×
Ad

ಮೈನಸ್ 16 ಡಿಗ್ರಿ: ಮೈಕೊರೆಯುವ ಚಳಿಯಲ್ಲೂ ಶೇ.100 ಮತದಾನ!

Update: 2021-10-31 09:45 IST

ಹೊಸದಿಲ್ಲಿ, ಅ.31: ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ವಿಶ್ವದ ಅತಿ ಎತ್ತರದ ಮತಗಟ್ಟೆ ಎನಿಸಿದ ತಾಶಿಗಂಗ್‌ನಲ್ಲಿ ಶನಿವಾರ ಶೇ.100ರಷ್ಟು ಮತದಾನವಾಗಿದೆ. ಸಮುದ್ರ ಮಟ್ಟದಿಂದ 15,256 ಅಡಿ ಎತ್ತರ ಇರುವ ಈ ಮತಗಟ್ಟೆಯಲ್ಲಿ ಮೈನಸ್ 16 ಡಿಗ್ರಿಯಷ್ಟು ಮೈಕೊರೆಯುವ ಚಳಿಯಲ್ಲೂ ಎಲ್ಲ ಅರ್ಹ ಮತದಾರರು ಮತ ಚಲಾಯಿಸಿದರು.

ಭಾರತ-ಟಿಬೆಟ್ ಗಡಿ ಪ್ರದೇಶದಲ್ಲಿರುವ ಸ್ಪಿತಿ ಕಣಿವೆಯ ತಾಶಿಗಂಗ್ ಅತಿ ಎತ್ತರದ ವಸತಿ ಪ್ರದೇಶವೂ ಆಗಿದ್ದು, ಕೇವಲ 47 ಮಂದಿ ಮತದಾರರಿದ್ದಾರೆ.

ಮೈನಸ್ 16 ಡಿಗ್ರಿ ಚಳಿಯಲ್ಲೂ ಸಾಂಪ್ರದಾಯಿಕ ದಿರಿಸಿನೊಂದಿಗೆ ಆಗಮಿಸಿದ ಉತ್ಸಾಹಿ ಮತದಾರರು ತಮ್ಮ ಹಕ್ಕು ಚಲಾಯಿಸಿದರು ಎಂದು ಅಧಿಕಾರಿಗಳು ಹೇಳಿದ್ದಾರೆ. ಮತಗಟ್ಟೆಯ ಅಧ್ಯಕ್ಷಾಧಿಕಾರಿ ಕೂಡಾ ಸ್ಥಿತಿಯ ಸಾಂಪ್ರದಾಯಿಕ ದಿರಿಸಿನಲ್ಲಿ ಆಗಮಿಸಿದ್ದರು. ಮತಗಟ್ಟೆಯಲ್ಲಿ ಮಕ್ಕಳಿಗಾಗಿ ತೊಟ್ಟಿಲು ವ್ಯವಸ್ಥೆ ಮಾಡಲಾಗಿತ್ತು ಹಾಗೂ ಮತದಾರರಿಗೆ ಆಹಾರವನ್ನೂ ವಿತರಿಸಲಾಯಿತು ಎಂದು ಅಧಿಕಾರಿಗಳು ಹೇಳಿದ್ದಾರೆ.

"ನಾನು ಈ ಗ್ರಾಮದವನು. ನಾವೆಲ್ಲರೂ ಮತ ಚಲಾಯಿಸಬೇಕು. ಮತ ಚಲಾಯಿಸುವ ಮೂಲಕ ನಾನು ಪ್ರಜಾಪ್ರಭುತ್ವದಲ್ಲಿ ನನ್ನ ಪಾತ್ರವನ್ನು ನಿರ್ವಹಿಸಿದ್ದೇನೆ" ಎಂದು ಮೊದಲ ಬಾರಿಗೆ ತಾಶಿಗಂಗ್‌ನಲ್ಲಿ ಮತ ಚಲಾಯಿಸುವ ಹಕ್ಕು ಪಡೆದ ತಾಶಿ ಚೊಂಜೊಮ್ ಹೇಳಿದರು.

ಮೊದಲ ಬಾರಿಗೆ ಮತ ಚಲಾಯಿಸಿದ ಲೋಬಾಗಂಜ್ ಐಶ್ ಗ್ರಾಮದ ಮತ್ತೊಬ್ಬ ಮತದಾರ "ಮತದಾನ ತೀರಾ ಪ್ರಮುಖ. ಏಕೆಂದರೆ ಇದು ಪ್ರಜಾಪ್ರಭುತ್ವದ ತಳಹದಿ" ಎಂದು ಅಭಿಪ್ರಾಯಪಟ್ಟಿದ್ದಾರೆ.

ಈ ಹಿಂದೆ 14,400 ಅಡಿ ಎತ್ತರದ ಹಿಕ್ಕಿಮ್ ಮತಗಟ್ಟೆ ಅತಿ ಎತ್ತರದ ಮತಗಟ್ಟೆ ಎಂಬ ಹೆಗ್ಗಳಿಕೆ ಹೊಂದಿತ್ತು. ಆದರೆ 2017ರ ವಿಧಾನಸಭಾ ಚುನಾವಣೆಯ ವೇಳೆ ತಾಂತ್ರಿಕ ಕಾರಣದಿಂದ 160 ಕಿಲೋಮೀಟರ್ ದೂರದ ಈ ಮತಗಟ್ಟೆಯ ಬದಲು ತಾಶಿಗಂಗ್ ಮತಗಟ್ಟೆ ಸ್ಥಾಪಿಸಲಾಗಿತ್ತು.

ಸ್ವತಂತ್ರ ಭಾರತದ ಮೊದಲ ಮತದಾರ 104 ವರ್ಷದ ಶ್ಯಾಮ್ ಶರಣ್ ನೇಗಿ ಕೂಡಾ ಮಂಡಿ ಉಪಚುನಾವಣೆಯಲ್ಲಿ ಹಿಮಾಚಲ ಪ್ರದೇಶದ ಕಿನ್ನೂರು ಜಿಲ್ಲೆಯಲ್ಲಿ ಮತ ಚಲಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News