ಭಾರತೀಯ ಮುಸ್ಲಿಮರಿಗೆ ಜಿನ್ನಾರೊಂದಿಗೆ ಯಾವುದೇ ಸಂಬಂಧವಿಲ್ಲ: ಅಖಿಲೇಶ್‌ ಗೆ ಉವೈಸಿ ತಿರುಗೇಟು

Update: 2021-11-01 13:36 GMT

ಲಕ್ನೋ: ಭಾರತದ ಸ್ವಾತಂತ್ರ್ಯ ಹೋರಾಟಗಾರರ ಹೆಸರು ಹೇಳುವಾಗ  ಮುಹಮ್ಮದ್ ಅಲಿ ಜಿನ್ನಾ ಅವರ ಹೆಸರನ್ನು ಪ್ರಸ್ತಾವಿಸುವ ಮೂಲಕ ವಿವಾದವನ್ನು ಮೈಮೇಲೆ ಎಳೆದುಕೊಂಡಿರುವ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಗೆ ಎಐಎಂಐಎಂ ನಾಯಕ ಅಸದುದ್ದೀನ್ ಉವೈಸಿ ಅವರು "ಕೆಲವು ಇತಿಹಾಸವನ್ನು ಓದಿಕೊಳ್ಳಿ" ಎಂದು ಸಲಹೆ ನೀಡಿದರು.

"ಸರ್ದಾರ್ ಪಟೇಲ್, ಮಹಾತ್ಮ ಗಾಂಧಿ, ಜವಾಹರಲಾಲ್ ನೆಹರು ಹಾಗೂ  ಜಿನ್ನಾ ಒಂದೇ ಸಂಸ್ಥೆಯಲ್ಲಿ ಕಲಿತು ಬ್ಯಾರಿಸ್ಟರ್‌ಗಳಾದರು. ಅವರು ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದರು. ಅವರು ಯಾವುದೇ ಹೋರಾಟದಿಂದ ಹಿಂದೆ ಸರಿಯಲಿಲ್ಲ" ಎಂದು ಮುಂದಿನ ವರ್ಷದ ಆರಂಭದಲ್ಲಿ ನಡೆಯಲಿರುವ ರಾಜ್ಯ ಚುನಾವಣೆಗಾಗಿ ಉತ್ತರ ಪ್ರದೇಶದ ಹರ್ದೋಯ್‌ನಲ್ಲಿ ನಡೆದ ಸಮಾಜವಾದಿ ಪಕ್ಷದ ರ್ಯಾಲಿಯೊಂದರಲ್ಲಿ ಯಾದವ್ ಹೇಳಿದ್ದರು.

ಜಿನ್ನಾ ಹೆಸರು ಪ್ರಸ್ತಾವ ಚುನಾವಣೆಗೆ ಮುನ್ನ ಯಾದವ್ ಅವರಿಂದ  "ಮುಸ್ಲಿಮರ  ಓಲೈಕೆ" ಎಂದು ಬಿಜೆಪಿ ಆರೋಪಿಸಿತು. ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಇದನ್ನು "ತಾಲಿಬಾನಿ ಮನಸ್ಥಿತಿ" ಎಂದು ಕರೆದರು.

ಹೈದರಾಬಾದ್ ಸಂಸದ ಅಸದುದ್ದೀನ್ ಉವೈಸಿ ಕೂಡ ಈ ಬಗ್ಗೆ ಹರಿಹಾಯ್ದಿದ್ದಾರೆ.

"ಅಖಿಲೇಶ್ ಯಾದವ್ ಅವರು ಇಂತಹ ಹೇಳಿಕೆಗಳನ್ನು ನೀಡುವ ಮೂಲಕ ಒಂದು ವರ್ಗದ ಜನರನ್ನು ಸಂತೋಷಪಡಿಸಬಹುದು ಎಂದು ಭಾವಿಸಿದರೆ ಅದು  ತಪ್ಪು ಎಂದು ನಾನು ಭಾವಿಸುತ್ತೇನೆ ಹಾಗೂ  ಅವರು ತಮ್ಮ ಸಲಹೆಗಾರರನ್ನು ಬದಲಾಯಿಸಬೇಕು. ಅವರು  ಸ್ವತಃ ಶಿಕ್ಷಣ ಪಡೆಯಬೇಕು ಹಾಗೂ ಇತಿಹಾಸವನ್ನು ಓದಬೇಕು. ಭಾರತೀಯ ಮುಸ್ಲಿಮರಿಗೆ ಮುಹಮ್ಮದ್ ಅಲಿ ಜಿನ್ನಾ ಅವರೊಂದಿಗೆ ಯಾವುದೇ ಸಂಬಂಧವಿಲ್ಲ ಎಂಬುದನ್ನು ಅಖಿಲೇಶ್ ಯಾದವ್ ಅರ್ಥ ಮಾಡಿಕೊಳ್ಳಬೇಕು. ನಮ್ಮ ಹಿರಿಯರು ಎರಡು ರಾಷ್ಟ್ರಗಳ ಸಿದ್ಧಾಂತವನ್ನು ತಿರಸ್ಕರಿಸಿದರು ಹಾಗೂ  ಭಾರತವನ್ನು ತಮ್ಮ ದೇಶವಾಗಿ ಆಯ್ಕೆ ಮಾಡಿದರು’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News