ವಿಶ್ವಕಪ್:ಸತತ ನಾಲ್ಕನೇ ಪಂದ್ಯವನ್ನು ಜಯಿಸಿದ ಇಂಗ್ಲೆಂಡ್

Update: 2021-11-01 18:13 GMT
photo: ICC

ಶಾರ್ಜಾ, ನ.1: ಆರಂಭಿಕ ಬ್ಯಾಟ್ಸ್ ಮನ್ ಜೋಸ್ ಬಟ್ಲರ್ ಆಕರ್ಷಕ ಶತಕ ಹಾಗೂ ಮೊಯಿನ್ ಅಲಿ ನೇತೃತ್ವದ ಬೌಲರ್ ಗಳ ಸಾಂಘಿಕ ಪ್ರದರ್ಶನದ ನೆರವಿನಿಂದ ಇಂಗ್ಲೆಂಡ್ ತಂಡ ಶ್ರೀಲಂಕಾ ವಿರುದ್ಧದ ಟ್ವೆಂಟಿ-20 ವಿಶ್ವಕಪ್ ನ ಸೂಪರ್-12 ಪಂದ್ಯವನ್ನು 26 ರನ್ ಗಳ ಅಂತರದಿಂದ ಗೆದ್ದುಕೊಂಡಿದೆ. ಈ ಮೂಲಕ ಟೂರ್ನಿಯಲ್ಲಿ ಸತತ 4ನೇ ಗೆಲುವನ್ನು ಪಡೆದು ಒಟ್ಟು 8 ಅಂಕ ಗಳಿಸಿ ಗ್ರೂಪ್-1ರಲ್ಲಿ ಅಗ್ರ ಸ್ಥಾನವನ್ನು ಕಾಯ್ದುಕೊಂಡಿದೆ. ಸೆಮಿ ಫೈನಲ್ ತಲುಪುವ ಹಾದಿಯಲ್ಲಿದೆ.

ಸೋಮವಾರ ನಡೆದ  ಪಂದ್ಯದಲ್ಲಿ ಗೆಲ್ಲಲು 164 ರನ್ ಗುರಿ ಪಡೆದ ಶ್ರೀಲಂಕಾವು 19 ಓವರ್ ಗಳಲ್ಲಿ 137 ರನ್ ಗಳಿಸಿ ಆಲೌಟಾಯಿತು. ಲಂಕಾದ ಪರವಾಗಿ ವನಿಂದು ಹಸರಂಗ(34) ಗರಿಷ್ಠ ಸ್ಕೋರ್ ಗಳಿಸಿದರು. ಭಾನುಕಾ ರಾಜಪಕ್ಸ(26), ದಸುನ್ ಶನಕ(26) ಹಾಗೂ ಚರಿತ್ ಅಸಲಂಕ(21) ಎರಡಂಕೆಯ ಸ್ಕೋರ್ ಗಳಿಸಿದರು.

ಇಂಗ್ಲೆಂಡ್ ಪರ ಅಲಿ(2-15), ಆದಿಲ್ ರಶೀದ್(2-19), ಕ್ರಿಸ್ ಜೋರ್ಡನ್(2-24)ತಲಾ ಎರಡು ವಿಕೆಟ್ ಗಳನ್ನು ಪಡೆದರು. ಕ್ರಿಸ್ ವೋಕ್ಸ್(1-25) ಹಾಗೂ ಲಿಯಾಮ್ ಲಿವಿಂಗ್ ಸ್ಟೋನ್(1-34) ತಲಾ 1 ವಿಕೆಟ್ ಪಡೆದರು.

ಶತಕ ಸಿಡಿಸಿದ ಬಟ್ಲರ್ ಪಂದ್ಯಶ್ರೇಷ್ಟ ಪ್ರಶಸ್ತಿ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News