ಅಫ್ಘಾನಿಸ್ತಾನ್ ಏರ್ಲಿಫ್ಟ್ ಗೊಂದಲದಲ್ಲಿ ಅಮೆರಿಕದ ಯೋಧರ ಕೈಗೆ ನೀಡಿದ್ದ ಮಗು ಇನ್ನೂ ನಾಪತ್ತೆ

Update: 2021-11-06 12:42 GMT
Photo: Reuters

ನ್ಯೂಯಾರ್ಕ್,ನ.6: ಅಫ್ಘಾನಿಸ್ತಾನದ ರಾಜಧಾನಿ ಕಾಬೂಲನ್ನು ತಾಲಿಬಾನಿಗಳು ವಶಪಡಿಸಿಕೊಂಡ ಸಂದರ್ಭದಲ್ಲಿ ದೇಶವನ್ನು ತೊರೆಯಲು ಸಾವಿರಾರು ಜನರು ಕಾಬೂಲ ವಿಮಾನ ನಿಲ್ದಾಣಕ್ಕೆ ಲಗ್ಗೆ ಹಾಕಿದ್ದ ವೇಳೆ ಉಂಟಾಗಿದ್ದ ಗೊಂದಲದಲ್ಲಿ ಸುರಕ್ಷತೆಗಾಗಿ ಅಮೆರಿಕದ ಯೋಧರ ಕೈಗೆ ಹಸ್ತಾಂತರಿಸಲಾಗಿದ್ದ ಎರಡು ತಿಂಗಳು ಮಗು ಇನ್ನೂ ಪತ್ತೆಯಾಗದೆ ಹೆತ್ತವರು ಸಂಕಷ್ಟ ಪಡುತ್ತಿದ್ದಾರೆ.

 ಅದು ಕಾಬೂಲಿನಲ್ಲಿಯ ಅಮೆರಿಕ ರಾಯಭಾರಿ ಕಚೇರಿಯಲ್ಲಿ ಭದ್ರತಾ ಸಿಬ್ಬಂದಿಯಾಗಿ 10 ವರ್ಷಗಳ ಕಾಲ ದುಡಿದಿದ್ದ ಮಿರ್ಝಾ ಅಲಿ ಮತ್ತು ಪತ್ನಿ ಸುರೈಯಾ ಅವರು ಕ್ಷಣಮಾತ್ರದಲ್ಲಿ ಕೈಗೊಂಡ ನಿರ್ಧಾರವಾಗಿತ್ತು. ಆ.19ರಂದು ದೇಶ ಬಿಡಲು ವಿಮಾನ ನಿಲ್ದಾಣದ ಪ್ರವೇಶದ್ವಾರದ ಮುಂದೆ ನೆರೆದಿದ್ದ ಜನರ ದೊಡ್ಡ ಗುಂಪಿನ ನಡುವೆ ಅಲಿ ದಂಪತಿಗಳು ತಮ್ಮ ಐವರು ಮಕ್ಕಳೊಂದಿಗೆ ಸಿಕ್ಕಿಹಾಕಿಕೊಂಡಿದ್ದರು. ಈ ವೇಳೆ ನಿಲ್ದಾಣದ ಎತ್ತರದ ಆವರಣ ಗೋಡೆಯಾಚೆಯಿದ್ದ ಅಮೆರಿಕದ ಯೋಧನೋರ್ವ ಏನಾದರೂ ನೆರವು ಬೇಕೇ ಎಂದು ಅವರನ್ನು ವಿಚಾರಿಸಿದ್ದ. ನೂಕುನುಗ್ಗಲಿನಲ್ಲಿ ತಮ್ಮ ಎರಡು ತಿಂಗಳು ಪ್ರಾಯದ ಸೊಹೈಲ್ಗೆ ಅಪಾಯವುಂಟಾಗಬಹುದು ಎಂದು ಹೆದರಿಕೊಂಡಿದ್ದ ಅಲಿ ದಂಪತಿ ಮಗುವನ್ನು ಯೋಧನ ಕೈಗೆ ನೀಡಿದ್ದರು. ಪ್ರವೇಶದ್ವಾರ ಕೇವಲ ಐದು ಮೀಟರ್ ಅಂತರದಲ್ಲಿದ್ದರಿಂದ ಬೇಗನೆ ತಾವು ಒಳಪ್ರವೇಶಿಸುತ್ತೇವೆ ಎಂದವರು ಭಾವಿಸಿದ್ದರು.

ಇದೇ ವೇಳೆ ತಾಲಿಬಾನಿಗಳು ಜನರನ್ನು ಹಿಂದಕ್ಕೆ ತಳ್ಳಲಾರಂಭಿದ್ದರು. ಹೀಗಾಗಿ ತಮ್ಮ ಉಳಿದ ಮಕ್ಕಳೊಂದಿಗೆ ನಿಲ್ದಾಣದೊಳಗೆ ಪ್ರವೇಶಿಸಲು ದಂಪತಿಗೆ ಅರ್ಧ ಗಂಟೆ ಹಿಡಿದಿತ್ತು. ಆದರೆ ಆ ವೇಳೆಗೆ ಸೊಹೈಲ್ ಅಲ್ಲೆಲ್ಲಿಯೂ ಇರಲಿಲ್ಲ.

ಹತಾಶ ಅಲಿ ನಿಲ್ದಾಣದೊಳಗೆ ಎದುರಾಗಿದ್ದ ಪ್ರತಿ ಅಧಿಕಾರಿಯನ್ನೂ ತನ್ನ ಮಗುವಿನ ಬಗ್ಗೆ ವಿಚಾರಿಸಿದ್ದ. ವಿಮಾನ ನಿಲ್ದಾಣವು ಮಕ್ಕಳ ಪಾಲಿಗೆ ಅತ್ಯಂತ ಅಪಾಯಕಾರಿಯಾಗಿದ್ದು ಮಗುವನ್ನು ಮಕ್ಕಳಿಗಾಗಿಯೇ ವಿಶೇಷವಾಗಿ ವ್ಯವಸ್ಥೆ ಮಾಡಲಾಗಿದ್ದ ಜಾಗಕ್ಕೆ ಕರೆದೊಯ್ದಿರಬೇಕು ಎಂದು ಅಲಿಗೆ ತಿಳಿಸಿದ್ದ ಅಮೆರಿಕದ ಮಿಲಿಟರಿ ಕಮಾಂಡರ್ನೋರ್ವ ದಂಪತಿಯನ್ನು ಅಲ್ಲಿಗೆ ಕರೆದೊಯ್ದಿದ್ದ. ಆದರೆ ಆ ಜಾಗ ಖಾಲಿಯಾಗಿತ್ತು. ಕಮಾಂಡರ್ ಕೂಡ ಮಗುವನ್ನು ಹುಡುಕಿಕೊಂಡು ಅಲಿಯೊಂದಿಗೆ ಇಡೀ ವಿಮಾನ ನಿಲ್ದಾಣವನ್ನು ಸುತ್ತಾಡಿದ್ದ.

ಮೂರು ದಿನಗಳ ಕಾಲ ನಿರಂತರವಾಗಿ ದಂಪತಿ ಮಗುವಿಗಾಗಿ ಹುಡುಕಾಡುತ್ತಿದ್ದರು. ಇಲ್ಲಿ ಮಕ್ಕಳನ್ನು ಇಟ್ಟುಕೊಳ್ಳಲು ವ್ಯವಸ್ಥೆಯಿಲ್ಲ, ಹೀಗಾಗಿ ಮಗುವನ್ನು ವಿಮಾನದಲ್ಲಿ ಸಾಗಿಸಿರಬೇಕು ಎಂದು ಅಧಿಕಾರಿಯೋರ್ವ ಅಲಿಗೆ ತಿಳಿಸಿದ್ದ. ಇಷ್ಟಾದ ಬಳಿಕ ಅಲಿ(35),ಸುರೈಯಾ (32) ಮತ್ತು 17,9,6 ಹಾಗೂ 3 ವರ್ಷ ಪ್ರಾಯದ ಅವರ ಮಕ್ಕಳನ್ನು ತೆರವು ವಿಮಾನವೊಂದರಲ್ಲಿ ಕತಾರ್ಗೆ ಮತ್ತು ನಂತರ ಜರ್ಮನಿಗೆ,ಅಂತಿಮವಾಗಿ ಅಮೆರಿಕಕ್ಕೆ ಸಾಗಿಸಲಾಗಿತ್ತು. 

ಅಲಿ ಕುಟುಂಬವೀಗ ಇತರ ಅಫ್ಘಾನ್ ನಿರಾಶ್ರಿತರೊಂದಿಗೆ ಟೆಕ್ಸಾಸ್ ನ ಫೋರ್ಟ್ ಬ್ಲಿಸ್ನಲ್ಲಿ ಅಮೆರಿಕದಲ್ಲಿ ಎಲ್ಲಾದರೂ ಪುನರ್ವಸತಿಗಾಗಿ ಕಾಯುತ್ತಿದೆ. ಅಲ್ಲಿ ಅವರಿಗೆ ಯಾರೂ ಬಂಧುಗಳಿಲ್ಲ. ಏರ್ಲಿಫ್ಟ್ ಸಂದರ್ಭದಲ್ಲಿ ಇತರ ಕೆಲವು ಕುಟುಂಬಗಳೂ ಮುಳ್ಳುಬೇಲಿಯಾಚೆಯಿದ್ದ ಅಮೆರಿಕದ ಯೋಧರಿಗೆ ತಮ್ಮ ಮಕ್ಕಳನ್ನು ಹಸ್ತಾಂತರಿಸಿದ್ದವು. ಅವರೆಲ್ಲ ತಮ್ಮ ಮಕ್ಕಳನ್ನು ವಾಪಸ್ ಪಡೆದುಕೊಂಡಿವೆ.

ಅಲಿ ತನಗೆದುರಾಗುವ ನೆರವು ಕಾರ್ಯಕರ್ತರು, ಅಮೆರಿಕದ ಅಧಿಕಾರಿಗಳ ಬಳಿ ಮಗುವಿನ ಬಗ್ಗೆ ವಿಚಾರಿಸುತ್ತಲೇ ಇದ್ದಾನೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಅಫ್ಘಾನ್ ನಿರಾಶ್ರಿತರ ಗುಂಪೊಂದು ಮಗುವನ್ನು ಯಾರಾದರೂ ಗುರುತಿಸಬಹುದು ಎಂಬ ಆಸೆಯಿಂದ ಸೊಹೈಲ್ ಭಾವಚಿತ್ರವನ್ನು ತಮ್ಮ ನೆಟ್ವರ್ಕ್ಗಳಲ್ಲಿ ಹರಡುತ್ತಿದ್ದಾರೆ.

ಅಮೆರಿಕದ ನೆಲೆಗಳು ಮತ್ತು ವಿದೇಶಿ ತಾಣಗಳು ಸೇರಿದಂತೆ ತೆರವು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಎಲ್ಲ ಏಜೆನ್ಸಿಗಳಿಗೆ ಮಗು ಕಾಣೆಯಾಗಿರುವ ಬಗ್ಗೆ ಮಾಹಿತಿಗಳನ್ನು ನೀಡಲಾಗಿದೆ. ಮಗುವಿನ ಪತ್ತೆಗಾಗಿ ವಿದೇಶಾಂಗ ಇಲಾಖೆ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಅಮೆರಿಕ ಸರಕಾರದ ಅಧಿಕಾರಿಯೋರ್ವರು ಸುದ್ದಿಸಂಸ್ಥೆಗೆ ತಿಳಿಸಿದರು.

ಈ ನಡುವೆ ಸುರೈಯಾ ಮಗುವಿಗಾಗಿ ರೋದಿಸುತ್ತಿದ್ದರೆ ಇತರ ಮಕ್ಕಳು ಹತಾಶರಾಗಿದ್ದಾರೆ. ಸುರೈಯಾರ ಹೆತ್ತವರು, ಸೋದರಿ, ಬಂಧುಗಳು ಆಕೆಗೆ ಕರೆಗಳನ್ನು ಮಾಡುತ್ತಲೇ ಇದ್ದಾರೆ ಮತ್ತು ಚಿಂತಿಸಬೇಡ,ದೇವರಿದ್ದಾನೆ. ಖಂಡಿತ ಮಗು ಸಿಗುತ್ತದೆ ಎಂಬ ಭರವಸೆಯನ್ನು ತುಂಬುತ್ತಿದ್ದಾರೆ.

ಕೃಪೆ: indianexpress.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News