×
Ad

ಕೂರಾ ತಂಙಳ್‌ ರ ವೀಡಿಯೊವನ್ನು ತಿರುಚಲ್ಪಟ್ಟ ಶೀರ್ಷಿಕೆಗಳೊಂದಿಗೆ ಹಂಚುತ್ತಿರುವ ಬಿಜೆಪಿ ವಕ್ತಾರರು

Update: 2021-11-09 23:36 IST

ಬೆಂಗಳೂರು: ಮುಸ್ಲಿಂ ವಿದ್ವಾಂಸರೋರ್ವರು ಸಮಾರಂಭದಲ್ಲಿ ಆಹಾರಕ್ಕೆ ಉಗುಳುತ್ತಿದ್ದಾರೆ ಎಂಬ ಶೀರ್ಷಿಕೆಯೊಂದಿಗೆ ಖಾಝಿ ಸೈಯದ್‌ ಫಝಲ್‌ ಕೋಯಮ್ಮ ತಂಙಳ್‌ ಕೂರಾರವರ ವೀಡಿಯೋವೊಂದು ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿದೆ. ಬಿಜೆಪಿಯ ರಾಷ್ಟ್ರೀಯ ವಕ್ತಾರರಲ್ಲಿ ಹಲವರು ಈ ಕ್ಲಿಪ್‌ ಅನ್ನು ಶೇರ್‌ ಮಾಡಿದ್ದಾರೆ. ಇದೀಗ ಈ ಕುರಿತು ಸತ್ಯಶೋಧನಾ ವರದಿಯನ್ನು ಪ್ರಕಟಿಸಿರುವ altnews.in ಘಟನೆಯ ಸತ್ಯಾಸತ್ಯತೆಯನ್ನು ಬಯಲಿಗೆಳೆದಿದೆ. 

"ಕೂರಾ ತಂಙಳ್‌ ರವರ ತಂದೆ ಸೈಯದ್‌ ಅಬ್ದುರ್ರಹ್ಮಾನ್‌ ಅಲ್‌ ಬುಖಾರಿ ತಂಙಳ್‌ ರವರ ಉರೂಸ್‌ ನಡೆದ ಸಂದರ್ಭದಲ್ಲಿ ಸಾಮೂಹಿಕ ಅನ್ನ ಸಂತರ್ಪಣೆ ಕಾರ್ಯಕ್ರಮವಿತ್ತು. ಆಹಾರ ವಿತರಣೆಗೂ ಮುಂಚೆ ಕುರ್‌ ಆನ್‌ ಸೂಕ್ತಗಳನ್ನು ಓದಿ ಊದುವುದು ರೂಢಿ. ಮಧ್ಯಾಹ್ನ ಮತ್ತು ರಾತ್ರಿ ಅನ್ನ ಸಂತರ್ಪಣೆ ನಡೆದಿದ್ದು, ಈ ವೇಳೆ ತಂಙಳ್‌ ಸೂಕ್ತಗಳನ್ನು ಓದಿ ಊದಿದ್ದರೆ ವಿನಃ ಉಗುಳಿದ್ದಲ್ಲ" ಎಂದು ಅವರ ಸಹಾಯಕ ಹನೀಫ್‌ ಹಾಜಿ ಉಳ್ಳಾಲ ಹೇಳಿಕೆ ನೀಡಿದ್ದಾಗಿ ವರದಿ ಉಲ್ಲೇಖಿಸಿದೆ.

ಹಝ್ರತ್‌ ನಿಝಾಮುದ್ದೀನ್‌ ಔಲಿಯಾ ದರ್ಗಾದ ಪೀರ್ಝಾದಾ ಅಲ್ತಮಶ್‌ "ಅವರು ಊದುತ್ತಿದ್ದಾರೆಯೇ ಹೊರತು ಉಗುಳುತ್ತಿಲ್ಲ. ಇಂತಹಾ ಸಂಪ್ರದಾಯವನ್ನು ಪಾಲಿಸುವ ಹಲವು ಸಮುದಾಯಗಳಿವೆ. ಇದು ಬರ್ಕತ್‌ (ಅನುಗ್ರಹ)ಕ್ಕಾಗಿ ನಡೆಸುವ ಒಂದು ಧಾರ್ಮಿಕ ರೂಢಿ ಮಾತ್ರ. ನಮ್ಮ ದರ್ಗಾದಲ್ಲಿ ಈ ಸಂಪ್ರದಾಯವಿಲ್ಲ ಆದರೆ ಹಲವೆಡೆ ಇದನ್ನು ಪಾಲಿಸಲಾಗುತ್ತದೆ ಎಂದು ಹೇಳಿದ್ದಾರೆ.

ಈ ಹಿಂದೆಯೂ ಇಂತಹಾ ವೀಡಿಯೊವೊಂದು ಹರಿದಾಡಿದ್ದ ಸಂದರ್ಭದಲ್ಲಿ altnews.in ಸತ್ಯಾಸತ್ಯತೆಯನ್ನು ಬಯಲಿಗೆಳೆದಿತ್ತು. ಈ ವೇಳೆ ಮಾತನಾಡಿದ್ದ ಧಾರ್ಮಿಕ ವಿದ್ವಾಂಸರೋರ್ವರು, "ನಾವು ನಮಾಝ್‌ ಮುಗಿಸಿ ಹೊರ ಬರುವ ಸಂದರ್ಭದಲ್ಲಿ ಮಸೀದಿಯ ಹೊರಗಡೆ ಹಲವು ಮಹಿಳೆಯರು ಮಕ್ಕಳನ್ನು ಹಿಡಿದು ನಿಲ್ಲುವುದಿದೆ. ಮಸೀದಿಯಿಂದ ಹೊರಬರುವ ವಿಶ್ವಾಸಿಗಳು ಆ ಮಗುವಿನ ತಲೆಗೆ ಊದುತ್ತಾರೆ. ಅನುಗ್ರಹದ ದೃಷ್ಟಿಯಿಂದ ಇದು ಮಾಡಲಾಗುತ್ತದೆಯೇ ಹೊರತು ಬೇರೇನಿಲ್ಲ" ಎಂದು ಅವರು ಹೇಳಿದ್ದಾಗಿ ವರದಿ ಹೇಳಿದೆ. 

ಈ ವೀಡಿಯೊವನ್ನು ಬಲಪಂಥೀಯರು "ಮುಸ್ಲಿಮರು ತಯಾರಿಸಿದ ಆಹಾರ ಸೇವಿಸಬೇಡಿ. ಅವರು ಆಹಾರಕ್ಕೆ ಉಗುಳುತ್ತಾರೆ" ಎಂಬಂತೆ ವಿವಿಧ ಶೀರ್ಷಿಕೆಗಳಲ್ಲಿ ಶೇರ್‌ ಮಾಡಿದ್ದರು. ಬಿಜೆಪಿ ರಾಷ್ಟ್ರೀಯ ವಕ್ತಾರರಾದ ಪ್ರೀತಿ ಗಾಂಧಿ, ನವೀನ್‌ ಕುಮಾರ್‌ ಜಿಂದಾಲ್‌, ಗೌರವ್‌ ಗೋಯೆಲ್‌ ಮುಂತಾದವರು ಟ್ವಿಟರ್‌ ನಲ್ಲಿ ಶೇರ್‌ ಮಾಡಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News