ಉತ್ತರಪ್ರದೇಶ ವಿಧಾನಸಭಾ ಚುನಾವಣೆ ಗೆಲುವು 2024ಕ್ಕೆ ಬಾಗಿಲು ತೆರೆಯಲಿದೆ: ಅಮಿತ್ ಶಾ

Update: 2021-11-12 17:19 GMT

ಲಕ್ನೋ: ಪ್ರತಿಯೊಬ್ಬ ಬಿಜೆಪಿ ಕಾರ್ಯಕರ್ತರು ತಲಾ ಕನಿಷ್ಠ ಮೂರು ಕುಟುಂಬಗಳಿಂದ ಮತ ಪಡೆಯಲು ಪ್ರಯತ್ನಿಸಬೇಕು ಎಂದು ಗೃಹ ಸಚಿವ ಅಮಿತ್ ಶಾ ಅವರು ವಾರಣಾಸಿಯಲ್ಲಿ ಇಂದು ಹೇಳಿದ್ದಾರೆ.

ಶಾ ಅವರು ಮುಂದಿನ ವರ್ಷದ ಆರಂಭದಲ್ಲಿ ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಯ ತಳಮಟ್ಟದ ಸಿದ್ಧತೆಯನ್ನು ಪರಿಶೀಲಿಸಿದರು. ಉತ್ತರ ಪ್ರದೇಶದ ಗೆಲುವು ‘2024 ಕ್ಕೆ ಬಾಗಿಲು ತೆರೆಯುತ್ತದೆ’ ಎಂದು ಮುಂದಿನ ಸಾರ್ವತ್ರಿಕ ಚುನಾವಣೆಯನ್ನು ಉಲ್ಲೇಖಿಸಿ ಹೇಳಿದರು.

ಗೃಹ ಸಚಿವರಾಗುವ ಮೊದಲು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ಶಾ, ಪ್ರಧಾನಿ ನರೇಂದ್ರ ಮೋದಿಯವರ ಲೋಕಸಭಾ ಕ್ಷೇತ್ರವೂ ಆಗಿರುವ ವಾರಣಾಸಿಯಲ್ಲಿ ಪಕ್ಷದ ಕಾರ್ಯಕರ್ತರು ಹಾಗೂ  ಮುಖಂಡರೊಂದಿಗೆ ಸಂವಾದ ನಡೆಸಿದರು. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರೊಂದಿಗೆ ವೇದಿಕೆ ಹಂಚಿಕೊಂಡರು.

ಒಂದು ಗಂಟೆಗೂ ಹೆಚ್ಚು ಕಾಲ ಮಾಡಿದ ತಮ್ಮ ಭಾಷಣದಲ್ಲಿ, ಬೂತ್ ಮಟ್ಟದ ಪ್ರಚಾರಗಳನ್ನು ಬಲಪಡಿಸುವಂತೆ ಪಕ್ಷದ ಕಾರ್ಯಕರ್ತರನ್ನು ಶಾ ಕೇಳಿಕೊಂಡರು. ಇದಕ್ಕಾಗಿ "ಬೂತ್ ಸಮಿತಿಗಳನ್ನು" ಸ್ಥಾಪಿಸಬೇಕು ಎಂದರು.

ಉತ್ತರಪ್ರದೇಶ ಚುನಾವಣೆ ಸಾಮಾನ್ಯ ಚುನಾವಣೆಯಲ್ಲ. ಇದು ದೇಶವನ್ನು ಮುಂದಕ್ಕೆ ಕೊಂಡೊಯ್ಯಲು ಹಾಗೂ  ರಾಷ್ಟ್ರದ ಘನತೆಯನ್ನು ಎತ್ತಿ ಹಿಡಿಯುವ ಚುನಾವಣೆಯಾಗಿದೆ ಎಂದು ಹೇಳಿದ ಶಾ, ಕೇಂದ್ರ ಸರಕಾರದ ಉಚಿತ ಗ್ಯಾಸ್ ಸಿಲಿಂಡರ್‌ಗಳು  ಹಾಗೂ ರೈತರಿಗೆ ಪ್ರಧಾನ ಮಂತ್ರಿಯವರ ಕಾರ್ಯಕ್ರಮಗಳನ್ನು ಪಕ್ಷವು ಮುಂದಿಡಬೇಕು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News