×
Ad

ಆಹಾರ ಭದ್ರತಾ ಕಾಯ್ದೆ ಅಡಿಯಲ್ಲಿ ಗುರುತಿಸುವಿಕೆಗೆ ಆಧಾರ್ ಕಾರ್ಡ್ ಮಾತ್ರ ಆಧಾರವಲ್ಲ: ಬಾಂಬೆ ಉಚ್ಚ ನ್ಯಾಯಾಲಯ

Update: 2021-11-03 22:22 IST

ಹೊಸದಿಲ್ಲಿ, ನ. 3: ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ (ಎನ್‌ಎಫ್‌ಎಸ್‌ಎ) ಅಡಿಯಲ್ಲಿ ಫಲಾನುಭವಿಗಳನ್ನು ಗುರುತಿಸಲು ಆಧಾರ್ ಕಾರ್ಡ್ ಕಡ್ಡಾಯವಲ್ಲ. ಆಧಾರ್ ಕಾರ್ಡ್ ಸಲ್ಲಿಸಬಹುದಾದ ಹಲವು ಆಧಾರಗಳಲ್ಲಿ ಒಂದು ಎಂದು ಬಾಂಬೆ ಉಚ್ಚ ನ್ಯಾಯಾಲಯ ತನ್ನ ಅಕ್ಟೋಬರ್ 29ರಂದು ನೀಡಿದ ಆದೇಶದಲ್ಲಿ ಹೇಳಿದೆ.

ತಮ್ಮ ಆಧಾರ್ ಕಾರ್ಡ್ ಅನ್ನು ಆರ್‌ಸಿಎಂಎಸ್ ಪೋರ್ಟಲ್‌ಗೆ ಜೋಡಿಸದೇ ಇರುವುದರಿಂದ ಅಧಿಕಾರಿಗಳು ಆಹಾರ ಧಾನ್ಯಗಳನ್ನು ನೀಡಲು ನಿರಾಕರಿಸುತ್ತಿದ್ದಾರೆ ಎಂದು ಆರೋಪಿಸಿ ಥಾಣೆಯ ಬುಡಕಟ್ಟು ಪ್ರದೇಶದ ನಿವಾಸಿಗಳು ನ್ಯಾಯಾಲಯದ ಮೆಟ್ಟಿಲೇರಿದ ಬಳಿಕ ಮುಂಬೈ ನ್ಯಾಯಾಲಯ ಈ ಆದೇಶ ನೀಡಿದೆ. ನ್ಯಾಯಮೂರ್ತಿಗಳಾದ ಪಿ.ಬಿ. ವರ್ಲೆ ಹಾಗೂ ಮಾಧವ ಜಾಮ್‌ದಾರ್ ಅವರನ್ನು ಒಳಗೊಂಡ ಇಬ್ಬರು ಸದಸ್ಯರ ಪೀಠ ಎನ್‌ಎಫ್‌ಎಸ್‌ಎ ಅಡಿಯಲ್ಲಿ ಪಡಿತರ ಚೀಟಿಯ ಸಿಂಧುತ್ವದ ಬಗ್ಗೆ ಗಮನ ಸೆಳೆದಿದೆ. ಅಲ್ಲದೆ, ಆಧಾರ್ ಕಡ್ಡಾಯಗೊಳಿಸುವುದು ಕೇಂದ್ರ ಸರಕಾರ 2017 ಫೆಬ್ರವರಿ 8ರಂದು ಹೊರಡಿಸಿದ ಅಧಿಸೂಚನೆಯ ಸ್ಪಷ್ಟ ಉಲ್ಲಂಘನೆ ಎಂದು ಹೇಳಿದೆ.

‘‘ಫಲಾನುಭವಿಗಳನ್ನು ಗುರುತಿಸಲು ಆಧಾರ್ ಕಾರ್ಡ್ ಒಂದು ಮಾನದಂಡ. ಫಲಾನುಭವಿಗಳನ್ನು ಗುರುತಿಸಲು ಆಧಾರ್ ಕಾರ್ಡ್ ಏಕೈಕ ಮಾನದಂಡ ಅಲ್ಲ ಎಂಬುದನ್ನು ಅಧಿಸೂಚನೆಯಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಈ ಯೋಜನೆಯ ಸೌಲಭ್ಯ ಪಡೆದುಕೊಳ್ಳಲು ಫಲಾನುಭವಿಗಳು ಸಲ್ಲಿಸಬಹುದಾದ ಇನ್ನೊಂದು ದಾಖಲೆಯೆಂದರೆ ಪಡಿತರ ಚೀಟಿ’’ ಎಂದು ನ್ಯಾಯಾಲಯ ತಿಳಿಸಿದೆ.

ಎನ್‌ಎಫ್‌ಎಸ್‌ಎ ಹಾಗೂ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಗೆ ಅನುಗುಣವಾಗಿ ಮುರ್ದಾಬಾದ್‌ನ ಬುಡಕಟ್ಟು ಪ್ರದೇಶದ ನಿವಾಸಿಗಳಿಗೆ ಆಹಾರ ಧಾನ್ಯಗಳನ್ನು ವಿತರಿಸುವಂತೆ ಮಹಾರಾಷ್ಟ್ರ ಸರಕಾರ ಹಾಗೂ ನಾಗರಿಕ ಪ್ರಾಧಿಕಾರಕ್ಕೆ ನ್ಯಾಯಾಲಯ ನಿರ್ದೇಶಿಸಿದೆ. ಒಂದು ವೇಳೆ ನಿವಾಸಿಗಳು ಆಧಾರ್ ಕಾರ್ಡ್ ಹೊಂದಿರದೇ ಇದ್ದರೆ, ಸಂಬಂಧಿತ ವ್ಯಕ್ತಿಯ ಪಡಿತರ ಚೀಟಿಯನ್ನು ಪರಿಶೀಲಿಸುವ ಸ್ವಾತಂತ್ರ ಪ್ರಾಧಿಕಾರಕ್ಕಿದೆ ಎಂದು ನ್ಯಾಯಾಲಯ ಹೇಳಿದೆ . ಸಂಬಂಧಿತ ಅಧಿಕಾರಿಗಳು ನಿರ್ದಿಷ್ಟ ತಾಂತ್ರಿಕ ನೆಲೆಯಲ್ಲಿ ದೂರುದಾರರು ಹಾಗೂ ಅವರಂತಹ ವ್ಯಕ್ತಿಗಳಿಗೆ ಆಹಾರ ಧಾನ್ಯ ವಿತರಣೆಯ ಸೌಲಭ್ಯವನ್ನು ನಿರಾಕರಿಸುವುದಕ್ಕೆ ಯಾವುದೇ ತರ್ಕ ಅಥವಾ ಕಾರಣವನ್ನು ಕಂಡುಕೊಳ್ಳಲು ನಮಗೆ ಸಾಧ್ಯವಾಗಿಲ್ಲ ಎಂದು ಪೀಠ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News