ಪಾಕಿಸ್ತಾನದಿಂದ ಅಪ್ರಚೋದಿತ ಗುಂಡಿನ ದಾಳಿ: ಓರ್ವ ಮೀನುಗಾರ ಮೃತ್ಯು
ಮುಂಬೈ, ನ.8: ಪಾಕಿಸ್ತಾನದ ಸಾಗರ ಭದ್ರತಾ ಏಜೆನ್ಸಿ ಕಚ್ ಪ್ರದೇಶದ ಅಂತಾರಾಷ್ಟ್ರೀಯ ಜಲಗಡಿ ಬಳಿ ಶನಿವಾರ ನಡೆಸಿದ ಅಪ್ರಚೋದಿತ ಗುಂಡಿನ ದಾಳಿಯಲ್ಲಿ ಮಹಾರಾಷ್ಟ್ರದ ಮೀನುಗಾರರೊಬ್ಬರು ಮೃತಪಟ್ಟಿದ್ದಾರೆ. ಘಟನೆಯಲ್ಲಿ ಮತ್ತೊಬ್ಬ ಮೀನುಗಾರ ಗಾಯಗೊಂಡಿದ್ದಾರೆ. ಇದು ಉಭಯ ದೇಶಗಳ ನಡುವಿನ ರಾಜತಾಂತ್ರಿಕ ಸಂಘರ್ಷಕ್ಕೆ ಕಾರಣವಾಗಿದೆ.
ಪಾಕ್ ಪಡೆಗಳ ಗುಂಡಿನ ದಾಳಿ ಬಗ್ಗೆ ಭಾರತ ಪ್ರಬಲ ಪ್ರತಿಭಟನೆಯನ್ನು ಸಲ್ಲಿಸಿದ್ದು, ಈ ದಾಳಿ ಅಪ್ರಚೋದಿತ ಎಂದು ಭಾರತ ಬಣ್ಣಿಸಿದೆ. ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ವದ್ರಾಯಿ ಗ್ರಾಮದ ಶ್ರೀಧರ್ ಛಾಮ್ರೆ (32) ಮೃತಪಟ್ಟ ಮೀನುಗಾರ. ಇವರ ಸಹಚರ ದಾಳಿಯಲ್ಲಿ ಗಾಯಗೊಂಡಿದ್ದು, ಗುಜರಾಥ್‌ನ ಓಕ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ಹಿನ್ನೆಲೆಯಲ್ಲಿ ಪಾಲ್ಘರ್ ಜಿಲ್ಲೆಯ ಕರಾವಳಿಯಲ್ಲಿ ಸೋಮವಾರ ಬಂದ್‌ಗೆ ಕರೆ ನೀಡಲಾಗಿದೆ.
ಪಾಕಿಸ್ತಾನಿ ಪಡೆ ಭಾರತೀಯ ಮೀನುಗಾರರ ಮೇಲೆ ದಾಳಿ ನಡೆಸುವುದು ಹೆಚ್ಚಿದೆ ಎಂದು ಆಪಾದಿಸಲಾಗಿದೆ.
2015ರ ಸೆಪ್ಟಂಬರ್‌ನಲ್ಲಿ 40 ವರ್ಷದ ಮೀನುಗಾರಿಕೆ ನಾವೆಯ ಕಾರ್ಮಿಕನೊಬ್ಬನನ್ನು ಪಾಕಿಸ್ತಾನ ಸಾಗರ ಭದ್ರತಾ ಪಡೆ ಗುಂಡಿಕ್ಕಿ ಕೊಂದಿತ್ತು. ಭಾರತೀಯ ಜಲ ಗಡಿ ಪ್ರದೇಶವನ್ನು ದಾಟಿದ ಆರೋಪದಲ್ಲಿ ಈ ಕಾರ್ಮಿಕನನ್ನು ಹತ್ಯೆ ಮಾಡಿದ ಬಳಿಕ ಈಗ ನಡೆದಿರುವುದು ಎರಡನೇ ಹತ್ಯೆಯಾಗಿದೆ. 2020ರ ಸೆಪ್ಟಂಬರ್‌ನಲ್ಲಿ ಕಚ್‌ನ ಜಖವು ಕರಾವಳಿ ತೀರದಲ್ಲಿ ಜಲ ಗಡಿ ಪ್ರದೇಶದಲ್ಲಿ ಐದು ಮಂದಿ ಭಾರತೀಯ ಮೀನುಗಾರರ ಮೇಲೆ ಪಿಎಂಎಸ್‌ಎ ಸಿಬ್ಬಂದಿ ಗುಂಡು ಹಾರಿಸಿದ್ದರು. ಘಟನೆಯಲ್ಲಿ ಒಬ್ಬನಿಗೆ ಗಾಯವಾಗಿತ್ತು. ಈ ವರ್ಷದ ಫೆಬ್ರವರಿಯಲ್ಲಿ ಪಾಕಿಸ್ತಾನ, ಭಾರತದ 17 ಮಂದಿ ಮೀನುಗಾರರನ್ನು ಬಂಧಿಸಿ ದೋಣಿಯನ್ನು ವಶಪಡಿಸಿಕೊಂಡಿತ್ತು.
ಪಾಕಿಸ್ತಾನ 600 ಮಂದಿ ಭಾರತೀಯ ಮೀನುಗಾರರನ್ನು ಕಸ್ಟಡಿಯಲ್ಲಿ ಇರಿಸಿಕೊಂಡಿದ್ದು, 1,100ಕ್ಕೂ ಹೆಚ್ಚು ದೋಣಿಗಳು ಪಾಕ್ ವಶದಲ್ಲಿವೆ. ಪಾಕಿಸ್ತಾನ ಹಲವು ಪ್ರಕರಣಗಳಲ್ಲಿ ಮೀನುಗಾರರನ್ನು ಬಿಡುಗಡೆ ಮಾಡಿದರೂ, ಅವರ ದೋಣಿಗಳನ್ನು ವಶದಲ್ಲಿ ಇಟ್ಟುಕೊಳ್ಳುತ್ತದೆ ಎನ್ನುವುದು ಭಾರತೀಯ ಅಧಿಕಾರಿಗಳು ಹಾಗೂ ಮೀನುಗಾರರ ಸಂಘಟನೆಗಳ ಆರೋಪ.