×
Ad

ತ್ರಿಪುರಾ ಹಿಂಸಾಚಾರದ ಕುರಿತು ಟ್ವೀಟ್‌ ಮಾಡಿದ 68 ಟ್ವಿಟರ್‌ ಪ್ರೊಫೈಲ್‌ ಗಳ ವಿರುದ್ಧ ಯುಎಪಿಎ ಅಡಿ ಪ್ರಕರಣ ದಾಖಲು

Update: 2021-11-06 21:57 IST
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ: ಈಶಾನ್ಯ ರಾಜ್ಯ ತ್ರಿಪುರಾದಲ್ಲಿ ಇತ್ತೀಚೆಗೆ ಹಿಂದುತ್ವ ಸಂಘಟನೆಗಳು ನಡೆಸಿದ್ದ ಮುಸ್ಲಿಂ ವಿರೋಧಿ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿ ಟ್ವೀಟ್‌ ಮಾಡಿದ್ದಕ್ಕಾಗಿ 68 ಟ್ವಿಟರ್‌ ಪ್ರೊಫೈಲ್‌ ಗಳ ವಿರುದ್ಧ ಯುಎಪಿಎ ಕರಾಳ ಕಾನೂನಿನಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ರಾಜ್ಯದಲ್ಲಿ ಮಸೀದಿಗಳ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿ ವಿಕೃತ ಮತ್ತು ಆಕ್ಷೇಪಾರ್ಹ ವಿಷಯಗಳನ್ನು ಪೋಸ್ಟ್‌ ಮಾಡಲು ಈ ಖಾತೆಗಳನ್ನು ಬಳಸಲಾಗಿದೆ ಎಂದು ಪೊಲೀಸರು ಹೇಳಿದ್ದಾಗಿ ವರದಿಗಳು ತಿಳಿಸಿವೆ. 

ಈ 68 ಪ್ರೊಫೈಲ್‌ ಗಳನ್ನು ಅಮಾನತುಗೊಳಿಸುವಂತೆ ಪೊಲೀಸರು ಟ್ವಿಟರ್‌ ಗೆ ಮನವಿ ಮಾಡಿದ್ದು, ಪತ್ರದಲ್ಲಿ ಎಲ್ಲಾ ಪ್ರೊಫೈಲ್‌ ಗಳ ಲಿಂಕ್‌ ಗಳನ್ನೂ ಉಲ್ಲೇಖಿಸಲಾಗಿದೆ. "ರಾಜ್ಯದಲ್ಲಿ ಮುಸ್ಲಿಂ ಸಮುದಾಯಗಳ ಮಸೀದಿಗಳ ಮೇಲೆ ಇತ್ತೀಚಿನ ಘರ್ಷಣೆ ಮತ್ತು ಆಪಾದಿತ ದಾಳಿಗೆ ಸಂಬಂಧಿಸಿದಂತೆ ಕೆಲವು ವ್ಯಕ್ತಿಗಳು / ಸಂಘಟನೆಗಳು ಟ್ವಿಟರ್‌ನಲ್ಲಿ ತಿರುಚಿದ ಮತ್ತು ಆಕ್ಷೇಪಾರ್ಹ ಸುದ್ದಿಗಳು / ಹೇಳಿಕೆಗಳನ್ನು ಪ್ರಕಟಿಸುತ್ತಿವೆ / ಪೋಸ್ಟ್ ಮಾಡುತ್ತಿವೆ" ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. 

"ಈ ಪೋಸ್ಟ್‌ಗಳು ತ್ರಿಪುರಾ ರಾಜ್ಯದಲ್ಲಿ ವಿವಿಧ ಧಾರ್ಮಿಕ ಸಮುದಾಯಗಳ ಜನರ ನಡುವೆ ಕೋಮು ಉದ್ವಿಗ್ನತೆಯನ್ನು ಉಂಟುಮಾಡುವ ಸಾಮರ್ಥ್ಯವನ್ನು ಹೊಂದಿವೆ, ಇದು ಕೋಮು ಗಲಭೆಗೆ ಕಾರಣವಾಗಬಹುದು" ಎಂದು ಪತ್ರದಲ್ಲಿ ತಿಳಿಸಿದ್ದಾಗಿ ndtv.com ವರದಿ ಮಾಡಿದೆ.

ಇನ್ನು ತ್ರಿಪುರಾದಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಏನು ಕ್ರಮ ಕೈಗೊಳ್ಳಲಾಗಿದೆ? ಎಂದು ರಾಷ್ಟ್ರೀಯ ಮಾನವ ಹಕ್ಕು ಆಯೋಗ ತ್ರಿಪುರಾ ಸರಕಾರವನ್ನು ಪ್ರಶ್ನಿಸಿದ್ದು ನಾಲ್ಕು ವಾರದೊಳಗಡೆ ಉತ್ತರ ನೀಡುವಂತೆ ಸೂಚಿಸಲಾಗಿದೆ. ರಾಷ್ಟ್ರೀಯ ಮಾನವ ಹಕ್ಕು ಆಯೋಗದಲ್ಲಿ ಆರ್ಟಿಐ ಕಾರ್ಯಕರ್ತ ಸಾಕೇತ್‌ ಗೋಖಲೆ ಪ್ರಕರಣ ದಾಖಲಿಸಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News