"ಸುಳ್ಳಿನ ಮೂಲಕ ಅರಳಿದ ʼಹೂವುʼ ಪರಿಮಳ ಬೀರದು": ಸಮಾಜವಾದಿ ಸುಗಂಧದ್ರವ್ಯ ಬಿಡುಗಡೆಗೊಳಿಸಿದ ಅಖಿಲೇಶ್
ಲಕ್ನೋ: ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು ಸಮಾಜವಾದಿ ಪಕ್ಷದ ಚುನಾವಣಾ ಚಿಹ್ನೆಯೊಂದಿಗೆ ಸುಗಂಧ ದ್ರವ್ಯವನ್ನು ಬಿಡುಗಡೆ ಮಾಡಿದ್ದಾರೆ. ಸಮಾಜವಾದಿ ಶಾಸಕರು 'ಸಮಾಜವಾದಿ ಸುಗಂಧ್' ಅಥವಾ 'ಅತ್ತರ್' ಎಂದು ಕರೆಯಲ್ಪಡುವ ಸುಗಂಧ ದ್ರವ್ಯದ ವ್ಯಾಪಾರವನ್ನು ನಡೆಸುತ್ತಿದ್ದಾರೆ. ಅವರು ಸುಗಂಧ ಉದ್ಯಮಕ್ಕೆ ಹೆಸರುವಾಸಿಯಾದ ಕನ್ನೌಜ್ ಜಿಲ್ಲೆಯಲ್ಲಿ ಇದನ್ನು ತಯಾರಿಸುತ್ತಿದ್ದಾರೆ.
ಮುಂದಿನ ವರ್ಷದ ಆರಂಭದಲ್ಲಿ ನಡೆಯಲಿರುವ ಉತ್ತರಪ್ರದೇಶ ಅಸೆಂಬ್ಲಿ ಚುನಾವಣೆಗೆ ಮುಂಚಿತವಾಗಿ ಯಾದವ್ ಈ ಹೆಜ್ಜೆ ಇಟ್ಟಿದ್ದಾರೆ. 2017ರ ವಿಧಾನಸಭಾ ಚುನಾವಣೆಗೂ ಮುನ್ನ ಸಮಾಜವಾದಿ ಪಕ್ಷವು ಇದೇ ರೀತಿಯ ಸುಗಂಧ ದ್ರವ್ಯವನ್ನು ಬಿಡುಗಡೆ ಮಾಡಿತ್ತು. ಆಗ ಬಿಜೆಪಿಯಿಂದ ಪಕ್ಷ ಹೀನಾಯವಾಗಿ ಸೋತಿತ್ತು.
ಸುಗಂಧ ದ್ರವ್ಯದ ಬಾಟಲಿಯ ಬಣ್ಣಗಳು ಆಲಿವ್ ಹಸಿರು ಮತ್ತು ಕೆಂಪು ಬಣ್ಣದ್ದಾಗಿದ್ದು ಸಮಾಜವಾದಿ ಪಕ್ಷದ ಧ್ವಜವನ್ನು ಹೋಲುತ್ತವೆ. ದೇಶದ ವೈವಿಧ್ಯತೆಯನ್ನು ಪ್ರತಿನಿಧಿಸುವ "ಕಾಶ್ಮೀರದಿಂದ ಕನ್ಯಾಕುಮಾರಿ" ವರೆಗೆ ಪರಿಮಳವನ್ನು ಹೊಂದಿದೆ ಎಂದು ಇದನ್ನು ತಯಾರಿಸಿದ ಶಾಸಕರು ಹೇಳಿದರು.
ಸಮಾಜವಾದಿ ಸುಗಂಧ ದ್ರವ್ಯ ಬಿಡುಗಡೆಯ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡ ಯಾದವ್, ಈ ಸುಗಂಧ ಎಲ್ಲರಿಗೂ ಸೇರಿದ್ದು, ಆದರೆ ಸುಳ್ಳಿನ ಮೂಲಕ ಅರಳಿದ ಹೂವು ಎಂದಿಗೂ ಪರಿಮಳವನ್ನು ಬೀರುವುದಿಲ್ಲ ಎಂದು ಬಿಜೆಪಿಯ ಚುನಾವಣಾ ಚಿಹ್ನೆ ಕಮಲವನ್ನು ಉಲ್ಲೇಖಿಸಿ ಹೇಳಿದರು.