ಉಚಿತ ಇ-ಶ್ರಮ್ ಕಾರ್ಡ್ ಗೆ 100 ರೂ. ಪಾವತಿಸಿದ್ದೇನೆ ಎಂದು ವೇದಿಕೆಯಲ್ಲೇ ಹೇಳಿದ ಮಹಿಳೆ: ಕೇಂದ್ರ ಸಚಿವರ ಆಕ್ರೋಶ

Update: 2021-11-01 11:34 GMT

ಹೊಸದಿಲ್ಲಿ: ಅಸಂಘಟಿತ ಕಾರ್ಮಿಕರ ರಾಷ್ಟ್ರೀಯ ದತ್ತಸಂಚಯವಾದ ಇ-ಶ್ರಮ್ ಪೋರ್ಟಲ್‌ನಲ್ಲಿ ನೋಂದಾಯಿಸಿದ ನಂತರ ಇ-ಶ್ರಮ್ ಕಾರ್ಡ್ ಪಡೆಯಲು 100 ರೂಪಾಯಿ ಪಾವತಿಸಬೇಕು ಎಂದು ಮಹಿಳಾ ಫಲಾನುಭವಿಯೊಬ್ಬರು ತಿಳಿಸಿದ ನಂತರ ಕೇಂದ್ರ ಕಾರ್ಮಿಕ ಹಾಗೂ  ಉದ್ಯೋಗ ರಾಜ್ಯ ಸಚಿವ ರಾಮೇಶ್ವರ್ ಸಿಡಿಮಿಡಿಗೊಂಡರು ಎಂದು  India Today ವರದಿ ಮಾಡಿದೆ.

ಪಾಟ್ನಾದ ದಶರತ್ ಮಾಂಝಿ ಸಂಸ್ಥೆಯಲ್ಲಿ ರಾಮೇಶ್ವರ್ ತೇಲಿ ಅವರು ಫಲಾನುಭವಿಗಳ ಗುಂಪಿಗೆ ಇ-ಶ್ರಮ್ ಕಾರ್ಡ್‌ಗಳನ್ನು ವಿತರಿಸುತ್ತಿದ್ದಾಗ ಶನಿವಾರ ಈ ಘಟನೆ ನಡೆದಿದೆ. ಫಲಾನುಭವಿಗಳಿಗೆ ಕಾರ್ಡ್‌ಗಳನ್ನು ಉಚಿತವಾಗಿ ನೀಡಲಾಗುವುದು ಎಂದು ಸರಕಾರ ಘೋಷಿಸಿದೆ.

ಪಾಟ್ನಾದ ಮೊಹಮ್ಮದ್‌ಪುರದ ನಿವಾಸಿ ಕಿರಣ್ ದೇವಿ ಎಂಬುವರನ್ನು ರಾಮೇಶ್ವರ್ ತೇಲಿ ಅವರು ಉಚಿತವಾಗಿ ಕಾರ್ಡ್ ಪಡೆದಿದ್ದೀರಾ ಎಂದು ಕೇಳಿದಾಗ, ಕಾರ್ಡ್ ಗೆ 100 ರೂಪಾಯಿ ಕೊಡಬೇಕು ಎಂದು ಹೇಳಿ ಕೇಂದ್ರ ಸಚಿವರಿಗೆ ಅಚ್ಚರಿ ಮೂಡಿಸಿದ್ದಾರೆ.

"ನೀವು ಹಣ ಕೊಟ್ಟಿದ್ದೀರಾ? ಯಾರಿಗೆ ಹಣ ಕೊಟ್ಟಿದ್ದೀರಿ?" ಎಂದು ವೇದಿಕೆಯಲ್ಲಿದ್ದ ಬಿಹಾರ ಕಾರ್ಮಿಕ ಸಚಿವ ಜೀವೇಶ್ ಮಿಶ್ರಾ ಅವರ ಎದುರೇ ರಾಮೇಶ್ವರ್ ತೇಲಿ ಪ್ರಶ್ನಿಸಿದರು.

ರಾಮೇಶ್ವರ್ ತೇಲಿ ಅವರು ಇಡೀ ವಿಷಯದ ಬಗ್ಗೆ ಜೀವೇಶ್ ಮಿಶ್ರಾ ಅವರಿಂದ ವರದಿಯನ್ನು ಕೇಳಿದರು ಹಾಗೂ  ಇ-ಶ್ರಮ್ ಕಾರ್ಡ್‌ಗಳನ್ನು ನೀಡಲು ಹಣ ಸ್ವೀಕರಿಸಿದ್ದರೆ ಪ್ರತಿಯೊಬ್ಬ ವ್ಯಕ್ತಿಗೂ ಆ ಹಣವನ್ನು ಹಿಂತಿರುಗಿಸಬೇಕು ಎಂದು ನಿರ್ದೇಶಿಸಿದರು.

"ನಾನು ನನ್ನ ಗ್ರಾಮದಲ್ಲಿ ಈ ಕಾರ್ಡ್ ಮಾಡಿದ್ದೇನೆ. ಅದಕ್ಕಾಗಿ ನಾನು 100 ರೂ ಪಾವತಿಸಬೇಕಾಗಿತ್ತು. ನಾನು ಈ ಕಾರ್ಡ್ ಮಾಡಿದ ವ್ಯಕ್ತಿಗೆ ಹಣವನ್ನು ನೀಡಿದ್ದೇನೆ" ಎಂದು ಕಾರ್ಯಕ್ರಮದ ಬಳಿಕ ಸುದ್ದಿಗಾರರಿಗೆ ಕಿರಣ್ ದೇವಿ ತಿಳಿಸಿದರು.

ಕೇಂದ್ರ ಸರ್ಕಾರದ ಉಪಕ್ರಮವಾದ ಇ-ಶ್ರಮ್ ಪೋರ್ಟಲ್‌ನಲ್ಲಿ ಅಸಂಘಟಿತ ವಲಯದ ಕಾರ್ಮಿಕರನ್ನು ನೋಂದಾಯಿಸಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News