×
Ad

ವಾಂಖೆಡೆ ಎರಡು ಲಕ್ಷ ರೂ. ಮೌಲ್ಯದ ಶೂಗಳನ್ನು ಧರಿಸುತ್ತಾರೆ: ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್

Update: 2021-11-02 21:12 IST

ಮುಂಬೈ,ನ.2: ಆರ್ಯನ್ ಖಾನ್ ಡ್ರಗ್ಸ್ ಪ್ರಕರಣದ ತನಿಖೆಯನ್ನು ನಡೆಸುತ್ತಿರುವ ಎನ್‌ಸಿಬಿ ಅಧಿಕಾರಿ ಸಮೀರ್ ವಾಂಖೆಡೆ ವಿರುದ್ಧ ದಾಳಿಯನ್ನು ಇನ್ನಷ್ಟು ತೀವ್ರಗೊಳಿಸಿರುವ ಮಹಾರಾಷ್ಟ್ರದ ಸಚಿವ ಹಾಗೂ ಎನ್‌ಸಿಪಿ ನಾಯಕ ನವಾಬ್ ಮಲಿಕ್ ಅವರು,ವಾಂಖೆಡೆ ಎರಡು ಲಕ್ಷ ರೂ.ಮೌಲ್ಯದ ಶೂಗಳನ್ನು ಧರಿಸುತ್ತಾರೆ,ಅವರ ಉಡುಪುಗಳೂ ತೀರ ದುಬಾರಿ ಬೆಲೆಯದ್ದಾಗಿವೆ ಎಂದು ಮಂಗಳವಾರ ಆರೋಪಿಸಿದ್ದಾರೆ.

ವಾಂಖೆಡೆಯವರ ಸೋದರಿ ಯಾಸ್ಮೀನ್ ವಾಂಖೆಡೆ ಜೈಲಿನಲ್ಲಿರುವ ಮಾದಕದ್ರವ್ಯ ಕಳ್ಳಸಾಗಣೆದಾರನೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂದೂ ಅವರು ಆರೋಪಿಸಿದ್ದಾರೆ. ಇದೇ ವೇಳೆ ಸುಳ್ಳು ಆರೋಪಗಳನ್ನು ಮಾಡುತ್ತಿರುವುದಕ್ಕಾಗಿ ಮಲಿಕ್ ಅವರನ್ನು ತರಾಟೆಗೆತ್ತಿಕೊಂಡಿರುವ ವಾಂಖೆಡೆ,ಅವರಿಗೆ ಜ್ಞಾನದ ಕೊರತೆಯಿದೆ ಎಂದು ಕುಟುಕಿದ್ದಾರೆ.

ಡ್ರಗ್ಸ್ ಮಾರಾಟಗಾರ ಸಲ್ಮಾನ್ ಎಂಬಾತ ತನ್ನ ಪರ ವಕಾಲತ್ ವಹಿಸುವಂತೆ ಕೋರಿ ನ್ಯಾಯವಾದಿಯಾಗಿರುವ ನನ್ನ ಸೋದರಿ ಯಾಸ್ಮೀನ್‌ರನ್ನು ಸಂಪರ್ಕಿಸಿದ್ದ,ಆದರೆ ತಾನು ಮಾದಕ ದ್ರವ್ಯ ಕಾಯ್ದೆಯಡಿಯ ಪ್ರಕರಣಗಳನ್ನು ವಹಿಸಿಕೊಳ್ಳುವುದಿಲ್ಲ ಎಂದು ಯಾಸ್ಮೀನ್ ಆತನಿಗೆ ಸ್ಪಷ್ಟಪಡಿಸಿದ್ದರು. ಸಲ್ಮಾನ್ ಮಧ್ಯವರ್ತಿಯೋರ್ವನ ಮೂಲಕ ನಮ್ಮನ್ನು ಬಲೆಯಲ್ಲಿ ಬೀಳಿಸಲು ಪ್ರಯತ್ನಿಸಿದ್ದ.

ಆತನನ್ನು ಬಂಧಿಸಲಾಗಿದ್ದು,ಜೈಲಿನಲ್ಲಿದ್ದಾನೆ. ಆತನ ವಾಟ್ಸ್‌ಆ್ಯಪ್ ಚಾಟ್‌ಗಳನ್ನು ಹಂಚಿಕೊಳ್ಳುವ ಮೂಲಕ ನಮ್ಮ ವಿರುದ್ಧ ಸುಳ್ಳು ಆರೋಪಗಳನ್ನು ಹೊರಿಸಲಾಗುತ್ತಿದೆ’ ಎಂದು ವಾಂಖೆಡೆಯವರನ್ನು ಉಲ್ಲೇಖಿಸಿ ಸುದ್ದಿಸಂಸ್ಥೆಯು ವರದಿ ಮಾಡಿದೆ.

ಮಲಿಕ್ ಮಂಗಳವಾರ ಬೆಳಗ್ಗೆ ಯಾಸ್ಮೀನ್ ಮತ್ತು ಅಪರಿಚಿತ ಫೋನ್ ಸಂಖ್ಯೆ ನಡುವಿನ ವಾಟ್ಸ್‌ಆ್ಯಪ್ ಚಾಟ್‌ಗಳನ್ನು ಶೇರ್ ಮಾಡಿಕೊಂಡಿದ್ದರು. ಯಾಸ್ಮೀನ್ ತನ್ನ ಬಿಸಿನೆಸ್ ಕಾರ್ಡ್ ಮತ್ತು ಕಚೇರಿಯ ವಿಳಾಸವನ್ನು ಹಂಚಿಕೊಂಡಿದ್ದನ್ನು ಈ ಚಾಟ್‌ಗಳು ತೋರಿಸಿದ್ದವು.ಸುದ್ದಿಗಾರರೊಂದಿಗೆ ಮಾತನಾಡಿದ ಮಲಿಕ್,‘ನಾನು ನಿಮ್ಮಂದಿಗೆ ವಾಟ್ಸ್‌ಆ್ಯಪ್ ಚಾಟ್‌ವೊಂದನ್ನು ಹಂಚಿಕೊಳ್ಳುತ್ತಿದ್ದೇನೆ.

ಈ ಚಾಟ್‌ಗಳಲ್ಲಿ ‘ಲೇಡಿ ಡಾನ್’ ಯಾಸ್ಮೀನ್ ವಾಂಖೆಡೆ ಮಾದಕ ದ್ರವ್ಯಗಳಿಗೆ ಸಂಬಂಧಿಸಿದಂತೆ ಬಂಧಿಸಲ್ಪಟ್ಟಿರುವ ವ್ಯಕ್ತಿಯೊಂದಿಗೆ ಮಾತನಾಡಿದ್ದಾರೆ. ಅವರು ತನ್ನ ಬಿಸಿನೆಸ್ ಕಾರ್ಡ್ ಮತ್ತು ಕಚೇರಿ ವಿಳಾಸವನ್ನು ಹಂಚಿಕೊಂಡಿದ್ದಾರೆ. ಎನ್‌ಸಿಬಿ ಅಧಿಕಾರಿಯ ಸೋದರಿ ಮಾದಕ ದ್ರವ್ಯ ಆರೋಪಿಯೊಂದಿಗೆ ಮಾತನಾಡಲು ಕಾರಣವೇನು? ಇದು ಖಾಸಗಿ ಪಡೆಯ ಆಟವಾಗಿದೆ.

 ವಾಂಖೆಡೆ ಜನರನ್ನು ಮಾದಕ ದ್ರವ್ಯ ಆರೋಪಗಳಲ್ಲಿ ಸಿಲುಕಿಸಲು ಮತ್ತು ಹಫ್ತಾ ವಸೂಲಿ ಮಾಡಲು ‘ಖಾಸಗಿ ಪಡೆ’ಯನ್ನು ಹೊಂದಿದ್ದಾರೆ. ‘ಲೇಡಿ ಡಾನ್’ ಕೂಡ ಇದರೊಂದಿಗೆ ಗುರುತಿಸಿಕೊಂಡಿದ್ದಾರೆ’ಎಂದು ಹೇಳಿದ್ದರು.

 ‘ಮಾದಕ ದ್ರವ್ಯ ಮಧ್ಯವರ್ತಿ ನಮ್ಮನ್ನು ಸಿಲುಕಿಸಲು ಪ್ರಯತ್ನಿಸಿದ್ದ. ಈ ವರ್ಷದ ಆರಂಭದಲ್ಲಿ ಆತ ಮುಂಬೈ ಪೊಲೀಸರಿಗೆ ಸುಳ್ಳು ದೂರನ್ನು ಸಲ್ಲಿಸಿದ್ದ,ಅದರೆ ಅದರಿಂದೇನೂ ಆಗಿರಲಿಲ್ಲ. ಬಳಿಕ ಸಲ್ಮಾನ್‌ನಂತಹ ಮಾದಕದ್ರವ್ಯ ಮಾರಾಟಗಾರರನ್ನು ನನ್ನ ಕುಟುಂಬವನ್ನು ಬಲೆಗೆ ಬೀಳಿಸಲು ಬಳಸಲಾಗಿತ್ತು. ಇಂತಹ ಪ್ರಯತ್ನಗಳು ನಡೆಯುತ್ತಲೇ ಇರುತ್ತವೆ. ಇದರ ಹಿಂದೆ ಡ್ರಗ್ಸ್ ಮಾಫಿಯಾ ಇದೆ ’ಎಂದು ವಾಂಖೆಡೆ ಸ್ಪಷ್ಟನೆ ನೀಡಿದರು.

‘ವಾಂಖೆಡೆ ಎರಡು ಲಕ್ಷ ರೂ.ವೌಲ್ಯದ ಶೂಗಳನ್ನು,50,000 ರೂ.ಗೂ ಅಧಿಕ ಬೆಲೆಯ ಶರ್ಟ್‌ಗಳು ಮತ್ತು 30,000 ರೂ.ಗಳ ಟಿ-ಶರ್ಟ್‌ಗಳನ್ನು ಧರಿಸುತ್ತಾರೆ. ಅವರ ವಾಚುಗಳು 20 ಲ.ರೂ. . ಮೌಲ್ಯದ್ದಾಗಿವೆ. ಓರ್ವ ಪ್ರಾಮಾಣಿಕ ಮತ್ತು ನಿಷ್ಠಾವಂತ ಅಧಿಕಾರಿ ಇಂತಹ ದುಬಾರಿ ಬಟ್ಟೆಗಳನ್ನು ಧರಿಸಲು ಹೇಗೆ ಸಾಧ್ಯ? ಅವರು ಜನರನ್ನು ಸುಳ್ಳು ಪ್ರಕರಣಗಳಲ್ಲಿ ಸಿಲುಕಿಸಿ ಕೋಟ್ಯಂತರ ರೂ.ಗಳ ಹಫ್ತಾ ವಸೂಲು ಮಾಡಿದ್ದಾರೆ. ಪ್ರಾಮಾಣಿಕ ಅಧಿಕಾರಿಯ ಬದುಕು ಇಷ್ಟೊಂದು ಐಷಾರಾಮಿಯಾಗಿದ್ದರೆ ಇಡೀ ದೇಶಕ್ಕೆ ಇಂತಹ ಬದುಕನ್ನು ನಾವು ಬಯಸುತ್ತೇವೆ’ ಎದು ಮಲಿಕ್ ಹೇಳಿದ್ದರು.

ಈ ಬಗ್ಗೆ ವಾಂಖೆಡೆ,ಇವೆಲ್ಲ ಊಹಾಪೋಹಗಳಾಗಿವೆ. ಮಲಿಕ್‌ಗೆ ಜ್ಞಾನದ ಕೊರತೆಯಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News