ಮಧ್ಯಪ್ರದೇಶ: ಕೋವಿಡ್ ಲಸಿಕೆ ಡೋಸ್ ತೆಗೆದುಕೊಂಡ ಯುವಕ ಸಾವು

Update: 2021-11-10 18:15 GMT

ಸಿಹೋರ್, ನ. 9: ಕೋವಿಡ್ ಲಸಿಕೆಯ ಮೊದಲ ಡೋಸ್ ಪಡೆದ 48 ಗಂಟೆಗಳ ಒಳಗೆ 19 ವರ್ಷದ ಯುವಕನೋರ್ವ ಮೃತಪಟ್ಟ ಘಟನೆ ಮಧ್ಯಪ್ರದೇಶ ಸಿಹೋರ್ ಜಿಲ್ಲೆಯ ಗ್ರಾಮವೊಂದರಲ್ಲಿ ಸಂಭವಿಸಿದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ. ಲಸಿಕೆಯ ಅಗತ್ಯದ ಶಿಷ್ಟಾಚಾರಗಳನ್ನು ಅನುಸರಿಸಲಾಗಿದೆ. ‌

ಬೋಪಾಲದ ಏಮ್ಸ್ ನಲ್ಲಿ ನಡೆಸಲಾದ ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕ ಈ ಸಾವಿನ ಕಾರಣ ತಿಳಿಯಲು ಸಾಧ್ಯ ಎಂದು ಸ್ಥಳೀಯಾಡಳಿತ ಹೇಳಿದೆ. ಜಿಲ್ಲೆಯ ಭನ್ವ್ರಾ ಗ್ರಾಮದಲ್ಲಿ ಶುಭಂ ಪರ್ಮಾರ್ಗೆ ನವೆಂಬರ್ 6ರಂದು ಅಪರಾಹ್ನ ಕೋವಿಡ್ ಲಸಿಕೆಯ ಮೊದಲ ಡೋಸ್ ನೀಡಲಾಯಿತು. ಅಲ್ಲಿನ ಆರೋಗ್ಯ ಕಾರ್ಯಕರ್ತರ ತಂಡ ಅರ್ಧ ಗಂಟೆಗಳ ಕಾಲ ಪರಿವೀಕ್ಷಣೆ ನಡೆಸಿದ ಬಳಿಕ ಶುಭಂ ಪರ್ಮಾರ್ ಮನೆಗೆ ಹಿಂದಿರುಗಿದ್ದರು ಎಂದು ಅವರು ಹೇಳಿದ್ದಾರೆ. 

ಮರುದಿನ ಶುಭಂ ಪರ್ಮಾರ್ ವಾಂತಿ ಮಾಡಲು ಆರಂಭಿಸಿದ್ದಾರೆ. ಅವರನ್ನು ಕೂಡಲೇ ಅಸ್ತಾದಲ್ಲಿರುವ ಸಿವಿಲ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅನಂತರ ಅಲ್ಲಿಂದ ಸಿಹೋರ್ ಜಿಲ್ಲಾಸ್ಪತ್ರೆಗೆ ಕರೆದೊಯ್ದು ದಾಖಲಿಸಲಾಯಿತು. ಆದರೆ, ಅವರು ಸೋಮವಾರ ಮೃತಪಟ್ಟರು ಎಂದು ಶುಭಂ ಪರ್ಮಾರ್ ಅವರ ಕುಟುಂಬದ ಸದಸ್ಯರು ತಿಳಿಸಿದ್ದಾರೆ. ಲಸಿಕೆ ನೀಡಿದ ಬಳಿಕದ ಶಿಷ್ಟಾಚಾರಕ್ಕೆ ಅನುಗುಣವಾಗಿ ಶುಭಂ ಅವರ ಆರೋಗ್ಯದ ಮೇಲ್ವಿಚಾರಣೆ ನೋಡಿಕೊಳ್ಳಲಾಗಿದೆ. ಸಾವಿನ ಕಾರಣದ ಕುರಿತು ತನಿಖೆ ನಡೆಸಲಾಗುವುದು ಎಂದು ಅಸ್ತಾದ ಬ್ಲಾಕ್ ವೈದ್ಯಕೀಯ ಅಧಿಕಾರಿ ಡಾ. ಪ್ರವೀರ್ ಗುಪ್ತಾ ಅವರು ಹೇಳಿದ್ದಾರೆ. ಭೋಪಾಲದ ಏಮ್ಸ್ ವೈದ್ಯರು ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ವರದಿ ಬಂದ ಬಳಿಕ ಸಾವಿನ ಖಚಿತ ಕಾರಣ ತಿಳಿಯಲಿದೆ ಎಂದು ಅವರು ತಿಳಿಸಿದ್ದಾರೆ. ವರದಿಯನ್ನು 8 ದಿನಗಳ ಒಳಗೆ ಸಂಬಂಧಿಸಿದ ಪೊಲೀಸ್ ಠಾಣೆಗೆ ಕಳುಹಿಸಿ ಕೊಡಲಾಗುವುದು ಎಂದು ಏಮ್ಸ್ ವೈದ್ಯರು ಮಾಹಿತಿ ನೀಡಿದ್ದಾರೆ ಎಂದು ಶುಭಂ ಪರ್ಮಾರ್ ಅವರ ತಂದೆ ಮಾನ್ ಸಿಂಗ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News