ಕೌಟುಂಬಿಕ ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ಮೂಲಸೌಕರ್ಯ ಕೋರಿ ಮನವಿ : ಕೇಂದ್ರ ಸರಕಾರಕ್ಕೆ ಸುಪ್ರೀಂ ಕೋರ್ಟ್ ನೋಟಿಸ್

Update: 2021-11-08 18:16 GMT

ಹೊಸದಿಲ್ಲಿ, ನ. 8: ಕೌಟುಂಬಿಕ ದೌರ್ಜನ್ಯಕ್ಕೆ ಒಳಗಾದ ಮಹಿಳೆಯರಿಗೆ ದೇಶಾದ್ಯಂತ ಪರಿಣಾಮಕಾರಿ ಕಾನೂನು ನೆರವು ನೀಡುವಂತೆ ಹಾಗೂ ಮೂಲಸೌಕರ್ಯ ಕಲ್ಪಿಸುವಂತೆ ಕೋರಿ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ದಾವೆಗೆ ಪ್ರತಿಕ್ರಿಯೆ ನೀಡುವಂತೆ ಸುಪ್ರೀಂ ಕೋರ್ಟ್ ಕೇಂದ್ರ ಸರಕಾರಕ್ಕೆ ನೋಟಿಸು ಜಾರಿ ಮಾಡಿದೆ.

ನ್ಯಾಯಮೂರ್ತಿಗಳಾದ ಯು.ಯು. ಲಲಿತ್ ಹಾಗೂ ಎಸ್. ರವೀಂದ್ರ ಭಟ್ ಅವರನ್ನು ಒಳಗೊಂಡ ಪೀಠ, ಡಿಸೆಂಬರ್ 6ರ ಒಳಗೆ ಪ್ರತಿಕ್ರಿಯೆ ನೀಡುವಂತೆ ನಿರ್ದೇಶಿಸಿ ಕೇಂದ್ರ ಸರಕಾರ, ಮಹಿಳೆ ಹಾಗೂ ಮಕ್ಕಳ ಅಭಿವೃದ್ಧಿ ಸಚಿವಾಲಯ, ಮಾಹಿತಿ ಹಾಗೂ ಪ್ರಸಾರ ಸಚಿವಾಲಯಕ್ಕೆ ನೋಟಿಸು ಜಾರಿ ಮಾಡಿದೆ. ಕೌಟುಂಬಿಕ ದೌರ್ಜನ್ಯಕ್ಕೆ ಒಳಗಾದ ಮಹಿಳೆಯರಿಗೆ ದೇಶಾದ್ಯಂತ ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆಯಡಿ ಪರಿಣಾಮಕಾರಿ ಕಾನೂನು ನೆರವು ನೀಡಲು ಹಾಗೂ ದೌರ್ಜನ್ಯ ನಡೆಸಿದ ಗಂಡ, ಮಾವನ ವಿರುದ್ಧ ದೂರು ದಾಖಲಿಸಲು ಸೂಕ್ತ ರಕ್ಷಣೆ ಒದಗಿಸುವಂತೆ ಕೋರಿ ‘ವಿ ದಿ ವುಮನ್ ಆಫ್ ಇಂಡಿಯಾ’ ಸಂಸ್ಥೆ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ದಾವೆಯನ್ನು ವಿಚಾರಣೆ ನಡೆಸಿದ ಪೀಠ ಈ ನೋಟಿಸು ಜಾರಿ ಮಾಡಿದೆ.

15 ವರ್ಷಗಳ ಹಿಂದೆಯೇ ಕೌಟುಂಬಿಕ ದೌರ್ಜನ್ಯ ಕಾಯ್ದೆ ಜಾರಿಗೆ ಬಂದ ಹೊರತಾಗಿಯೂ ಮಹಿಳೆಯರ ವಿರುದ್ಧ ನಡೆಯುತ್ತಿರುವ ಕೌಟುಂಬಿಕ ದೌರ್ಜನ್ಯ ಅತ್ಯಂತ ಸಾಮಾನ್ಯ ಅಪರಾಧವಾಗಿದೆ ಎಂದು ಸಂಸ್ಥೆ ಸಲ್ಲಿಸಿರುವ ಮನವಿಯಲ್ಲಿ ಹೇಳಲಾಗಿದೆ.‌

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News