ಗ್ರಾಪಂಗಳ ಸಮಸ್ಯೆಗಳನ್ನು ಶೀಘ್ರವಾಗಿ ಪರಿಹರಿಸಿ: ಕೇಂದ್ರ ಸರಕಾರದ ಪಂಚಾಯತ್ ರಾಜ್ ಕಾರ್ಯದರ್ಶಿ ಸುನೀಲ್ ಕುಮಾರ್ ಕರೆ

Update: 2021-11-11 17:52 GMT

ಮಂಗಳೂರು: ಕರಾವಳಿ ರಾಜ್ಯಗಳ ಗ್ರಾಮ ಪಂಚಾಯತ್‌ಗಳು ಪ್ರತಿ ವರ್ಷವು ಹಲವು ಸಮಸ್ಯೆಗಳನ್ನು ವಿಶೇಷವಾಗಿ ಪ್ರಾಕೃತಿಕ ವಿಕೋಪಗಳನ್ನು ಎದುರಿಸುತ್ತಿವೆ. ಮುಖ್ಯವಾಗಿ ಮಾನ್ಸೂನ್ ಕಾಲದಲ್ಲಿನ ಸಮಸ್ಯೆಗಳು, ರೋಗ-ರುಜಿನಗಳು, ಸಾವುಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಇಲಾಖೆ ಕೆಲಸ ಮಾಡಬೇಕಾಗಿದೆ ಎಂದು ಕೇಂದ್ರ ಸರಕಾರದ ಪಂಚಾಯತ್ ರಾಜ್ ಕಾರ್ಯದರ್ಶಿ ಸುನೀಲ್ ಕುಮಾರ್ ತಿಳಿಸಿದ್ದಾರೆ.

ಕರಾವಳಿ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಜನರ ಯೋಜನೆಯ (ಸಬ್ ಕೀ ಯೋಜನಾ ಸಬ್ ಕಾ ವಿಕಾಸ್) ಮೂಲಕ ಆರ್ಥಿಕ ಮತ್ತು ಸಾಮಾಜಿಕ ಬದಲಾವಣೆ ಕುರಿತು ಕೇಂದ್ರ ಸರಕಾರದ ಪಂಚಾಯತ್ ರಾಜ್ ಸಚಿವಾಲಯ, ಹೈದರಾಬಾದ್‌ನ ರಾಷ್ಟ್ರೀಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆ ಹಾಗೂ ಮೈಸೂರಿನ ಅಬ್ದುಲ್ ನಝೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆಯ ಸಹಯೋಗದಲ್ಲಿ ನಗರದ ಓಷಿಯನ್ ಪರ್ಲ್ ಹೋಟೆಲ್‌ನಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ಪ್ರಾದೇಶಿಕ ಕಾರ್ಯಾಗಾರವನ್ನುದ್ದೇಶಿಸಿ ವೀಡಿಯೊ ಕಾನ್ಫೆರೆನ್ಸ್ ಮೂಲಕ ಅವರು ಮಾತನಾಡುತ್ತಿದ್ದರು.

ಕರಾವಳಿ ಭಾಗದ ರಾಜ್ಯ ಸರಕಾರಗಳು ಮತ್ತು ಗ್ರಾಪಂಗಳು ಸಮುದಾಯದ ಸಮಸ್ಯೆಗಳನ್ನು ಶೀಘ್ರಗತಿಯಲ್ಲಿ ಪರಿಹರಿಸುವ ಕ್ರಮಗಳನ್ನು ಅನುಷ್ಠಾನಗೊಳಿಸುವುದರೊಂದಿಗೆ ಮತ್ತು ಆದ್ಯತೆಯೊಂದಿಗೆ ಅಭಿವೃದ್ಧಿಯನ್ನು ಖಾತರಿಪಡಿಸಬೇಕು ಎಂದು ಹೇಳಿದರು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾದ ಉಮಾ ಮಹಾದೇವನ್, ಕೇಂದ್ರ ಸರಕಾರದ ಪಂಚಾಯತ್ ರಾಜ್ ಸಚಿವಾಲಯದ ಜಂಟಿ ಕಾರ್ಯದರ್ಶಿ ರೇಖಾ ಯಾದವ್, ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಆಯುಕ್ತರಾದ ಶಿಲ್ಪಾನಾಗ್ ಮಾತನಾಡಿದರು.

ಕಾರ್ಯಾಗಾರದ ಕುರಿತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಅವರು ಸಂದೇಶ ನೀಡಿದರು.

ಕಾರ್ಯಾಗಾರದಲ್ಲಿ ವಿವಿಧ ರಾಜ್ಯಗಳಿಂದ ಮೂರು ಹಂತದ ಪಂಚಾಯತ್ ರಾಜ್ ಸಂಸ್ಥೆಗಳ ಪ್ರತಿನಿಧಿಗಳು, ಕೇಂದ್ರ ಮತ್ತು ರಾಜ್ಯ ಸರಕಾರಗಳ ಹಿರಿಯ ಅಧಿಕಾರಿಗಳು, ನೀತಿ ನಿರೂಪಕರುಗಳು, ವಿಷಯ ತಜ್ಞರುಗಳು, ಬೋಧಕರುಗಳು, ಅಭಿವೃದ್ಧಿ ಅನುಷ್ಠಾನದ ವೃತ್ತಿಪರರು ಹಾಗೂ ಅನುಷ್ಠಾನಾಧಿಕಾರಿಗಳು ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಪಂಚಾಯತ್ ರಾಜ್ ನಿರ್ದೇಶಕ ಏಕಾಂತಪ್ಪ, ದ.ಕ. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಾರಿ ಡಾ.ಕುಮಾರ್, ಉಪಸ್ಥಿತರಿದ್ದರು.

ಮೈಸೂರಿನ ಅಬ್ದುಲ್ ನಜೀರ್ ಸಾಬ್ ಎಸ್‌ಐಆರ್‌ಡಿಪಿಆರ್ ನಿರ್ದೇಶಕರಾದ ಕೆ. ಲಕ್ಷ್ಮೀ ಪ್ರಿಯ ಸ್ವಾಗತಿಸಿದರು. ಪಂಚಾಯತ್ ರಾಜ್ ನಿರ್ದೇಶಕ ಹೈದರಾಬಾದ್‌ನ ಎನ್‌ಐಆರ್‌ಡಿಪಿಆರ್‌ನ ಸಹ ಪ್ರಾಧ್ಯಾಕ ಡಾ. ಕದಿರೇಷನ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News