ಜೊಕೊವಿಕ್‌ಗೆ ಪ್ಯಾರಿಸ್ ಮಾಸ್ಟರ್ಸ್ ಪ್ರಶಸ್ತಿ

Update: 2021-11-08 17:49 GMT

ಪ್ಯಾರಿಸ್, ನ. 8: ಪ್ಯಾರಿಸ್ ಮಾಸ್ಟರ್ಸ್ ಟೆನಿಸ್ ಪಂದ್ಯಾವಳಿಯ ಫೈನಲ್‌ನಲ್ಲಿ ರವಿವಾರ ಸರ್ಬಿಯದ ನೊವಾಕ್ ಜೊಕೊವಿಕ್ ಅವರು ರಶ್ಯದ ಡನೀಲ್ ಮೆಡ್ವೆಡೆವ್‌ರನ್ನು 4-6, 6-3, 6-3 ಸೆಟ್‌ಗಳಿಂದ ಸೋಲಿಸಿ ಪ್ರಶಸ್ತಿ ಗೆದಿದ್ದಾರೆ.

ದಾಖಲೆಯ ಏಳನೇ ರ್ಷವನ್ನು ನಂಬರ್ ಒಂದು ಸ್ಥಾನದಲ್ಲೇ ಮುಗಿಸುವುದು ಖಾತರಿಯಾದ ಒಂದು ದಿನದ ಬಳಿಕ ಅವರು ರ್ಯಾಂಕಿಂಗ್‌ನಲ್ಲಿ 2ನೇ ಸ್ಥಾನದಲ್ಲಿರುವ ಮೆಡ್ವೆಡೆವ್‌ರನ್ನು ಹಿಮ್ಮೆಟ್ಟಿಸಿದರು.

ಇದರೊಂದಿಗೆ ಅವರು ದಾಖಲೆಯ 37ನೇ ಮಾಸ್ಟರ್ಸ್ ಪ್ರಶಸ್ತಿಯನ್ನು ಗೆದ್ದಂತಾಗಿದೆ. ಈಗ ಅವರು ಮಾಸ್ಟರ್ಸ್ ಪ್ರಶಸ್ತಿಗಳ ಸಂಖ್ಯೆಯಲ್ಲಿ ರಫೇಲ್ ನಡಾಲ್‌ರಿಂದ ಒಂದು ಪ್ರಶಸ್ತಿಯಿಂದ ಹಿಂದಿದ್ದಾರೆ ಹಾಗೂ ರೋಜರ್ ಫೆಡರರ್‌ಗಿಂತ ಒಂಭತ್ತು ಪ್ರಶಸ್ತಿ ಅಧಿಕ ಪಡೆದಿದ್ದಾರೆ. ಅವರು ಮೂವರೂ ತಲಾ 20 ಗ್ರ್ಯಾನ್ ಸ್ಲಾಮ್ ಪ್ರಶಸ್ತಿಗಳನ್ನು ಗೆದ್ದು ಸಮಬಲದಲ್ಲಿದ್ದಾರೆ. ಇದು ಜೊಕೊವಿಕ್‌ರ ದಾಖಲೆಯ 6ನೇ ಪ್ಯಾರಿಸ್ ಮಾಸ್ಟರ್ಸ್ ಪ್ರಶಸ್ತಿಯಾಗಿದೆ. ಅದೇ ವೇಳೆ, ಮೆಡ್ವೆಡೆವ್ 4 ಬಾರಿ ಪ್ಯಾರಿಸ್ ಮಾಸ್ಟರ್ಸ್ ಪ್ರಶಸ್ತಿ ಗೆದ್ದಿದ್ದಾರೆ. ಸೆಪ್ಟಂಬರ್‌ನಲ್ಲಿ ನಡೆದ ಯುಎಸ್ ಓಪನ್ ಪಂದ್ಯಾವಳಿಯಲ್ಲಿ ಮೆಡ್ವೆಡೆವ್ ಜೊಕೊವಿಕ್‌ರನ್ನು ಸೋಲಿಸಿದ್ದರು. ಅಂದಿನಿಂದ ಜೊಕೊವಿಕ್ ಯಾವುದೇ ಪಂದ್ಯಾವಳಿಯಲ್ಲಿ ಆಡಿರಲಿಲ್ಲ.

ರವಿವಾರದ ಪಂದ್ಯದ ಆರಂಭದಲ್ಲಿ ಹಾಲಿ ಚಾಂಪಿಯನ್ ಮೆಡ್ವೆಡೆವ್ ಬಲಿಷ್ಠರಂತೆ ಕಂಡುಬಂದರು. ಅವರು ಮೊದಲ ಸೆಟ್ಟನ್ನು ಗೆದ್ದರು. ಆದರೆ, ಬಳಿಕ ನಿಧಾನವಾಗಿ ಜೊಕೊವಿಕ್ ಪ್ರತಿಹೋರಾಟ ನೀಡಿ ಉಳಿದ ಎರಡು ಸೆಟ್‌ಗಳನ್ನು ಗೆದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News