ಉಡುಪಿ: ​ವಿದ್ಯಾರ್ಥಿಗಳ ನಡುವೆ ಕುಳಿತು ಡಾ.ಜಿ.ಎನ್.ದೇವಿ ಪಟ್ಟಾಂಗ

Update: 2021-10-29 16:44 GMT

ಉಡುಪಿ, ಅ.29: ರಾಜಕೀಯ ಪಕ್ಷಗಳು ಏನೇ ಹೇಳಲಿ, ನೀವೆಂದೂ ಧ್ವೇಷದ ವಾಹಕಗಳಾಗಬೇಡಿ. ಸೌಹಾರ್ದತೆಯ ಬದುಕು ನಿಮ್ಮ ಗುರಿಯಾಗಿರಲಿ. ಇತರನ್ನು ಗೌರವಿಸಿ, ಪ್ರೀತಿಸುವುದನ್ನು ಕಲಿತುಕೊಳ್ಳಿ.’ ಹೀಗೆಂದು ವೇದಿಕೆಯಲ್ಲಿ ತನ್ನ ಸುತ್ತಲೂ ವಿದ್ಯಾರ್ಥಿಗಳನ್ನು ಕುಳ್ಳಿರಿಸಿಕೊಂಡು ಅಧ್ಯಾಪಕನ ಪ್ರೀತಿ ಹಾಗೂ ಹಿರಿಯರೊಬ್ಬರ ಹಿತನುಡಿಯ ದಾಟಿಯಲ್ಲಿ ಹೇಳಿದವರು ಚಿಂತಕ, ಸಂಶೋಧಕ, ಭಾಷಾಶಾಸಜ್ಞ, ಆದಿವಾಸಿಗಳ ಬದುಕು, ಭಾಷೆಯ ಕುರಿತು ಅಪಾರ ಸಂಶೋಧನೆ ನಡೆಸಿರುವ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ.ಗಣೇಶ್ ಎನ್.ದೇವಿ.

ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಶುಕ್ರವಾರ ತನ್ನ ಬರಹಗಳ ಕನ್ನಡಾನುವಾದದ ಸಂಗ್ರಹ ‘ಜಿ.ಎನ್.ದೇವಿ ಆಯ್ದ ಬರಹ’ ಕೃತಿಯ ಬಿಡುಗಡೆ ಸಮಾರಂಭದಲ್ಲಿ ಮಾತಿನ ತನ್ನ ಸರದಿ ಬಂದಾಗ ವೇದಿಕೆಯಲ್ಲಿ ನಿಂತು ಔಪಚಾರಿಕವಾಗಿ ಮಾತನಾಡದೇ, ವೇದಿಕೆ ಕೆಳಗೆ ಕುಳಿತ ಎಂಜಿಎಂ ಕಾಲೇಜಿನ ವಿದ್ಯಾರ್ಥಿಗಳನ್ನೆಲ್ಲಾ ಮೇಲಕ್ಕೆ ಕರೆದು ತನ್ನ ಸುತ್ತಲೂ ಕುಳಿತುಕೊಳ್ಳುವಂತೆ ತಿಳಿಸಿ ಅವರ ಮಧ್ಯದಲ್ಲಿ ಕುಳಿತು ಸಂವಾದದ ರೀತಿಯಲ್ಲಿ ಸಂಭಾಷಿಸಿದರು.

ಬೆಳಕಿನ ಬೆಳೆ ಮಾಲಿಕೆಯಲ್ಲಿ ಅಮರ್ತ್ಯಸೇನ್‌ರ ಕೃತಿಯೂ ಹೊರಬರುವ ಬಗ್ಗೆ ತಿಳಿಸಿ, ಸೇನ್‌ರ ಕುರಿತು ಸ್ವಾರಸ್ಯಕರ ಮಾಹಿತಿಯೊಂದನ್ನು ವಿದ್ಯಾರ್ಥಿ ಗಳೊಂದಿಗೆ ಹಂಚಿಕೊಂಡರು. ಅಮರ್ತ್ಯಸೇನ್ ನೋಬೆಲ್ ಪ್ರಶಸ್ತಿ ಪಡೆದ ಅರ್ಥಶಾಸಜ್ಞನಾದರೂ, ಆತ 1970ರ ದಶಕದ ಭಾರತೀಯ ಜನಸಂಖ್ಯೆಯಲ್ಲಿ ನಡೆಯುತಿದ್ದ ಗೋಲ್‌ಮಾಲ್ ಒಂದನ್ನು ಹೇಗೆ ಪತ್ತೆ ಹಚ್ಚಿದರು ಎಂಬುದನ್ನು ವಿವರಿಸಿದರು.

ಅಂದು ಭಾರತದ ಜನಸಂಖ್ಯೆಯಲ್ಲಿ ಗಂಡುಹೆಣ್ಣಿನ ನಡುವಿನ ಅಸಮಾನತೆ ಹಠಾತ್ತನೆ ಹೆಚ್ಚುತ್ತಿರುವುದನ್ನು ಗಮನಿಸಿ, ಈ ಬಗ್ಗೆ ವಿಶೇಷ ಅಧ್ಯಯನ ನಡೆಸಿ ಹೆಣ್ಣು ಭ್ರೂಣ ಹತ್ಯೆ ನಡೆಯುತ್ತಿರುವುದನ್ನು ಪತ್ತೆ ಹಚ್ಚಿದರು. ಹೆಣ್ಣು ಮಕ್ಕಳನ್ನು ಕೊಂದು ದೇಶದ ಅಭಿವೃದ್ಧಿ ಬೇಕಾ ಎಂದು ಅಂದು ಸೇನ್ ಪ್ರಶ್ನಿಸಿದ್ದರು ಎಂದು ವಿವರಿಸಿದ ದೇವಿ, ಇಂದು ನೀವೆಲ್ಲರೂ ನಿಮ್ಮ ಹೆತ್ತವರಿಗೆ ಕೃತಜ್ಞತೆ ಸಲ್ಲಿಸಬೇಕು ಎಂದು ಕುಳಿತ ಹೆಣ್ಣು ಮಕ್ಕಳನ್ನು ಉದ್ದೇಶಿಸಿ ನುಡಿದರು.

ಭಾರತದಲ್ಲಿ ಎಲ್ಲಾ ಜನರಿಗೂ ಸಮಾನವಾದ ಅವಕಾಶಗಳಿವೆ. ಆದರೆ ಇಂದು ಕೆಲವರಿಗೆ ಇದನ್ನು ನಿರಾಕರಿಸುವ ಪ್ರಯತ್ನ ನಡೆಯುತ್ತಿದೆ. ಇದನ್ನು ವಿದ್ಯಾರ್ಥಿಗಳು ವಿರೋಸಬೇಕು. ಇಂದು ಮಾನವೀಯತೆಯೇ ತೀವ್ರ ಅಪಾಯದಲ್ಲಿದೆ. ವಿದ್ಯಾರ್ಥಿಗಳು ಮನಸ್ಸು ಮಾಡಿದರೆ ಅದನ್ನು ಉಳಿಸಿಕೊಳ್ಳಲು ಸಾಧ್ಯ ಎಂದು ಡಾ.ದೇವಿ ಕಿವಿಮಾತು ಹೇಳಿದರು.

'ಯಾವ ಬೆಲೆ ತೆತ್ತಾದರೂ ಸತ್ಯವನ್ನು ಉಳಿಸಿಕೊಳ್ಳಿ'
ಯಾವುದೇ ಬೆಲೆ ತೆತ್ತಾದರೂ ಸತ್ಯವನ್ನು ಉಳಿಸಿಕೊಳ್ಳಲು ವಿದ್ಯಾರ್ಥಿಗಳು ಮುಂದಾಗಬೇಕಿದೆ. ಆ ಬಗ್ಗೆ ಧೈರ್ಯ ತೋರಿಸಬೇಕಿದೆ. ನಿಮ್ಮ ಸ್ವಂತ ಆಲೋಚನೆ, ವಿಚಾರಗಳಿದ್ದರೆ ಯಾರಿಗೂ ಹೆದರದೇ ಬದುಕಬಹುದು ಎಂದರು.

ನೀವೆಂದೂ ದ್ವೇಷದ ವಾಹಕವಾಗಬೇಡಿ. ದ್ವೇಷಕ್ಕೆ ಮಣೆಹಾಕಬೇಡಿ. ಸಾಮಾಜಿಕ ಮಲಿನಕ್ಕೆ ಅವಕಾಶ ನೀಡಬೇಡಿ. ಸೌಹಾರ್ದ ಸಮಾಜದ ನಿರ್ಮಾಣಕ್ಕೆ ಮುಂದಾಗಿ. ಪ್ರೀತಿ, ವಿಶ್ವಾಸವನ್ನು ಹಂಚಿ. ಇನ್ನೊಬ್ಬರಿಗೆ ಅವಕಾಶ (ಸ್ಪೇಸ್) ನೀಡಿ. ಎಂದರು.

ವಿದ್ಯಾರ್ಥಿಯಾಗಿದ್ದಾಗ ನಾನು ಮೃಗದಂತಿದ್ದೆ. ನನ್ನನ್ನು ಮನುಷ್ಯನನ್ನಾಗಿ ಮಾಡಿದವರು ಕನ್ನಡ ಹಿರಿಯ ಸಾಹಿತಿ ಡಾ.ಶಾಂತಿನಾಥ ದೇಸಾಯಿ. ಅವರು ನನ್ನನ್ನು ತಿದ್ದಿತೀಡಿದವರು. ಆದಿವಾಸಿಗಳ ವಿಶೇಷ ಅಧ್ಯಯನಕ್ಕೆ ನನ್ನನ್ನು ಪ್ರೇರೇಪಿಸಿದವರು ಡಾ.ಯು.ಆರ್.ಅನಂತಮೂರ್ತಿಗಳು. ಇಲ್ಲದಿದ್ದರೆ ನಾನು ಆದಿವಾಸಿಗಳ ನಡುವೆ ಹೋಗುತ್ತಲೇ ಇರಲಿಲ್ಲ. ಡಾ.ಎಂ.ಎಂ.ಕಲಬುರ್ಗಿ ಅವರ ಕೊಲೆಯಾದಾಗ ಧಾರವಾಡಕ್ಕೆ ಬಂದವನು ಈಗ ಆ ನಗರವನ್ನೇ ನನ್ನ ಖಾಯಂ ವಾಸಸ್ಥಾನವಾಗಿ ಮಾಡಿಕೊಂಡಿದ್ದೇನೆ ಎಂದು ಮರಾಠಿ ಮನೆ ಮಾತಿನ, ಇಂದು ಕನ್ನಡವೂ ಸೇರಿದಂತೆ ಹತ್ತಾರು ಭಾಷೆಗಳ ವಿದ್ವಾಂಸರಾಗಿರುವ ಡಾ.ಜಿ.ಎನ್.ದೇವಿ ವಿವರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News