ಭಾರತದ ಕ್ರಿಕೆಟಿಗರು ದೇಶಕ್ಕಿಂತ ಐಪಿಎಲ್ ಗೆ ಹೆಚ್ಚು ಆದ್ಯತೆ ನೀಡಿದರು: ಕಪಿಲ್ ದೇವ್

Update: 2021-11-08 12:02 GMT

ಹೊಸದಿಲ್ಲಿ: ದೇಶದ ಕ್ರಿಕೆಟ್ ಆಟಗಾರರು ರಾಷ್ಟ್ರೀಯ ಕರ್ತವ್ಯಕ್ಕಿಂತ ಶ್ರೀಮಂತ ಕ್ರಿಕೆಟ್ ಟೂರ್ನಿ ಇಂಡಿಯನ್ ಪ್ರೀಮಿಯರ್ ಲೀಗ್‌ಗೆ ಆದ್ಯತೆ ನೀಡಿದ್ದಾರೆ ಎಂದು ಭಾರತದ  ದಂತಕಥೆ ಕಪಿಲ್ ದೇವ್ ಹೇಳಿದ್ದಾರೆ. ಭಾರತವು ಸೂಪರ್-12ರ ಹಂತದಲ್ಲೇ ಟೂರ್ನಿಯಿಂದ ನಿರ್ಗಮಿಸಿರುವುದಕ್ಕೆ ಕಪಿಲ್ ಈ ರೀತಿ ಪ್ರತಿಕ್ರಿಯಿಸಿದರು.

"ಆಟಗಾರರು ದೇಶಕ್ಕಾಗಿ ಆಡುವುದಕ್ಕಿಂತ ಐಪಿಎಲ್ ಆಡಲು ತುಂಬಾ ಇಷ್ಟಪಡುತ್ತಾರೆ. ಇದಕ್ಕೆ ನಾವು ಏನು ಹೇಳಬಹುದು? ಪ್ರತಿಯೊಬ್ಬ ಆಟಗಾರರು ತಮ್ಮ ದೇಶಕ್ಕಾಗಿ ಆಡುವಾಗ ಹೆಮ್ಮೆಪಡಬೇಕು ಎಂದು ನಾನು ಭಾವಿಸುತ್ತೇನೆ" ಎಂದು 1983 ರಲ್ಲಿ ಭಾರತವು  ವಿಶ್ವಕಪ್ ಗೆಲ್ಲಲು ಕಾರಣವಾದ ಕಪಿಲ್ ದೇವ್ ಎಬಿಪಿ ನ್ಯೂಸ್‌ಗೆ ತಿಳಿಸಿದರು.

"ನಿಮ್ಮ ರಾಷ್ಟ್ರೀಯ ತಂಡಕ್ಕೆ ಮೊದಲ ಆದ್ಯತೆ ನೀಡಬೇಕು. ಆ ನಂತರ ಫ್ರಾಂಚೈಸ್ ಅಥವಾ ಇತರ ಯಾವುದೇ ತಂಡಕ್ಕೆ ಆದ್ಯತೆ ನೀಡಬೇಕು ಎಂದು ನಾನು ನಂಬುತ್ತೇನೆ’’ ಎಂದರು.

ನ್ಯೂಝಿಲ್ಯಾಂಡ್  ತಂಡವು ಅಫ್ಘಾನಿಸ್ತಾನವನ್ನು ಸೋಲಿಸಿ ಗ್ರೂಪ್ 2 ರಿಂದ ಎರಡನೇ ಸೆಮಿಫೈನಲ್ ಸ್ಥಾನವನ್ನು ಕಾಯ್ದಿರಿಸಿದ ನಂತರ ಭಾರತವು ರವಿವಾರ ಟ್ವೆಂಟಿ-20 ವಿಶ್ವಕಪ್‌ನಿಂದ ಹೊರಬಿದ್ದಿದೆ.

ಫೇವರಿಟ್ ತಂಡಗಳಲ್ಲಿ ಒಂದಾಗಿ ಪಂದ್ಯಾವಳಿಗೆ ಹೋಗಿದ್ದ  ವಿರಾಟ್ ಕೊಹ್ಲಿ ಪಡೆ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ಹಾಗೂ ನ್ಯೂಝಿಲ್ಯಾಂಡ್ ವಿರುದ್ಧ  ಹೆಚ್ಚು ಸೋತ ನಂತರ ಅಫ್ಘಾನಿಸ್ತಾನ ಹಾಗೂ  ಸ್ಕಾಟ್‌ಲ್ಯಾಂಡ್‌ಗಳನ್ನು ಸೋಲಿಸಿದ್ದರೂ ಸೆಮಿ ಫೈನಲ್ ತಲುಪಲು ಸಾಧ್ಯವಾಗಲಿಲ್ಲ.

ಐಪಿಎಲ್  ಅಕ್ಟೋಬರ್ 15 ರಂದು ದುಬೈನಲ್ಲಿ ಕೊನೆಗೊಂಡ ಕೇವಲ ಎರಡು ದಿನಗಳ ನಂತರ ಭಾರತೀಯ ಆಟಗಾರರು ವಿಶ್ವಕಪ್ ಟೂರ್ನಿಗೆ ಸಜ್ಜಾಗಿದ್ದರು.

" ಫ್ರಾಂಚೈಸಿಗಾಗಿ  ಕ್ರಿಕೆಟ್ ಆಡಬೇಡಿ ಎಂದು ನಾನು ಹೇಳುತ್ತಿಲ್ಲ.  ಆದರೆ ಭವಿಷ್ಯಕ್ಕಾಗಿ ಅವರ ಕ್ರಿಕೆಟ್ (ವೇಳಾಪಟ್ಟಿ) ಉತ್ತಮವಾಗಿ ಯೋಜಿಸುವುದು ಈಗ ಬಿಸಿಸಿಐ ಜವಾಬ್ದಾರಿಯಾಗಿದೆ. ಈ ಸೋಲಿನಿಂದ ನಾವು ಕಲಿಯುವುದು ಏನೆಂದರೆ ಮಾಡಿದ ತಪ್ಪುಗಳನ್ನು ಪುನರಾವರ್ತಿಸಬಾರದು. ಇದು ದೊಡ್ಡ ಪಾಠವಾಗಿದೆ " ಎಂದು 62 ವರ್ಷದ ಕಪಿಲ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News