ಭಾರತಕ್ಕೆ ಮುಂದಿನ ದಾರಿ ಯಾವುದು?

Update: 2021-11-01 18:27 GMT

ದುಬೈ, ನ. 1: ದುಬೈನಲ್ಲಿ ರವಿವಾರ ಭಾರತ ಮತ್ತು ನ್ಯೂಝಿಲ್ಯಾಂಡ್ ಕ್ರಿಕೆಟ್ ತಂಡಗಳ ನಡುವೆ ನಡೆದ ಐಸಿಸಿ ಟ್ವೆಂಟಿ-20 ವಿಶ್ವಕಪ್ ಪಂದ್ಯವು ಯತಾರ್ಥ ಕ್ವಾರ್ಟರ್ ಫೈನಲ್ ಪಂದ್ಯವಾಗಿತ್ತು. ದುರದೃಷ್ಟವಶಾತ್ ಭಾರತ ಈ ಪಂದ್ಯವನ್ನು 8 ವಿಕೆಟ್‌ಗಳಿಂದ ಸೋತಿತ್ತು. ಇದಕ್ಕಿಂತ ಒಂದು ವಾರದ ಮೊದಲು ಭಾರತವು ತನ್ನ ಆರಂಭಿಕ ವಿಶ್ವಕಪ್ ಪಂದ್ಯವನ್ನು ಪಾಕಿಸ್ತಾನದ ವಿರುದ್ಧ 10 ವಿಕೆಟ್‌ಗಳಿಂದ ಸೋತಿತ್ತು.

ಹಾಲಿ ವಿಶ್ವಕಪ್‌ನಲ್ಲಿ ಸೂಪರ್ 12ರ ಎರಡು ಗುಂಪುಗಳಿಂದ ತಲಾ ಎರಡು ತಂಡಗಳು ಸೆಮಿಫೈನಲ್‌ಗೆ ಹೋಗುವ ಅರ್ಹತೆಯನ್ನು ಪಡೆಯಲಿವೆ. ಭಾರತ ಇರುವ ಗುಂಪು 2ರಲ್ಲಿ ಈಗಾಗಲೇ ಮೂರು ಪಂದ್ಯಗಳನ್ನು ಗೆದ್ದಿರುವ ಪಾಕಿಸ್ತಾನ 6 ಅಂಕಗಳೊಂದಿಗೆ ಅಗ್ರ ಸ್ಥಾನದಲ್ಲಿದ್ದು ಸೆಮಿಫೈನಲ್‌ಗೆ ತಲುಪುವುದು ನಿಶ್ಚಿತವಾಗಿದೆ. ಪಾಕಿಸ್ತಾನದ ವಿರುದ್ಧ ಸೋತು, ಭಾರತದ ವಿರುದ್ಧ ಗೆದ್ದಿರುವ ನ್ಯೂಝಿಲ್ಯಾಂಡ್ 2 ಅಂಕಗಳನ್ನು ಹೊಂದಿದೆ. ಪಾಕಿಸ್ತಾನದ ವಿರುದ್ಧ ಸೋತು ಸ್ಕಾಟ್ಲೆಂಡ್ ಮತ್ತು ನಮೀಬಿಯ ವಿರುದ್ಧ ಗೆದ್ದಿರುವ ಅಫ್ಘಾನಿಸ್ತಾನ 4 ಅಂಕಗಳನ್ನು ಹೊಂದಿದೆ. ಭಾರತ ತನ್ನ ಖಾತೆಯನ್ನು ಇನ್ನಷ್ಟೇ ಆರಂಭಿಸಬೇಕಿದೆ.

ಹಾಗಾದರೆ, ಇನ್ನು ಭಾರತಕ್ಕೆ ಸೆಮಿಫೈನಲ್‌ಗೆ ತೇರ್ಗಡೆಯಾಗುವ ಯಾವುದಾದರೂ ಅವಕಾಶವಿದೆಯೇ?

ಅವಕಾಶವಂತೂ ಇದೆ. ಭಾರತವು ಸ್ಕಾಟ್ಲೆಂಡ್, ನಮೀಬಿಯ ಮತ್ತು ಅಫ್ಘಾನಿಸ್ತಾನಗಳ ವಿರುದ್ಧದ ತನ್ನ ಮುಂದಿನ ಎಲ್ಲ ಮೂರು ಪಂದ್ಯಗಳನ್ನು ಗೆಲ್ಲಬೇಕು. ಅದೇ ವೇಳೆ, ನ್ಯೂಝಿಲ್ಯಾಂಡ್ ಕೂಡ ಇವೇ ತಂಡಗಳ ವಿರುದ್ಧ ತನ್ನ ಉಳಿದ ಮೂರು ಪಂದ್ಯಗಳನ್ನು ಆಡಲಿದೆ. ಈ ಪೈಕಿ ಇದ್ದುದರಲ್ಲಿ ಬಲಿಷ್ಠವೆಂದು ಪರಿಗಣಿಸಲ್ಪಟ್ಟಿರುವ ಅಫ್ಘಾನಿಸ್ತಾನವು ನ್ಯೂಝಿಲ್ಯಾಂಡ್ ತಂಡವನ್ನು ಸೋಲಿಸಿದರೆ ಭಾರತದ ಸೆಮಿಫೈನಲ್ ಆಸೆ ಜೀವಂತವಾಗಿರುತ್ತದೆ.

ನಮೀಬಿಯ ಮತ್ತು ಸ್ಕಾಟ್ಲೆಂಡ್ ವಿರುದ್ಧದ ತನ್ನ ಪಂದ್ಯಗಳನ್ನು ನ್ಯೂಝಿಲ್ಯಾಂಡ್ ಗೆದ್ದರೂ, ಆಗ ಭಾರತ ಮತ್ತು ನ್ಯೂಝಿಲ್ಯಾಂಡ್‌ಗಳು ತಲಾ 6 ಅಂಕಗಳೊಂದಿಗೆ ಸಮಬಲವಾಗಿರುತ್ತವೆ. ಆಗ ನೆಟ್‌ ರನ್‌ರೇಟ್ ಆಧಾರದಲ್ಲಿ ಭಾರತ ಸೆಮಿಫೈನಲ್ ತಲುಪಬಹುದು. ಯಾಕೆಂದರೆ ತನ್ನ ಸೂಪರ್ 12 ಹಂತದ ಕೊನೆಯ ಪಂದ್ಯವನ್ನು ಭಾರತ ನಮೀಬಿಯ ವಿರುದ್ಧ ಆಡಲಿದೆ. ಆ ಪಂದ್ಯದಲ್ಲಿ ತನ್ನ ನೆಟ್ ರನ್‌ರೇಟನ್ನು ಹೆಚ್ಚಿಸುವ ಅವಕಾಶವೊಂದು ಭಾರತಕ್ಕೆ ಇದೆ.

ಆದರೆ, ಅಫ್ಘಾನಿಸ್ತಾನಕ್ಕೆ ನ್ಯೂಝಿಲ್ಯಾಂಡ್ ತಂಡವನ್ನು ಸೋಲಿಸಲು ಸಾಧ್ಯವಾಗಬಹುದೇ? ಸಾಧ್ಯವಾಗಬಹುದು! ಯಾಕೆಂದರೆ ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಅಫ್ಘಾನಿಸ್ತಾನವು ಗೆಲುವಿನ ಸನಿಹಕ್ಕೆ ಬಂದಿತ್ತು. ಆದರೆ 19ನೇ ಓವರ್‌ನಲ್ಲಿ ಅಸಿಫ್ ಅಲಿಯ ನಾಲ್ಕು ಸಿಕ್ಸರ್‌ಗಳು ಜಯವನ್ನು ಅದರಿಂದ ಕಸಿದುಕೊಂಡವು.

ಆದರೆ, ನ್ಯೂಝಿಲ್ಯಾಂಡ್‌ನ್ನು ಸೋಲಿಸಲು ಅಫ್ಘಾನಿಸ್ತಾನಕ್ಕೆ ಸಾಧ್ಯವಾಗಬಹುದಾದರೆ ಅದು ಭಾರತವನ್ನೂ ಸೋಲಿಸಬಹುದಾಗಿದೆ ಹಾಗೂ ತಾನೇ ಸೆಮಿಫೈನಲ್ ತಲುಪಬಹುದಾಗಿದೆ!

ನ್ಯೂಝಿಲ್ಯಾಂಡ್ ವಿರುದ್ಧದ ಸೋಲು ಭಾರತವನ್ನು ಲೀಗ್ ಹಂತದ ನಿರ್ಗಮನದತ್ತ ದೂಡಿದೆ.

ಪಾಕಿಸ್ತಾನ ಈಗಾಗಲೇ ಬಲಿಷ್ಠವೆಂದು ಪರಿಗಣಿಸಲ್ಪಟ್ಟಿರುವ ತಂಡಗಳನ್ನು ಸೋಲಿಸಿದೆ ಹಾಗೂ ಇನ್ನುಳಿದ ಎರಡು ದುರ್ಬಲವೆಂದು ಪರಿಗಣಿಸಲ್ಪಟ್ಟಿರುವ ತಂಡಗಳ (ನಮೀಬಿಯ, ಸ್ಕಾಟ್ಲೆಂಡ್) ವಿರುದ್ಧ ಸುಲಭ ಜಯದ ನಿರೀಕ್ಷೆಯಲ್ಲಿದೆ. ಸೂಪರ್ 12 ಹಂತದ ಆರು ತಂಡಗಳ ಗುಂಪು 2ರಲ್ಲಿ ಭಾರತ ಈಗ ಐದನೇ ಸ್ಥಾನದಲ್ಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News