ವಿರಾಟ್ ಕೊಹ್ಲಿ,ಮ್ಯಾಥ್ಯೂ ಹೇಡನ್ ದಾಖಲೆಯನ್ನು ಸರಿಗಟ್ಟಿದ ಬಾಬರ್ ಆಝಂ
ದುಬೈ: ಪಾಕಿಸ್ತಾನದ ನಾಯಕ ಬಾಬರ್ ಆಝಂ ಮತ್ತೊಂದು ಅರ್ಧಶತಕ ಗಳಿಸಿದರು. ಈ ಮೂಲಕ ಈಗ ನಡೆಯುತ್ತಿರುವ ಟ್ವೆಂಟಿ-20 ವಿಶ್ವಕಪ್ 2021 ರಲ್ಲಿ ತಂಡವನ್ನು ಮುಂಚೂಣಿಯಲ್ಲಿ ನಿಂತು ಮುನ್ನಡೆಸಿದರು. ಬಾಬರ್ 47 ಎಸೆತಗಳಲ್ಲಿ 66 ರನ್ ಗಳಿಸಿ ಸ್ಕಾಟ್ಲೆಂಡ್ ವಿರುದ್ಧ ಪಾಕಿಸ್ತಾನ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 189 ರನ್ ಗಳಿಸಲು ನೆರವಾಗಿದ್ದರು. ಈ ವೇಳೆ ವಿರಾಟ್ ಕೊಹ್ಲಿ ಹಾಗೂ ಮ್ಯಾಥ್ಯೂ ಹೇಡನ್ ಅವರ ದಾಖಲೆಯನ್ನು ಸರಿಗಟ್ಟಿದರು.
ಒಂದೇ ಆವೃತ್ತಿಯ ಟ್ವೆಂಟಿ-20 ವಿಶ್ವಕಪ್ ನಲ್ಲಿ ಗರಿಷ್ಠ ಅರ್ಧಶತಕ ಸಿಡಿಸುವುದರೊಂದಿಗೆ ಬಾಬರ್ ಈ ಸಾಧನೆ ಮಾಡಿದರು. ಟೂರ್ನಿಯಲ್ಲಿ ನಾಲ್ಕನೇ ಅರ್ಧಶತಕವನ್ನು ಸಿಡಿಸಿದ ಬಾಬರ್ ಅವರು 2014ರ ಆವೃತ್ತಿಯಲ್ಲಿ ವಿರಾಟ್ ಕೊಹ್ಲಿ ಹಾಗೂ 2007ರ ಮೊದಲ ಆವೃತ್ತಿಯ ವಿಶ್ವಕಪ್ ನಲ್ಲಿ ಹೇಡನ್ ನಿರ್ಮಿಸಿದ್ದ ದಾಖಲೆಯನ್ನು ಸರಿಗಟ್ಟಿದರು.
ದುಬೈನಲ್ಲಿ ನಡೆದ ತಂಡದ ಆರಂಭಿಕ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿಯಾದ ಭಾರತದ ವಿರುದ್ಧ 52 ಎಸೆತಗಳಲ್ಲಿಔಟಾಗದೆ 68 ರನ್ ಗಳಿಸಿ ಪಂದ್ಯಾವಳಿಯನ್ನು ಪ್ರಾರಂಭಿಸಿದರು. ನಂತರ ಅವರು ಅಫ್ಘಾನಿಸ್ತಾನ ವಿರುದ್ಧ ತಮ್ಮ ತಂಡದ ಗೆಲುವಿನಲ್ಲಿ 47 ಎಸೆತಗಳಲ್ಲಿ 51 ರನ್ ಗಳಿಸಿದರು. ಬಾಬರ್ ನಂತರ ನಮೀಬಿಯಾ ವಿರುದ್ಧ ಮತ್ತೊಂದು ಅರ್ಧಶತಕವನ್ನು ಬಾರಿಸಿದರು.
ನಾಯಕನ ಫಾರ್ಮ್ ಸೂಪರ್ 12 ಹಂತದಲ್ಲಿ ಪಾಕಿಸ್ತಾನದ ಅಜೇಯ ಓಟದ ಅತ್ಯಂತ ಗಮನ ಸೆಳೆಯುವ ಅಂಶಗಳಲ್ಲಿ ಒಂದಾಗಿದೆ.
ಬಾಬರ್ ಈ ಕ್ಯಾಲೆಂಡರ್ ವರ್ಷದಲ್ಲಿ ಟ್ವೆಂಟಿ-20 ಮಾದರಿ ಕ್ರಿಕೆಟ್ ಪಂದ್ಯದಲ್ಲಿ 1,627 ರನ್ ಗಳಿಸಿದ್ದಾರೆ. ವಿಶ್ವಕಪ್ ಪಂದ್ಯಾವಳಿಯಲ್ಲಿ ಪಾಕಿಸ್ತಾನವು ಇನ್ನೂ ಒಂದು ಪಂದ್ಯವನ್ನಾದರೂ ಆಡಬೇಕಿರುವುದರಿಂದ ಅವರ ಮೊತ್ತಕ್ಕೆ ಇನ್ನಷ್ಟು ರನ್ ಸೇರಿಸುವ ಸಾಧ್ಯತೆಯಿದೆ.