ಹಸುಗಳನ್ನು ಶುಲ್ಕವಾಗಿ ಸ್ವೀಕರಿಸುತ್ತಿದ್ದ ಕಾಲೇಜನ್ನು ಸಾಲ ಮರು ಪಾವತಿ ಮಾಡದಕ್ಕೆ ಮುಟ್ಟುಗೋಲು ಹಾಕಿದ ಬ್ಯಾಂಕ್!
ಪಾಟ್ನಾ: ಬಿಹಾರದ ಬಕ್ಸಾರ್ ಜಿಲ್ಲೆಯ ಖಾಸಗಿ ಇಂಜಿನಿಯರಿಂಗ್ ಕಾಲೇಜು ವಿಶಿಷ್ಟ ಶುಲ್ಕ ಮಾದರಿಯ ಮೂಲಕ ಜನಪ್ರಿಯವಾಗಿತ್ತು. ಹಳ್ಳಿಯ ಬಡ ವಿದ್ಯಾರ್ಥಿಗಳಿಗೆ ನಾಲ್ಕು ವರ್ಷಗಳ ಬಿಟೆಕ್ ಕೋರ್ಸ್ ಗೆ ಐದು ಹಸುಗಳನ್ನು ನೀಡಬಹುದು ಎಂಬ ಆಯ್ಕೆಯನ್ನು ನೀಡಿದ್ದ ಈ ಕಾಲೇಜನ್ನು ಬ್ಯಾಂಕ್ ಸಾಲವನ್ನು ಮರುಪಾವತಿ ಮಾಡದ ಕಾರಣಕ್ಕಾಗಿ ಮುಟ್ಟುಗೋಲು ಹಾಕಲಾಗಿದೆ ಎಂದು The Indian Express ವರದಿ ಮಾಡಿದೆ.
2010 ರಲ್ಲಿ ಬಕ್ಸಾರ್ ಜಿಲ್ಲೆಯ ಅರಿಯಾನ್ ಗ್ರಾಮದಲ್ಲಿ ವಿದ್ಯಾದಾನ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಆ್ಯಂಡ್ ಮ್ಯಾನೇಜ್ಮೆಂಟ್ (ವಿಐಟಿಎಂ) ಅನ್ನು ಸ್ಥಾಪಿಸಲಾಯಿತು. ಮಾಜಿ ಡಿಆರ್ ಡಿಒ ವಿಜ್ಞಾನಿಗಳಾದ ಎಸ್.ಕೆ. ಸಿಂಗ್ ಹಾಗೂ ಅರುಣ್ ಕುಮಾರ್ ವರ್ಮಾ, ಬೆಂಗಳೂರು ಮೂಲದ ವೈದ್ಯೆ ಮಯೂರಿ ಶ್ರೀವಾಸ್ತವ, ಸಾಮಾಜಿಕ ಕಾರ್ಯಕರ್ತ ಲಾಲ್ ದೇವ್ ಸಿಂಗ್ ಹಾಗೂ ಚಾರ್ಟರ್ಡ್ ಅಕೌಂಟೆಂಟ್ ಪ್ರದೀಪ್ ಗಾರ್ಗ್ ಸೇರಿದಂತೆ ನಿವೃತ್ತ ಹಾಗೂ ಸೇವೆ ಸಲ್ಲಿಸುತ್ತಿರುವ ವೃತ್ತಿಪರರ ಗುಂಪು ಈ ಸಂಸ್ಥೆಯನ್ನು ಆರಂಭಿಸಲು ಕಾರಣರಾಗಿದ್ದರು.
ಪಾಟ್ನಾದ ಆರ್ಯಭಟ್ಟ ಜ್ಞಾನ ವಿಶ್ವವಿದ್ಯಾಲಯಕ್ಕೆ ಸಂಯೋಜಿತವಾಗಿರುವ ಈ ಕಾಲೇಜಿನಲ್ಲಿ ವರ್ಷಕ್ಕೆ ರೂ. 72,000 ವಾರ್ಷಿಕ ಶುಲ್ಕವನ್ನು ಪಾವತಿಸಲು ಸಾಧ್ಯವಾಗದವರಿಗೆ 'ಹಸುಗಳನ್ನು ಶುಲ್ಕವಾಗಿ' ಮಾಡಲಾಗಿತ್ತು. ಮೊದಲ ವರ್ಷದಲ್ಲಿ ಎರಡು ಹಸುಗಳು ಹಾಗೂ ಬಿ.ಟೆಕ್ ನ ನಂತರದ ಮೂರು ವರ್ಷಗಳಲ್ಲಿ ತಲಾ ಒಂದು ಹಸು ನೀಡುವ ಆಯ್ಕೆ ನೀಡಲಾಗಿತ್ತು.
ಇದೀಗ 5.9 ಕೋಟಿ ರೂ. ಸಾಲ ವಸೂಲಾತಿ ಮೊತ್ತದ ಮೇಲೆ ವಿದ್ಯಾ ಸಂಸ್ಥೆಯನ್ನು ಬ್ಯಾಂಕ್ ಮುಟ್ಟುಗೋಲು ಮಾಡುವುದರೊಂದಿಗೆ ಈಗ ಹತ್ತಿರದ ಹಳ್ಳಿಗಳಿಂದ ಬಂದಿರುವ 300 ಕ್ಕೂ ಹೆಚ್ಚು ವಿದ್ಯಾರ್ಥಿಗಳ ಭವಿಷ್ಯವು ಅನಿಶ್ಚಿತವಾಗಿದೆ ಎಂದು ವರದಿಯಾಗಿದೆ.
“ಮಾಜಿ ಡಿಆರ್ ಡಿಒ ವಿಜ್ಞಾನಿಗಳು, ವೈದ್ಯರು ಮತ್ತು ಚಾರ್ಟರ್ಡ್ ಅಕೌಂಟ್ಸ್ ಒಳಗೊಂಡಂತೆ ನಮ್ಮಲ್ಲಿ ಕೆಲವರು ನನ್ನ ಗ್ರಾಮದಲ್ಲಿ ಈ ಸಂಸ್ಥೆಯನ್ನು ತೆರೆಯುವ ಆಲೋಚನೆಯೊಂದಿಗೆ ಬಂದರು. ಇದು ಬಕ್ಸರ್ ಮತ್ತು ವಾರಣಾಸಿ ನಡುವಿನ ಏಕೈಕ ಎಂಜಿನಿಯರಿಂಗ್ ಕಾಲೇಜು. ನಮ್ಮ ಹಸುವಿನ ಪರಿಕಲ್ಪನೆ ತುಂಬಾ ಚೆನ್ನಾಗಿ ಕೆಲಸ ಮಾಡಿದೆ. ಬ್ಯಾಂಕ್ ಆಫ್ ಇಂಡಿಯಾದ ಪಾಟ್ನಾ ಕಾರ್ಪೊರೇಟ್ ಶಾಖೆಯು 2010 ರಲ್ಲಿ ಮೂಲಸೌಕರ್ಯ ಅಭಿವೃದ್ಧಿಗಾಗಿ ಕಾಲೇಜಿಗೆ 4.65 ಕೋಟಿ ರೂ.ಗಳ ಆರಂಭಿಕ ಸಾಲವನ್ನು ನೀಡಿತು. ಅದು ತರುವಾಯ 2011 ರಲ್ಲಿ 10 ಕೋಟಿ ರೂ.ಗಳ ಮತ್ತೊಂದು ಸಾಲವನ್ನು ಮಂಜೂರು ಮಾಡಿತು. ಆದರೆ ಆ ಮೊತ್ತವನ್ನು ವಿತರಿಸಲಿಲ್ಲ. ಕಾಲೇಜು "ಹಣಕಾಸಿನ ಅಡಿಯಲ್ಲಿ ಬಲಿಪಶು" ಆಗಿದೆ ಎಂದು ಕಾಲೇಜನ್ನು ನಡೆಸುತ್ತಿರುವ ವಿದ್ಯಾದಾನ ಸೊಸೈಟಿಯ ವಿಐಟಿಎಂ ಪ್ರವರ್ತಕ ಎಸ್.ಕೆ. ಸಿಂಗ್ The Indian Expressಗೆ ತಿಳಿಸಿದ್ದಾರೆ.