ಪ್ರತಿಕ್ರಿಯೆ ಸಲ್ಲಿಸುವಂತೆ ಸಚಿವ ಮಲಿಕ್ ಗೆ ಬಾಂಬೆ ಉಚ್ಚ ನ್ಯಾಯಾಲಯದ ನಿರ್ದೇಶ

Update: 2021-11-08 18:17 GMT

ಮುಂಬೈ,ನ.8: ಎನ್‌ಸಿಬಿ ಅಧಿಕಾರಿ ಸಮೀರ್ ವಾಂಖೆಡೆಯವರ ತಂದೆ ಧ್ಯಾನದೇವ್ ವಾಂಖೆಡೆ ದಾಖಲಿಸಿರುವ ಮಾನನಷ್ಟ ಮೊಕದ್ದಮೆಗೆ ಉತ್ತರವಾಗಿ ಅಫಿಡವಿಟ್ ಸಲ್ಲಿಸುವಂತೆ ಬಾಂಬೆ ಉಚ್ಚ ನ್ಯಾಯಾಲಯವು ಸೋಮವಾರ ಮಹಾರಾಷ್ಟ್ರದ ಸಚಿವ ಹಾಗೂ ಎನ್‌ಸಿಪಿ ನಾಯಕ ನವಾಬ್ ಮಲಿಕ್ ಅವರಿಗೆ ನಿರ್ದೇಶವನ್ನು ನೀಡಿದೆ.

ಮಂಗಳವಾರದೊಳಗೆ ತನ್ನ ಉತ್ತರವನ್ನು ಸಲ್ಲಿಸುವಂತೆ ಮಲಿಕ್ ಗೆ ಸೂಚಿಸಿದ ರಜಾಕಾಲ ಪೀಠದ ನ್ಯಾಯಾಧೀಶ ಮಾಧವ ಜಾಮ್ದಾರ್ ಅವರು ಮುಂದಿನ ವಿಚಾರಣೆಯನ್ನು ಬುಧವಾರಕ್ಕೆ ನಿಗದಿಗೊಳಿಸಿದರು.

ನೀವು ಟ್ವಿಟರ್ ನಲ್ಲಿ ಉತ್ತರಿಸುತ್ತೀರಿ,ನೀವು ಇಲ್ಲಿಯೂ ಉತ್ತರಿಸಬಹುದು ಎಂದು ಮಲಿಕ್ ಅವರಿಗೆ ತಿಳಿಸಿದ ನ್ಯಾಯಮೂರ್ತಿಗಳು,ಅರ್ಜಿದಾರರ (ಧ್ಯಾನದೇವ್ ವಾಂಖೆಡೆ) ವಿರುದ್ಧ ಇನ್ನಷ್ಟು ಹೇಳಿಕೆಗಳನ್ನು ಮಲಿಕ್ ನೀಡುವುದನ್ನು ನಿರ್ಬಂಧಿಸಿ ಯಾವುದೇ ಆದೇಶವನ್ನು ಹೊರಡಿಸಲಿಲ್ಲ.

ಮಲಿಕ್ ಪ್ರತಿದಿನ ಏನಾದರೂ ಸುಳ್ಳು ಮತ್ತು ಮಾನಹಾನಿಕರ ಹೇಳಿಕೆಗಳನ್ನು ನೀಡುತ್ತಿರುತ್ತಾರೆ ಮತ್ತು ಅದು ಸಾಮಾಜಿಕ ಮಾಧ್ಯಮಗಳಲ್ಲಿ ಇನ್ನಷ್ಟು ಮಾನಹಾನಿಕರವಾದ ಟೀಕೆಗಳಿಗೆ ಕಾರಣವಾಗುತ್ತಿದೆ. ಇಂದು ಬೆಳಿಗ್ಗೆಯಷ್ಟೇ ಮಲಿಕ್ ಅವರು ಸಮೀರ್ ವಾಂಖೆಡೆಯವರ ನಾದಿನಿಯ ಕುರಿತು ಪೋಸ್ಟ್ ವೊಂದನ್ನು ಟ್ವೀಟಿಸಿದ್ದಾರೆ ಎಂದು ಹೇಳಿದ ಧ್ಯಾನದೇವ್ ಪರ ವಕೀಲ ಅರ್ಷದ್ ಶೇಖ್ ಅವರು,ಕನಿಷ್ಠ ಈ ವಿಷಯದ ವಿಚಾರಣೆಯಾಗುವವರೆಗೂ ಇನ್ನಷ್ಟು ಮಾನಹಾನಿಕರ ಹೇಳಿಕೆಗಳನ್ನು ನೀಡದಂತೆ ನ್ಯಾಯಾಲಯವು ಮಲಿಕ್ ಗೆ ನಿರ್ದೇಶ ನೀಡಬೇಕು ಅಥವಾ ಅವರೇ ಸ್ವತಃ ಇದರಿಂದ ದೂರವಿರಬೇಕು ಎಂದು ವಾದಿಸಿದರು.

ಅಫಿಡವಿಟ್ ಸಲ್ಲಿಸಲು ಕಾಲಾವಕಾಶ ಕೋರಿದ ಮಲಿಕ್ ಪರ ವಕೀಲ ಅತುಲ್ ದಾಮ್ಲೆಯವರು,ಅರ್ಜಿದಾರರು ತನ್ನ ವಯಸ್ಕ ಮಕ್ಕಳ ಪರವಾಗಿ ಮಾತನಾಡುವಂತಿಲ್ಲ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಇತರರು ಮಾಡಿರುವ ಟೀಕೆಗಳಿಗೆ ಮಲಿಕ್ ಅವರನ್ನು ಹೊಣೆಯಾಗಿಸುವಂತಿಲ್ಲ ಎಂದು ಹೇಳಿದರು.

ಸುದ್ದಿಗೋಷ್ಠಿಗಳು ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕ ತನ್ನ ಪುತ್ರ ಸಮೀರ್ ವಾಂಖೆಡೆ ಮತ್ತು ಕುಟುಂಬದ ವಿರುದ್ಧ ಮಾನಹಾನಿಕರ ಹೇಳಿಕೆಗಳನ್ನು ನೀಡುತ್ತಿರುವುದಕ್ಕಾಗಿ ಮಲಿಕ್ ಅವರಿಂದ 1.25 ಕೋ.ರೂ.ಗಳ ಪರಿಹಾರವನ್ನು ಕೋರಿ ಧ್ಯಾನದೇವ್ ಮೊಕದ್ದಮೆಯನ್ನು ದಾಖಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News