ಮುಖ್ಯ ಪ್ರವರ್ತಕನಾಗಿ ಅದಾನಿ ಸಂಸ್ಥೆ ನೇಮಕ ವಿರೋಧಿಸಿ ಸಯನ್ಸ್‌ ಮ್ಯೂಸಿಯಂ ಗ್ರೂಪ್‌ ನ ಇಬ್ಬರು ಟ್ರಸ್ಟಿಗಳು ರಾಜಿನಾಮೆ

Update: 2021-11-01 16:44 GMT

ಲಂಡನ್, ನ.1: ಇಂಗ್ಲೆಂಡ್‌ನ ಸಯನ್ಸ್ ಮ್ಯೂಸಿಯಂ ಗ್ರೂಪ್‌ನ ಮುಂಬರುವ ಲ್ಯಾಂಡ್‌ಮಾರ್ಕ್ ಗ್ಯಾಲರಿಯ ಪ್ರಮುಖ ಪ್ರವರ್ತಕ ಸಂಸ್ಥೆಯಾಗಿ ಅದಾನಿ ಗ್ರೀನ್ ಎನರ್ಜಿಯನ್ನು ನೇಮಕ ಮಾಡುವ ನಿರ್ಧಾರವನ್ನು ವಿರೋಧಿಸಿ ಮ್ಯೂಸಿಯಂ ಗ್ರೂಪ್‌ನ ಆಡಳಿತ ಮಂಡಳಿಯ ಇಬ್ಬರು ಟ್ರಸ್ಟಿಗಳು ತಮ್ಮ ರಾಜೀನಾಮೆ ನೀಡಿದ್ದಾರೆ.

ರಾಜೀನಾಮೆ ನೀಡಿದವರಲ್ಲಿ ಲಂಡನ್ ವಿವಿಯ ಸೆಂಟರ್ ಫಾರ್ ಅಡ್ವಾನ್ಸ್ಡ್ ಸ್ಪೇಷಿಯಲ್ ಅನಾಲಿಸಿಸ್ ಇಲ್ಲಿನ ಸಹಾಯಕ ಗಣಿತಶಾಸ್ತ್ರ ಪ್ರೊಫೆಸರ್ ಡಾ.ಹನ್ನಾಹ್ ಫ್ರೈ ಹಾಗೂ ಇನ್‌ಸ್ಟಿಟ್ಯೂಟ್ ಫಾರ್ ರಿಸರ್ಚ್ ಇನ್ ಸ್ಕೂಲ್ಸ್ ಇದರ ನಿರ್ದೇಶಕ ಡಾ. ಜೋ ಫೋಸ್ಟರ್ ಸೇರಿದ್ದಾರೆ.

ಹವಾಮಾನ ಬದಲಾವಣೆಯ ಪರಿಣಾಮಗಳನ್ನು ಕಡಿಮೆಗೊಳಿಸುವ ಉದ್ದೇಶದಿಂದ ಜಗತ್ತು ಪರಿಸರಸ್ನೇಹಿ ಇಂಧನ ಹೆಚ್ಚು ಬಳಕೆ ಮಾಡುವಂತಾಗಲು ಇರುವ ಪರಿಕಲ್ಪನೆಗಳು ಮತ್ತು ತಂತ್ರಜ್ಞಾನ ಅಭಿವೃದ್ಧಿಗಳನ್ನು ಹೊಸ ಗ್ಯಾಲರಿ ಪ್ರಸ್ತುತಪಡಿಸಲಿದೆ.

ಈ ತಿಂಗಳು ಮ್ಯೂಸಿಯಂನಲ್ಲಿ ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್ ಉಪಸ್ಥಿತಿಯಲ್ಲಿ ನಡೆದ ಜಾಗತಿಕ ಹೂಡಿಕೆ ಶೃಂಗ ಸಭೆಯಲ್ಲಿ ಅದಾನಿ ಸಂಸ್ಥೆಯನ್ನು ಮುಖ್ಯ ಪ್ರವರ್ತಕನನ್ನಾಗಿಸುವ ಘೋಷಣೆ ಮಾಡಲಾಗಿತ್ತು.

ಸಾಯನ್ಸ್ ಮ್ಯೂಸಿಯಂ ಗ್ರೂಪ್ ಒಂದು ಸರಕಾರೇತರ ಸಾರ್ವಜನಿಕ ಸಂಸ್ಥೆಯಾಗಿದೆ. ಸಂಸ್ಥೆಯು ಇಂಗ್ಲೆಂಡ್ ಸರಕಾರದ ಸಾಂಸ್ಕೃತಿಕ, ಮಾಧ್ಯಮ ಮತ್ತು ಕ್ರೀಡಾ ಸಚಿವಾಲಯದಿಂದ ಸಹಾಯ ಪಡೆಯುತ್ತಿದೆಯಾದರೂ ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News