ಯಮುನಾ ನದಿಯ ವಿಷಯುಕ್ತ ನೊರೆ ದಿಲ್ಲಿಗೆ ಉ.ಪ್ರದೇಶ,ಹರ್ಯಾಣದ ಕಾಣಿಕೆ: ಆಪ್ ನಾಯಕ
ಹೊಸದಿಲ್ಲಿ,ನ.9: ಯಮುನಾ ನದಿಯಲ್ಲಿ ತೇಲುತ್ತಿರುವ ವಿಷಪೂರಿತ ನೊರೆಯು ದಿಲ್ಲಿಗೆ ಉ.ಪ್ರದೇಶ ಮತ್ತು ಹರ್ಯಾಣಗಳಲ್ಲಿಯ ಬಿಜೆಪಿ ಸರಕಾರಗಳ ಕಾಣಿಕೆಯಾಗಿದೆ ಎಂದು ಆಮ್ ಆದ್ಮಿ ಪಾರ್ಟಿ(ಆಪ್)ಯ ಶಾಸಕ ಹಾಗೂ ದಿಲ್ಲಿ ಜಲಮಂಡಳಿಯ ಉಪಾಧ್ಯಕ್ಷ ರಾಘವ ಛಡ್ಡಾ ಅವರು ಮಂಗಳವಾರ ಇಲ್ಲಿ ಹೇಳಿದರು.
ಉ.ಪ್ರದೇಶ ನೀರಾವರಿ ಇಲಾಖೆಯಡಿಯಿರುವ ಓಖ್ಲಾ ಬ್ಯಾರೇಜ್ ಪ್ರದೇಶದಲ್ಲಿ ಯಮುನಾ ನದಿಯಲ್ಲಿ ವಿಷಯುಕ್ತ ನೊರೆಯಿದೆ ಮತ್ತು ಇದು ಉ.ಪ್ರ.ಸರಕಾರದ ಹೊಣೆಗಾರಿಕೆಯಾಗಿದೆ. ಆದರೆ ಪ್ರತಿವರ್ಷದಂತೆ ಈ ವರ್ಷವೂ ಅದನ್ನು ನಿಭಾಯಿಸಲು ಅದು ವಿಫಲಗೊಂಡಿದೆ. ಕಲುಷಿತ ನೀರು ದಿಲ್ಲಿಯದ್ದಲ್ಲ,ಅದು ದಿಲ್ಲಿಗೆ ಉ.ಪ್ರದೇಶ ಮತ್ತು ಹರ್ಯಾಣ ಸರಕಾರಗಳ ಉಡುಗೊರೆಯಾಗಿದೆ ಎಂದರು.
ಹರ್ಯಾಣದ ಯಮುನಾ ನದಿಯಿಂದ ಪ್ರತಿದಿನ ಸುಮಾರು 105 ಮಿಲಿಯನ್ ಗ್ಯಾಲನ್ ತ್ಯಾಜ್ಯನೀರು ಮತ್ತು ಉ.ಪ್ರದೇಶದಲ್ಲಿ ಗಂಗಾ ನದಿಯಿಂದ 50 ಮಿಲಿಯನ್ ಗ್ಯಾಲನ್ ತ್ಯಾಜ್ಯ ನೀರು ಓಖ್ಲಾ ಬ್ಯಾರೇಜ್ನಲ್ಲಿ ಸೇರುತ್ತವೆ. ಈ ನೀರು ಕೈಗಾರಿಕಾ ತ್ಯಾಜ್ಯ,ಸಂಸ್ಕರಿಸದ ಮಾರ್ಜಕಗಳು ಮತ್ತು ಅಮೋನಿಯಾವನ್ನು ಒಳಗೊಂಡಿದ್ದು,ಕೊಳಕು ನೊರೆಯುಂಟಾಗಲು ಕಾರಣವಾಗಿದೆ ಎಂದು ಹೇಳಿದ ಛಡ್ಡಾ, ನೀರಾವರಿ ತಂತ್ರಜ್ಞಾನ ಮತ್ತು ಬಯೊಕಲ್ಚರ್ ಪದ್ಧತಿಯನ್ನು ಬಳಸುವಂತೆ ಆಪ್ ಸರಕಾರವು ವರ್ಷಗಳಿಂದಲೂ ಉ.ಪ್ರದೇಶ ಮತ್ತು ಹರ್ಯಾಣ ಸರಕಾರಗಳಿಗೆ ಪತ್ರ ಬರೆಯುತ್ತಲೇ ಇದೆ,ಆದರೆ ಅವು ಸಂಪೂರ್ಣವಾಗಿ ನಿರ್ಲಕ್ಷಿಸಿವೆ ಎಂದರು.