×
Ad

ಕಪಿಲ್‌ ಮಿಶ್ರಾ ವಿರುದ್ಧ ದೂರು ನೀಡಿದ್ದಕ್ಕೆ ವಜಾಗೊಂಡಿದ್ದ ಅಧಿಕಾರಿಯನ್ನು ಮರುನೇಮಿಸಿದ ರಾಷ್ಟ್ರಪತಿ

Update: 2021-11-02 13:56 IST

ಹೊಸದಿಲ್ಲಿ: ಪ್ರಚೋದನಾತ್ಮಕವಾಗಿದೆ ಎಂದು ತಿಳಿಯಲಾದ ವೀಡಿಯೋವೊಂದನ್ನು ಶೇರ್ ಮಾಡಿದ್ದಕ್ಕಾಗಿ ರಾಜಕಾರಣಿ ಕಪಿಲ್ ಮಿಶ್ರಾ ವಿರುದ್ಧ ದೂರಿದ್ದಕ್ಕಾಗಿ 2019ರಲ್ಲಿ  ವಜಾಗೊಂಡಿದ್ದ  ಟೆಲಿಕಮ್ಯುನಿಕೇಶನ್ಸ್ ಇಲಾಖೆಯ ಅಧಿಕಾರಿ ಆಶಿಷ್ ಜೋಷಿ ಅವರ ವಜಾ ಆದೇಶವನ್ನು ರಾಷ್ಟ್ರಪತಿ ರಾಮ ನಾಥ್ ಕೋವಿಂದ್ ವಾಪಸ್ ಪಡೆದ ನಂತರ ಆ ಅಧಿಕಾರಿ ಈಗ ಮತ್ತೆ ತಮ್ಮ ಹಿಂದಿನ ಹುದ್ದೆಯಲ್ಲಿ ಪುನಃಸ್ಥಾಪನೆಗೊಂಡಿದ್ದಾರೆ.

2019ರಲ್ಲಿ ಆಗ ಆಮ್ ಆದ್ಮಿ ಪಕ್ಷದ ನಾಯಕರಾಗಿದ್ದ ಕಪಿಲ್ ಮಿಶ್ರಾ ಪೋಸ್ಟ್ ಮಾಡಿದ್ದ `ಪ್ರಚೋದನಾತ್ಮಕ' ವೀಡಿಯೋ ಕುರಿತಂತೆ ಜೋಷಿ ಅವರು ದಿಲ್ಲಿ ಪೊಲೀಸ್ ಆಯುಕ್ತರಿಗೆ ದೂರಿದ್ದರು.

"ದೇಶದ್ರೋಹಿಗಳ ವಿರುದ್ಧ ಯುದ್ಧ ಸಾರುವುದಾಗಿ ಅವರನ್ನು ಅವರ ಮನೆಗಳಿಂದ ಬೀದಿಗೆಳೆಯುವುದಾಗಿ" ಹೇಳುವ ಕವನವೊಂದನ್ನು ತಾವು ವಾಚಿಸುವ ವೀಡಿಯೋವನ್ನು ಮಿಶ್ರಾ ಫೆಬ್ರವರಿ 24,2019ರಂದು ಟ್ವಿಟ್ಟರ್‍ನಲ್ಲಿ ಪೋಸ್ಟ್ ಮಾಡಿದ್ದರು.

ಈ ಕವನದಲ್ಲಿ ದೇಶ್ರೋಹಿಗಳೆಂದು ಅವರು ಪತ್ರಕರ್ತೆ ಬರ್ಖಾ ದತ್ತ್, ಹೋರಾಟಗಾರರಾದ ಕವಿತಾ ಕೃಷ್ಣನ್, ಶೆಹ್ಲಾ ರಶೀದ್, ರಾಜಕಾರಣಿ ನವಜೋತ್ ಸಿಂಗ್ ಸಿದ್ದು ಹಾಗೂ ನಟ ನಾಸಿರುದ್ದೀನ್ ಶಾ ಅವರನ್ನು ಹೆಸರಿಸಿದ್ದರು. ಹಲವರು ಈ ವೀಡಿಯೋ ಕುರಿತು ಆಕ್ಷೇಪಿಸಿದ ನಂತರ ಟ್ವಿಟ್ಟರ್ ಅದನ್ನು ತೆಗೆದು ಹಾಕಿತ್ತು.

ಈ ವೀಡಿಯೋ ಕುರಿತು ತಮ್ಮ ಕಳವಳ ವ್ಯಕ್ತಪಡಿಸಿ ಆಗ ಡೆಹ್ರಾಡೂನ್‍ನಲ್ಲಿ ಕಂಟ್ರೋಲರ್ ಆಫ್ ಕಮ್ಯುನಿಕೇಶನ್ಸ್ ಆಗಿದ್ದ  ಜೋಷಿ ಅವರು ಆಗಿನ ದಿಲ್ಲಿ ಪೊಲೀಸ್ ಆಯುಕ್ತ ಅಮೂಲ್ಯ ಪಟ್ನಾಯಕ್ ಅವರಿಗೆ ಪತ್ರ ಬರೆದಿದ್ದರು.

ಜೋಷಿ ಅವರು ಬರೆದ ಪತ್ರ ಕೂಡ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡ ನಂತರ ಟ್ವೀಟ್ ಮಾಡಿದ ಮಿಶ್ರಾ ಆ ಐಎಎಸ್ ಅಧಿಕಾರಿಯನ್ನು ವಜಾಗೊಳಿಸಲಾಗಿದೆ ಎಂದು ತಿಳಿಸಿದ್ದರು. ದೂರು ನೀಡಲು ಅಧಿಕೃತ ಲೆಟರ್‍ಹೆಡ್ ಅನ್ನು ದುರ್ಬಳಕೆ ಮಾಡಿದ್ದಾರೆಂಬ ಆರೋಪವನ್ನೂ ಅವರ ಮೇಲೆ ಹೊರಿಸಲಾಗಿತ್ತು.

ಕಪಿಲ್ ಮಿಶ್ರಾ ಮುಂದೆ ಆಪ್ ದೊರೆದು ಬಿಜೆಪಿ ಸೇರಿ ಆ ಪಕ್ಷದಲ್ಲಿರುವಾಗಲೂ ಹಲವಾರು ಪ್ರಚೋದನಾತ್ಮಕ ಹೇಳಿಕೆಗಳನ್ನು ನೀಡಿ ವಿವಾದಕ್ಕೀಡಾಗಿರುವುದನ್ನು ಇಲ್ಲಿ ಸ್ಮರಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News