ತೈಲ, ಎಲ್‍ಪಿಜಿ ಬೆಲೆಯೇರಿಕೆಯಿಂದ ಜನಾಕ್ರೋಶ: ಕೇಂದ್ರ ಸಚಿವರಿಗೆ ಬಿಜೆಪಿ ನಾಯಕನ ಪತ್ರ

Update: 2021-11-02 12:10 GMT
Photo: Twitter

ಲಕ್ನೋ: ಹಿರಿಯ ಬಿಜೆಪಿ ನಾಯಕ ಹಾಗೂ ಉತ್ತರ ಪ್ರದೇಶ ಕಾರ್ಮಿಕ ಕಲ್ಯಾಣ ಮಂಡಳಿಯ ಅಧ್ಯಕ್ಷ ಪಂಡಿತ್ ಸುನೀಲ್ ಭರಾಲ ಅವರು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಅವರಿಗೆ ಬರೆದು ಪೆಟ್ರೋಲಿಯಂ ಉತ್ಪನ್ನಗಳ ಬೆಲೆಯೇರಿಕೆಯಿಂದ ಜನತೆ ಭ್ರಮನಿರಸನಗೊಂಡಿದ್ದಾರೆಂಬುದನ್ನು ವಿವರಿಸಿದ್ದಾರೆ.

ಎಲ್‍ಪಿಜಿ ದರ ಏರಿಕೆಗಳ ಕುರಿತು ಜನರಲ್ಲಿ ಇರುವ ಆಕ್ರೋಶದತ್ತವೂ ತಮ್ಮ ಪತ್ರದಲ್ಲಿ ಸುನೀಲ್ ಭರಾಲ ಅವರು ಕೇಂದ್ರದ ಗಮನ ಸೆಳೆದಿದ್ದಾರೆ.

ಕಳೆದ ಒಂದೂವರೆ ವರ್ಷಗಳಿಂದ ಮೋದಿ ಸರಕಾರ ಡೀಸೆಲ್ ಬೆಲೆಗಳನ್ನೂ ರೂ 27ರಷ್ಟು ಏರಿಕೆ ಮಾಡಿದೆ, ಕಳೆದ ಕೆಲ ದಿನಗಳಿಂದ ತೈಲ ಬೆಲೆಗಳಲ್ಲಿ ಏರಿಕೆ, ಮೋದಿ ಸರಕಾರದ ಜನಪ್ರಿಯತೆಯನ್ನು ಕುಗ್ಗಿಸಿದೆ ಎಂದು ವಿವರಿಸಿದ ಅವರು "ಪೆಟ್ರೋಲ್, ಡೀಸೆಲ್ ಮತ್ತು ಎಲ್‍ಪಿಜಿ ಬೆಲೆಗಳನ್ನು ಕಡಿಮೆಗೊಳಿಸಿ ಜನಸಾಮಾನ್ಯರ ಮೇಲಿನ ಆರ್ಥಿಕ ಹೊರೆಯನ್ನು ತಗ್ಗಿಸಬೇಕು" ಎಂದು ಕೋರಿದ್ದಾರೆ.

ತೈಲ ಬೆಲೆಗಳನ್ನು ನಿಯಂತ್ರಿಸಲು ಮೋದಿ ಸರಕಾರ ವಿಫಲವಾದರೆ ಅದರ ಪರಿಣಾಮವನ್ನು ಮುಂದಿನ ವಿಧಾನಸಭಾ ಚುನಾವಣೆಗಳಲ್ಲಿ ಪಕ್ಷ ಎದುರಿಸಬೇಕಿದೆ ಎಂದು ಅವರು ಮಾಧ್ಯಮ ಸಂಸ್ಥೆಯೊಂದರ ಜತೆ ಮಾತನಾಡುತ್ತ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News