"ಅಫ್ಘಾನಿಸ್ತಾನವನ್ನು ಭಯೋತ್ಪಾದನೆಗೆ ಬಳಸಲು ಆಸ್ಪದ ನೀಡಬಾರದು"

Update: 2021-11-10 18:35 GMT

ಹೊಸದಿಲ್ಲಿ,ನ.10: ಭಾರತ ಸೇರಿದಂತೆ ಎಂಟು ರಾಷ್ಟ್ರಗಳ ರಾಷ್ಟ್ರೀಯ ಭದ್ರತಾ ಸಲಹೆಗಾರರು ಬುಧವಾರ ದಿಲ್ಲಿಯಲ್ಲಿ ಸಭೆ ಸೇರಿ ಅಫ್ಘಾನಿಸ್ತಾನದ ಪ್ರಸಕ್ತ ಪರಿಸ್ಥಿತಿಯ ಬಗ್ಗೆ ಚರ್ಚಿಸಿದ್ದು, ಆ ದೇಶದ ಪ್ರಾಂತವನ್ನು ಭಯೋತ್ಪಾದಕ ಕೃತ್ಯಗಳಿಗೆ ಬಳಸಿಕೊಳ್ಳಬಾರದೆಂಬುದಕ್ಕೆ ಒಕ್ಕೊರಲಿನಿಂದ ಆಗ್ರಹಿಸಿದ್ದಾರೆ. ಉಗ್ರವಾದ ಹಾಗೂ ಮಾದಕದ್ರವ್ಯ ಕಳ್ಳಸಾಗಣೆ ವಿರುದ್ಧ ಜಾಗತಿಕ ಸಹಕಾರಕ್ಕಾಗಿ ಅವರು ಕರೆನೀಡಿದ್ದಾರೆ.

  
ಅಫ್ಘಾನಿಸ್ತಾನದಲ್ಲಿ ಪ್ರಮುಖ ಜನಾಂಗೀಯ-ರಾಜಕೀಯ ಶಕ್ತಿಗಳ ಪ್ರಾತಿನಿಧ್ಯವಿರುವಂತಹ ಎಲ್ಲರನ್ನೂ ಒಳಗೊಂಡ ಸರಕಾರದ ರಚನೆಗೆ ಅವರು ಬೆಂಬಲವನ್ನು ವ್ಯಕ್ತಪಡಿಸಲು ಕೂಡಾ ಅವರು ನಿರ್ಧರಿಸಿದ್ದಾರೆ. ಅಫ್ಘಾನಿಸ್ತಾನದಲ್ಲಿ ಸಾಮಾಜಿಕ-ಆರ್ಥಿಕ ಹಾಗೂ ಮಾನವೀಯ ಪರಿಸ್ಥಿತಿಯು ಹದಗೆಡುತ್ತಿರುವ ಬಗ್ಗೆ ಭದ್ರತಾಸಲಹೆಗಾರರ ಸಭೆ ಆತಂಕ ವ್ಯಕ್ತಪಡಿಸಿದ್ದು, ಆ ದೇಶಕ್ಕೆ ಮಾನವೀಯ ನೆರವುಗಳನ್ನು ಅಬಾಧಿತವಾಗಿ, ನೇರವಾಗಿ ಹಾಗೂ ಖಾತರಿಪಡಿಸುವ ರೀತಿಯಲ್ಲಿ ಸಮಾಜದ ಎಲ್ಲಾ ವರ್ಗಗಳಿಗೂ ತಾರತಮ್ಯವಿಲ್ಲವೆ ವಿತರಿಸಬೇಕೆಂದು ಅವರು ಆಗ್ರಹಿಸಿದ್ದಾರೆ.
   
ಭಾರತದ ಎನ್‌ಎಸ್‌ಎ ಅಧಿಕಾರಿ ಅಜಿತ್ ಧೋವಲ್ ನೇತೃತ್ವದಲ್ಲಿ ನಡೆದ ಅಫ್ಘಾನಿಸ್ತಾನದ ಕುರಿತ ದಿಲ್ಲಿ ಪ್ರಾದೇಶಿಕ ಭದ್ರತಾ ಸಮಾಲೋಚನೆ ಸಭೆಯಲ್ಲಿ ಭಾರತ, ರಶ್ಯ, ಇರಾನ್, ತಾಜಿಕಿಸ್ತಾನ್, ಉಝ್ಬೆಕಿಸ್ತಾನ್, ಟರ್ಕ್‌ಮೆನಿಸ್ತಾನ, ಕಝಕಸ್ತಾನ ಹಾಗೂ ಕಿರ್ಗಿಝ್‌ಸ್ತಾನ ದೇಶಗಳ ರಾಷ್ಟ್ರೀಯ ಭದ್ರತಾ ಸಲಹೆಗಾರರು ಭಾಗವಹಿಸಿದ್ದರು.
   
ಸಭೆಯಲ್ಲಿ ಅಜಿತ್ ಧೋವಲ್ ಮಾತನಾಡಿ, ಅಫ್ಘಾನಿಸ್ತಾನದ ಪ್ರಸಕ್ತ ಪರಿಸ್ಥಿತಿಯು ಆ ದೇಶದ ಜನತೆಯ ಮೇಲೆ ಮಾತ್ರವಷ್ಟೇ ಅಲ್ಲದೆ, ನೆರೆಹೊರೆಯ ರಾಷ್ಟ್ರಗಳು ಹಾಗೂ ಪ್ರದೇಶದ ಮೇಲೂ ಬಹುಮುಖ್ಯ ಪರಿಣಾಮವನ್ನು ಬೀರುತ್ತದೆ ಎಂದು ಹೇಳಿದರು.
   
ಇರಾನ್‌ನ ಮುತುವರ್ಜಿಯೊಂದಿಗೆ 2018ರಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರರ ಸಭೆಯನ್ನು ಆರಂಭಿಸಲಾಗಿತ್ತು. ಇದು ನಡೆಯುತ್ತಿರುವುದು ಎರಡನೆ ಸಭೆಯಾಗಿದೆ. ಇಂತಹ ಉಪಕ್ರಮವನ್ನು ಆರಂಭಿಸಿದ್ದಕ್ಕಾಗಿ ಇರಾನ್‌ಗೆ ನಾವು ಕೃತಜ್ಞರಾಗಿದ್ದೇವೆ ಎಂದು ಧೋವಲ್ ತಿಳಿಸಿದರು. ಮಧ್ಯ ಏಶ್ಯದ ಎಲ್ಲಾ ದೇಶಗಳು ಹಾಗೂ ರಶ್ಯಗಳ ಪಾಲ್ಗೊಳ್ಳುವಿಕೆಯ ಈ ಸಮಾವೇಶದ ಅತಿಥ್ಯ ನೀಡಲು ಅವಕಾಶ ದೊರೆತಿರುವುದು ಭಾರತಕ್ಕೆ ದೊರೆತ ಸೌಭಾಗ್ಯವಾಗಿದೆ ಎಂದು ಧೋವಲ್ ತಿಳಿಸಿದರು.

ಸಭೆಯ ಬಳಿಕ ಭದ್ರತಾ ಸಲಹೆಗಾರರು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News