ಹಸಿರು ಜಲಜನಕ, ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಸಹಕಾರಕ್ಕೆ ಭಾರತ-ಇಟಲಿ ಒಪ್ಪಿಗೆ

Update: 2021-10-30 15:34 GMT

ರೋಮ್, ಅ.30: ಹಸಿರು ಜಲಜನಕದ ಅಭಿವೃದ್ಧಿ, ನವೀಕರಿಸಬಹುದಾದ ಇಂಧನಗಳ ಕಾರಿಡಾರ್ ರಚನೆ ಹಾಗೂ ಪ್ರಾಕೃತಿಕ ಅನಿಲ ಕ್ಷೇತ್ರದಲ್ಲಿ ಜಂಟಿ ಯೋಜನೆಗಳನ್ನು ರೂಪಿಸಲು ಭಾರತ ಮತ್ತು ಇಟಲಿ ಒಪ್ಪಿಕೊಂಡಿವೆ ಎಂದು ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ಇಟಲಿ ಪ್ರಧಾನಿ ಮಾರಿಯೊ ಡ್ರಾಗಿಯವರ ಜಂಟಿ ಹೇಳಿಕೆ ತಿಳಿಸಿದೆ.

ಇಂಧನ ಪರಿವರ್ತನೆಯಲ್ಲಿ ಸಹಯೋಗವನ್ನು ಬಲಪಡಿಸಲು ಎರಡೂ ದೇಶಗಳು ಆಸಕ್ತವಾಗಿವೆ. ಇಂಧನ ಪರಿವರ್ತನೆ ಸಂಬಂಧಿ ಕ್ಷೇತ್ರದಲ್ಲಿ ಭಾರತ- ಇಟಲಿ ಸಂಸ್ಥೆಗಳ ಜಂಟಿ ಹೂಡಿಕೆಯನ್ನು ಉಭಯ ಮುಖಂಡರ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಹೇಳಿಕೆ ತಿಳಿಸಿದೆ. ರೋಮ್‌ನಲ್ಲಿ ನಡೆಯುವ ಜಿ20 ಶೃಂಗಸಭೆಯ ನೇಪಥ್ಯದಲ್ಲಿ ಉಭಯ ದೇಶಗಳ ಮುಖಂಡರ ಮಧ್ಯೆ ಪ್ರಥಮ ಬಾರಿ ನಡೆದ ಮುಖಾಮುಖಿ ಸಭೆಯಲ್ಲಿ ಕಾರ್ಯನೀತಿ ಮತ್ತು ನಿಯಂತ್ರಣ ರೂಪರೇಖೆ, ಶುದ್ಧ ಮತ್ತು ವಾಣಿಜ್ಯಿಕವಾಗಿ ಕಾರ್ಯಸಾಧ್ಯವಾದ ಇಂಧನ/ತಂತ್ರಜ್ಞಾನಗಳ ವರ್ಗಾವಣೆಗೆ ಅನುಕೂಲ ಮಾಡಿಕೊಡುವ ಬಗ್ಗೆ, ನವೀಕರಿಸಬಹುದಾದ ಇಂಧನಗಳ ಬಗ್ಗೆ ದೀರ್ಘಾವಧಿಯ ಯೋಜನೆಯಲ್ಲಿ ಪರಸ್ಪರ ಸಹಕಾರ ಸಂಬಂಧಕ್ಕೆ ನಿರ್ಧರಿಸಲಾಗಿದೆ.

 ಭಾರತದಲ್ಲಿ ಹಸಿರು ಜಲಜನಕ(ನವೀಕರಿಸಬಹುದಾದ ಇಂಧನ ಬಳಸಿ ಉತ್ಪಾದಿಸುವ ಜಲಜನಕ) ಹಾಗೂ ಅದಕ್ಕೆ ಸಂಬಂಧಿಸಿದ ತಂತ್ರಜ್ಞಾನಗಳ ಅಭಿವೃದ್ಧಿ ಹಾಗೂ ಅನುಷ್ಟಾನಕ್ಕೆ ನೆರವಾಗುವ ಮಾತುಕತೆ ಆರಂಭಿಸಲು, 2030ರೊಳಗೆ 450 ಜಿಡಬ್ಲುನಷ್ಟು ನವೀಕರಿಸಬಹುದಾದ ಇಂಧನ ಉತ್ಪಾದಿಸುವ ಭಾರತದ ಉದ್ದೇಶಕ್ಕೆ ಪೂರಕವಾಗಿ ಬೃಹತ್ ಹಸಿರು ಕಾರಿಡಾರ್ ಸ್ಥಾಪನೆಗೆ ಉಭಯ ಮುಖಂಡರು ನಿರ್ಧರಿಸಿದ್ದಾರೆ. ಅಲ್ಲದೆ, ಪ್ರಾಕೃತಿಕ ಅನಿಲ ಕ್ಷೇತ್ರದಲ್ಲಿ ಜಂಟಿ ಯೋಜನೆಯ ಅಭಿವೃದ್ಧಿ, ಇಂಗಾಲದ ಪ್ರಮಾಣ ಕಡಿಮೆಗೊಳಿಸುವ ಕುರಿತ ತಾಂತ್ರಿಕ ನಾವೀನ್ಯತೆ, ಸ್ಮಾರ್ಟ್ ಸಿಟಿ, ಗ್ರಾಮೀಣ ಸಾರಿಗೆ ವ್ಯವಸ್ಥೆಯ ವಿದ್ಯುದೀಕರಣ ಮುಂತಾದ ಕ್ಷೇತ್ರದಲ್ಲಿ ಜಂಟಿ ಯೋಜನೆಯನ್ನು ಅಭಿವೃದ್ಧಿಪಡಿಸಲು ಭಾರತ ಮತ್ತು ಇಟಲಿ ಕಂಪೆನಿಗಳ ಜಂಟಿ ಯೋಜನೆಯನ್ನು ನಿರ್ಧರಿಸಲಾಗಿದೆ ಎಂದು ಹೇಳಿಕೆ ತಿಳಿಸಿದೆ.

2017ರ ಅಕ್ಟೋಬರ್ 30ರಂದು ದಿಲ್ಲಿಯಲ್ಲಿ ಇಂಧನ ಕ್ಷೇತ್ರದಲ್ಲಿ ಸಹಕಾರಕ್ಕೆ ಸಂಬಂಧಿಸಿದ ಒಪ್ಪಂದಕ್ಕೆ ಸಹಿ ಹಾಕಿದ ಸಂದರ್ಭ ರೂಪಿಸಲಾಗಿದ್ದ ಜಂಟಿ ಕಾರ್ಯಪಡೆಗೆ ಸ್ಮಾರ್ಟ್ ಸಿಟಿ, ಸ್ಮಾರ್ಟ್ ಗ್ರಿಡ್(ವಿದ್ಯುತ್ ಜಾಲ), ಸಂಚಾರ, ವಿದ್ಯುತ್ ಸರಬರಾಜು ಮತ್ತು ದಾಸ್ತಾನು, ಅನಿಲ ಸಾಗಣೆ, ಪ್ರಾಕೃತಿಕ ಅನಿಲವನ್ನು ಸಂಪರ್ಕ ಇಂಧನವಾಗಿ ಪ್ರೋಸಮಗ್ರ ತ್ಯಾಜ್ಯ ನಿರ್ವಹಣೆ, ಹಸಿರು ಇಂಧನ ಮುಂತಾದ ಕ್ಷೇತ್ರಗಳಲ್ಲಿ ಸಹಕಾರ ಸಂಬಂಧಕ್ಕೆ ಇರುವ ಅವಕಾಶವನ್ನು ಅಧ್ಯುನ ನಡೆಸುವ ಹೊಣೆ ವಹಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News