ಜೆಎನ್‌ಯು ಉಪಕುಲಪತಿಗೆ ವಿವಿಧ ಕೇಂದ್ರಗಳಿಗೆ ಅಧ್ಯಕ್ಷರನ್ನು ನೇಮಿಸುವ ಅಧಿಕಾರವಿಲ್ಲ: ದಿಲ್ಲಿ ಹೈಕೋರ್ಟ್
ಹೊಸದಿಲ್ಲಿ: ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಉಪಕುಲಪತಿಗೆ ವಿವಿಧ ಕೇಂದ್ರಗಳ ಅಧ್ಯಕ್ಷರನ್ನು ನೇಮಿಸುವ ಅಧಿಕಾರವಿಲ್ಲ ಎಂದು ದಿಲ್ಲಿ ಹೈಕೋರ್ಟ್ ತನ್ನ ಆದೇಶದಲ್ಲಿ ಹೇಳಿದೆ.
ನ್ಯಾಯಮೂರ್ತಿ ರಾಜೀವ್ ಶಕ್ಧೆರ್ ಹಾಗೂ ನ್ಯಾಯಮೂರ್ತಿ ತಲ್ವಂತ್ ಸಿಂಗ್ ಅವರನ್ನೊಳಗೊಂಡ ವಿಭಾಗೀಯ ಪೀಠವು ಉಪಕುಲಪತಿ ಜಗದೇಶ್ ಕುಮಾರ್ ಅವರು ನೇಮಕ ಮಾಡಿದ ಒಂಬತ್ತು ಅಧ್ಯಕ್ಷರನ್ನು ಆಯ್ಕೆ ಸಮಿತಿಗಳ ಸಭೆಗೆ ಸಂಬಂಧಿಸಿದ ಕಾರ್ಯಗಳು ಸೇರಿದಂತೆ ಯಾವುದೇ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳದಂತೆ ನಿರ್ಬಂಧಿಸಿದೆ.
ಕಾರ್ಯಕಾರಿ ಮಂಡಳಿಗೆ ಅಧ್ಯಕ್ಷರನ್ನು ನೇಮಿಸುವ ಅಧಿಕಾರವಿದೆಯೇ ಹೊರತು ಉಪಕುಲಪತಿಗಳಿಗಲ್ಲ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.
ರಾಜಕೀಯ ಅಧ್ಯಯನ ಕೇಂದ್ರ, ಮಾಧ್ಯಮ ಅಧ್ಯಯನ ಕೇಂದ್ರ ಹಾಗೂ ಇತಿಹಾಸ ಅಧ್ಯಯನ ಕೇಂದ್ರದಂತಹ ವಿವಿಧ ಕೇಂದ್ರಗಳ ಅಧ್ಯಕ್ಷರಾಗಿ ಕುಮಾರ್ ನೇಮಿಸಿದ್ದ ಒಂಬತ್ತು ಪ್ರಾಧ್ಯಾಪಕರಿಗೆ ಕಾರ್ಯಕಾರಿ ಮಂಡಳಿಯ ಅನುಮೋದನೆಯನ್ನು ಪ್ರಶ್ನಿಸಿ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಅತುಲ್ ಸೂದ್ ಸಲ್ಲಿಸಿದ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ನಡೆಸಿತು. .
ವಿಶ್ವವಿದ್ಯಾನಿಲಯದ ಶಾಸನದ ಪ್ರಕಾರ, ಉಪಕುಲಪತಿಗಳು ಅಂತಹ ಅಧಿಕಾರವನ್ನು "ತುರ್ತು ಪರಿಸ್ಥಿತಿಗಳಲ್ಲಿ" ಮಾತ್ರ ಚಲಾಯಿಸಬಹುದು ಎಂದು ಸೂದ್ ಹೇಳಿದರು.