ್ಟನ್,ಅ.28: ರಷ್ಯಾದ ಶಸ್ತ್ರಾಸ್ತ್ರಗಳು ಮತ್ತು ಉಪಕರಣಗಳ ಮೇಲಿನ ಭಾರತದ ಅವಲಂಬನೆ ಗಣನೀಯವಾಗಿ ಕಡಿಮೆಯಾಗಿದೆಯಾದರೂ ರಷ್ಯಾದ ಉಪಕರಣಗಳಿಲ್ಲದೆ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಲು ಭಾರತೀಯ ಸೇನೆಗೆ ಸಾಧ್ಯವಿಲ್ಲ ಹಾಗೂ ಸದ್ಯೋಭವಿಷ್ಯದಲ್ಲಿ ಮತ್ತು ಮಧ್ಯಮ ಅವಧಿಯಲ್ಲಿ ಅದು ರಷ್ಯಾದ ಶಸ್ತ್ರಾಸ್ತ್ರ ವ್ಯವಸ್ಥೆಗಳ ಮೇಲಿನ ತನ್ನ ಅವಲಂಬನೆಯನ್ನು ಮುಂದುವರಿಸಲಿದೆ ಎಂದು ಕಾಂಗ್ರೆಸ್ನಲ್ ರೀಸರ್ಚ್ ಸರ್ವಿಸ್ (ಸಿಆರ್ಎಸ್) ತನ್ನ ವರದಿಯಲ್ಲಿ ತಿಳಿಸಿದೆ.

ಭಾರತವು ರಷ್ಯಾದಿಂದ ಮಿಲಿಟರಿ ಶಸ್ತ್ರಾಸ್ತ್ರಗಳನ್ನು ಖರೀದಿಸುವ ಕುರಿತಂತೆ ‘ನಿರ್ಬಂಧಗಳ ಮೂಲಕ ಅಮೆರಿಕದ ಎದುರಾಳಿಗಳನ್ನು ಎದುರಿಸುವ ಕಾಯ್ದೆ (ಸಿಎಎಟಿಎಸ್ಎ)’ಯ ಅಡಿ ಭಾರತದ ವಿರುದ್ಧ ನಿರ್ಬಂಧಗಳನ್ನು ಹೇರಬೇಕೇ ಎಂಬ ಬಗ್ಗೆ ಬೈಡೆನ್ ಆಡಳಿತವು ನಿರ್ಣಾಯಕ ನಿರ್ಧಾರವೊಂದನ್ನು ತೆಗೆದುಕೊಳ್ಳಲಿರುವ ಮುನ್ನ ಈ ವರದಿ ಹೊರಬಿದ್ದಿದೆ. 

ಭಾರತದಲ್ಲಿಯ ಮತ್ತು ವಿದೇಶಗಳಲ್ಲಿಯ ಹಲವಾರು ವಿಶ್ಲೇಷಕರೂ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ ಎಂದು ಸ್ವತಂತ್ರ ಸಿಆರ್ಎಸ್ ತನ್ನ ‘ರಷ್ಯನ್ ಶಸ್ತ್ರಾಸ್ತ್ರಗಳ ಮಾರಾಟ ಮತ್ತು ರಕ್ಷಣಾ ಕೈಗಾರಿಕೆ ’ ವರದಿಯಲ್ಲಿ ತಿಳಿಸಿದೆ.

ಹಿರಿಯ ಅಮೆರಿಕನ್ ವೀಕ್ಷಕರೋರ್ವರು ಹೇಳಿರುವಂತೆ ಭಾರತದ ನಿರಂತರ ಖರೀದಿಯು ರಷ್ಯಾದ ಮೇಲೆ ಅದು ಈಗಲೂ ಹೊಂದಿರುವ ಪ್ರಭಾವಕ್ಕೆ ಕಾರಣಗಳಲ್ಲೊಂದಾಗಿದೆ. ಅದೇ ರೀತಿ ಇತರ ಯಾವುದೇ ದೇಶವು ಭಾರತಕ್ಕೆ ಒದಗಿಸಲು ಇಷ್ಟಪಡದ ಶಸ್ತ್ರಾಸ್ತ್ರ ವ್ಯವಸ್ಥೆಗಳು ಮತ್ತು ತಂತ್ರಜ್ಞಾನಗಳನ್ನು ಪೂರೈಸಲು ಸಿದ್ಧವಾಗಿರುವ ಮೂಲಕ ರಷ್ಯಾ ಭಾರತದಲ್ಲಿ ತನ್ನ ಪ್ರಭಾವವನ್ನು ಹೊಂದಿದೆ. ತುಲನಾತ್ಮಕವಾಗಿ ಆಕರ್ಷಕ ದರಗಳಲ್ಲಿ ಆಧುನಿಕ ಶಸ್ತ್ರಾಸ್ತ್ರ ವ್ಯವಸ್ಥೆಗಳ ಕೊಡುಗೆಯನ್ನು ರಷ್ಯಾ ಸಹ ಮುಂದುವರಿಸಿದೆ ಎಂದು ಸಿಆರ್ಎಸ್ ಹೇಳಿದೆ.

 ಸಿಆರ್ಎಸ್ ಸ್ವತಂತ್ರ ತಜ್ಞರನ್ನು ಬಳಸಿಕೊಂಡು ವಿವಿಧ ವಿಷಯಗಳ ಮೇಲೆ ನಿಯತಕಾಲಿಕ ವರದಿಗಳನ್ನು ಸಿದ್ಧಪಡಿಸುತ್ತದೆ. ಅದರ ವರದಿಗಳು ಕಾಂಗ್ರೆಸ್ನ ಅಧಿಕೃತ ವರದಿಗಳಲ್ಲ. ಸಂಸದರು ಮಾಹಿತಿಪೂರ್ವಕ ನಿರ್ಧಾರಗಳನ್ನು ಕೈಗೊಳ್ಳುವಲ್ಲಿ ನೆರವಾಗಲು ಈ ವರದಿಗಳನ್ನು ಸಿದ್ಧಗೊಳಿಸಲಾಗುತ್ತದೆ.

ಮೋದಿ ಸರಕಾರದಡಿ 2015ರಿಂದೀಚಿಗೆ ರಷ್ಯಾದಿಂದ ಉಪಕರಣಗಳ ಆಮದು ಸ್ಥಿರವಾಗಿ ಇಳಿಕೆಯಾಗುತ್ತಿದೆ ಎಂದು ವರದಿಯು ತಿಳಿಸಿದೆ.

 2016ರಿಂದಲೂ ಪ್ರಗತಿಯಲ್ಲಿರುವ ರಷ್ಯಾನಿರ್ಮಿತ ಎಸ್-400 ವಾಯು ರಕ್ಷಣಾ ವ್ಯವಸ್ಥೆಗಳನ್ನು ಖರೀದಿಸುವ ಭಾರತದ ಯೋಜನೆಯು ಸಿಎಎಟಿಎಸ್ಎದ ಕಲಂ 231ರಡಿ ಅಮೆರಿಕವು ನಿರ್ಬಂಧಗಳನ್ನು ಹೇರಲು ಕಾರಣವಾಗಬಹುದು ಎಂದು ಬೆಟ್ಟು ಮಾಡಿರುವ ವರದಿಯು,ಎಸ್-400ಕ್ಕೆ ಪರ್ಯಾಯವಾಗಿ ಅಮೆರಿಕವು ಮುಂದಿಟ್ಟಿರುವ ಪೇಟ್ರಿಯಾಟ್ ಮತ್ತು ಥಾಡ್ ವ್ಯವಸ್ಥೆಗಳಲ್ಲಿ ರಷ್ಯನ್ ಉಪಕರಣದ ಉದ್ದೇಶಿತ ಶ್ರೇಣಿ ಮತ್ತು ವೈವಿಧ್ಯತೆಯ ಕೊರತೆಯಿದೆ ಎಂದು ಭಾರತೀಯ ಯೋಜಕರು ನಿರ್ಧರಿಸಿರುವಂತಿದೆ ಎಂದು ಹೇಳಿದೆ.

ರಷ್ಯಾದಿಂದ ಶಸ್ತ್ರಾಸ್ತ್ರಗಳ ಆಮದಿನಿಂದ ದೂರವಿರುವ ಪ್ರವೃತ್ತಿಯ ಹೊರತಾಗಿಯೂ ಭಾರತವು ಎಸ್-400 ವಾಯುರಕ್ಷಣಾ ವ್ಯವಸ್ಥೆಗೆ ಖರೀದಿಗಾಗಿ 5.4 ಶತಕೋಟಿ ಡಾ.ಗಳ ಒಪ್ಪಂದದ ಭಾಗವಾಗಿ 2019ರ ಕೊನೆಯಲ್ಲಿ 80 ಕೋಟಿ ಡಾ.ಗಳನ್ನು ಪಾವತಿಸಿದೆ. ಅಲ್ಲದೆ 464 ರಷ್ಯಾ ವಿನ್ಯಾಸದ ಟಿ-90 ಯುದ್ಧ ಟ್ಯಾಂಕುಗಳ ದೇಶಿ ಉತ್ಪಾದನೆಗಾಗಿ 3.1 ಶತಕೋಟಿ ಡಾ.ಗಳ ಹೊಸ ಒಪ್ಪಂದವನ್ನೂ ಮಾಡಿಕೊಂಡಿದೆ ಎಂದಿರುವ ಸಿಆರ್ಎಸ್, ಎಸ್-400ಗಳ ಸೇರ್ಪಡೆಗಾಗಿ ಭಾರತವು ಭರದಿಂದ ಮುಂದುವರಿಯುತ್ತಿದೆ ಮತ್ತು 2021ರ ಶರತ್ಕಾಲದಲ್ಲಿ ಪೂರೈಕೆ ಆರಂಭವಾಗಿ 2020ರ ಪೂರ್ವಾರ್ಧದಲ್ಲಿ ಪೂರ್ಣಗೊಳ್ಳಲಿದೆ ಎಂದು ಇತ್ತೀಚಿನ ಮಾಧ್ಯಮ ವರದಿಗಳು ಸೂಚಿಸಿವೆ ಎಂದಿದೆ.

ಕೃಪೆ: Indianexpress.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News