ನ್ಯೂಝಿಲ್ಯಾಂಡ್ ವಿರುದ್ಧ ಟ್ವೆಂಟಿ-20 ಸರಣಿ: ಭಾರತ ಕ್ರಿಕೆಟ್ ತಂಡ ಪ್ರಕಟ
ಹೊಸದಿಲ್ಲಿ: ನ್ಯೂಝಿಲ್ಯಾಂಡ್ ವಿರುದ್ದ ನವೆಂಬರ್ 17ರಿಂದ ಆರಂಭವಾಗಲಿರುವ 3 ಪಂದ್ಯಗಳ ಟ್ವೆಂಟಿ-20 ಅಂತರ್ ರಾಷ್ಟ್ರೀಯ ಸರಣಿಗೆ ರೋಹಿತ್ ಶರ್ಮಾ ನೇತೃತ್ವದ ಭಾರತ ಕ್ರಿಕೆಟ್ ತಂಡವನ್ನು ಮಂಗಳವಾರ ಪ್ರಕಟಿಸಲಾಗಿದೆ.
ನ್ಯೂಝಿಲ್ಯಾಂಡ್ ತಂಡವು ಭಾರತದ ಕ್ರಿಕೆಟ್ ಪ್ರವಾಸದ ವೇಳೆ ಟ್ವೆಂಟಿ-20 ಸರಣಿಯ ಜೊತೆಗೆ 2 ಪಂದ್ಯಗಳ ಟೆಸ್ಟ್ ಸರಣಿಯನ್ನೂ ಆಡಲಿದೆ.
ರೋಹಿತ್ ಶರ್ಮಾರನ್ನು ಟ್ವೆಂಟಿ-20 ತಂಡದ ನಾಯಕರನ್ನಾಗಿ ಆಯ್ಕೆ ಮಾಡಲಾಗಿದ್ದು, ಮಾಜಿ ನಾಯಕ ವಿರಾಟ್ ಕೊಹ್ಲಿಗೆ ಸರಣಿಯಿಂದ ವಿಶ್ರಾಂತಿ ನೀಡಲಾಗಿದೆ.
ಆಯ್ಕೆ ಸಮಿತಿಯು ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಲಿರುವ ಭಾರತ ಎ ತಂಡವನ್ನು ಆಯ್ಕೆ ಮಾಡಿದೆ.
ಜೈಪುರ, ರಾಂಚಿ ಹಾಗೂ ಕೋಲ್ಕತಾದಲ್ಲಿ ನ.17, 19 ಹಾಗೂ 21ರಂದು 3 ಟ್ವೆಂಟಿ-20 ಪಂದ್ಯಗಳು ನಡೆಯಲಿವೆ. ಕಾನ್ಪುರ ಹಾಗೂ ಮುಂಬೈ ಟೆಸ್ಟ್ ಪಂದ್ಯಗಳ ಆತಿಥ್ಯವಹಿಸಿಕೊಳ್ಳಲಿದೆ. ನ.25ರಿಂದ ಮೊದಲ ಟೆಸ್ಟ್ ಹಾಗೂ ಡಿ.3ರಿಂದ 2ನೇ ಟೆಸ್ಟ್ ಆರಂಭವಾಗಲಿದೆ.
16 ಸದಸ್ಯರನ್ನು ಒಳಗೊಂಡ ತಂಡದಲ್ಲಿ ಐಪಿಎಲ್ ನ ಗರಿಷ್ಠ ಸ್ಕೋರರ್ ಋತುರಾಜ್ ಗಾಯಕ್ವಾಡ್ ಹಾಗೂ ಗರಿಷ್ಠ ವಿಕೆಟ್ ಪಡೆದಿರುವ ಹರ್ಷಲ್ ಪಟೇಲ್ ಅವರ ಜೊತೆಗೆ ವೆಂಕಟೇಶ್ ಅಯ್ಯರ್ ಸ್ಥಾನ ಪಡೆದಿದ್ದಾರೆ. ಆಲ್ ರೌಂಡರ್ ಅಯ್ಯರ್ ಗಾಯಗೊಂಡಿರುವ ಹಾರ್ದಿಕ್ ಪಾಂಡ್ಯ ಸ್ಥಾನ ತುಂಬುವ ಸಾಧ್ಯತೆಯಿದೆ. ಟ್ವೆಂಟಿ-20 ವಿಶ್ವಕಪ್ ನಲ್ಲಿ ವಿಫಲವಾಗಿರುವ ಪಾಂಡ್ಯರನ್ನು ತಂಡದಿಂದ ಕೈಬಿಡಲಾಗಿದೆ. ಋತುರಾಜ್ ಈಗಾಗಲೇ ಶ್ರೀಲಂಕಾ ಸರಣಿಯಲ್ಲಿ ಭಾರತದ ಪರ ಆಡಿದ್ದರು.
ಭಾರತದ ಟ್ವೆಂಟಿ-20 ತಂಡ: ರೋಹಿತ್ ಶರ್ಮಾ(ನಾಯಕ), ಕೆ.ಎಲ್.ರಾಹುಲ್(ಉಪ ನಾಯಕ), ಋತುರಾಜ್ ಗಾಯಕ್ವಾಡ್, ಶ್ರೇಯಸ್ ಅಯ್ಯರ್,ಸೂರ್ಯಕುಮಾರ್ ಯಾದವ್, ರಿಷಭ್ ಪಂತ್(ವಿಕೆಟ್ ಕೀಪರ್), ಇಶಾನ್ ಕಿಶನ್(ವಿಕೆಟ್ ಕೀಪರ್), ವೆಂಕಟೇಶ್ ಅಯ್ಯರ್, ಯಜುವೇಂದ್ರ ಚಹಾಲ್, ಆರ್.ಅಶ್ವಿನ್, ಅಕ್ಷರ್ ಪಟೇಲ್, ಆವೇಶ್ ಖಾನ್, ಭುವನೇಶ್ವರ ಕುಮಾರ್, ದೀಪಕ್ ಚಹಾರ್, ಹರ್ಷಲ್ ಪಟೇಲ್ ಹಾಗೂ ಮುಹಮ್ಮದ್ ಸಿರಾಜ್.