1947ರಲ್ಲಿ ಯಾವ ಯುದ್ಧ ನಡೆಯಿತು ಎಂದು ಹೇಳಿದರೆ ನಾನು ಪದ್ಮಶ್ರೀ ವಾಪಸ್ ಕೊಡುತ್ತೇನೆ: ಮುಂದುವರಿದ ಕಂಗನಾ ಉಡಾಫೆ

Update: 2021-11-13 08:14 GMT
ಕಂಗನಾ ರಣಾವತ್ (File Photo:PTI)

ಹೊಸದಿಲ್ಲಿ: ತಮ್ಮ ಸ್ವಾತಂತ್ರ್ಯ ಹೇಳಿಕೆಗೆ ಸಾಕಷ್ಟು ವಿವಾದಕ್ಕೀಡಾಗಿರುವ ನಟಿ ಕಂಗನಾ ರಣಾವತ್, 1947 ರಲ್ಲಿ ಏನು ನಡೆಯಿತು ಎಂಬ ಕುರಿತು ಯಾರಾದರೂ ತಮಗೆ ಹೇಳಿದರೆ ತಾವು ತಮ್ಮ ಪದ್ಮ ಶ್ರೀ ಪ್ರಶಸ್ತಿಯನ್ನು ವಾಪಸ್ ನೀಡಲು ಸಿದ್ಧ ಎಂದು ಹೇಳಿಕೊಂಡಿದ್ದಾರೆ.

ಭಾರತಕ್ಕೆ 2014ರಲ್ಲಿ ನರೇಂದ್ರ ಮೋದಿ ಸರಕಾರ ಅಧಿಕಾರಕ್ಕೆ ಬಂದ ನಂತರ ಸ್ವಾತಂತ್ರ್ಯ ದೊರಕಿತು ಹಾಗೂ 1947ರಲ್ಲಿ ದೇಶಕ್ಕೆ ದೊರೆತ ಸ್ವಾತಂತ್ರ್ಯ 'ಭಿಕ್ಷೆ' ಎಂಬ ಹೇಳಿಕೆ ಈ ಹಿಂದೆ ನೀಡಿ ಕಂಗನಾ ವಿವಾದಕ್ಕೀಡಾಗಿದ್ದರು.

ಈ ಹಿನ್ನೆಲೆಯಲ್ಲಿ ಇನ್‌ಸ್ಟಾಗ್ರಾಂನಲ್ಲಿ "ಜಸ್ಟ್ ಟು ಸೆಟ್ ದಿ ರೆಕಾರ್ಡ್ಸ್ ಸ್ಟ್ರೈಟ್" ಎಂಬ ಪುಸ್ತಕದ ಕೆಲ ಆಯ್ದಭಾಗಗಳನ್ನು ಅವರು ಶೇರ್ ಮಾಡಿದ್ದಾರೆ.

"ಎಲ್ಲವೂ ಅದೇ ಸಂದರ್ಶನದಲ್ಲಿ ಸ್ಪಷ್ಟವಾಗಿದೆ. 1857ರಲ್ಲಿ ಸ್ವಾತಂತ್ರ್ಯಕ್ಕಾಗಿ ಮೊದಲ ಸಂಘಟಿತ ಹೋರಾಟ ಹಾಗೂ ಮಹಾನ್ ನಾಯಕರುಗಳಾದ ಸುಭಾಷ್ ಚಂದ್ರ ಬೋಸ್, ರಾಣಿ ಲಕ್ಷ್ಮೀಬಾಯಿ ಮತ್ತು ವೀರ್ ಸಾರ್ವರ್ಕರ್ ಜೀ ಅವರ ತ್ಯಾಗ. 1857 ಬಗ್ಗೆ ನನಗೆ ಗೊತ್ತು ಆದರೆ 1947ರಲ್ಲಿ ಯಾವ ಯುದ್ಧ ನಡೆಯಿತು ಎಂದು ನನಗೆ ತಿಳಿದಿಲ್ಲ. ಈ ನಿಟ್ಟಿನಲ್ಲಿ ಯಾರಾದರೂ ನನಗೆ ಮಾಹಿತಿ ನೀಡಿದರೆ ನಾನು ನನ್ನ ಪದ್ಮಶ್ರೀ ಪ್ರಶಸ್ತಿ ವಾಪಸ್ ನೀಡುತ್ತೇನೆ ಮತ್ತು ಕ್ಷಮೆಯಾಚಿಸುತ್ತೇನೆ, ದಯವಿಟ್ಟು ಈ ನಿಟ್ಟಿನಲ್ಲಿ ನನಗೆ ಸಹಾಯಮಾಡಿ,'' ಎಂದು ಬರೆದಿದ್ದಾರೆ.

"ನಾನು ಹುತಾತ್ಮೆ ರಾಣಿ ಲಕ್ಷ್ಮೀ ಬಾಯಿ ಕುರಿತ ಚಲನಚಿತ್ರವೊಂದರಲ್ಲಿ ಕೆಲಸ ಮಾಡಿದ್ದೇನೆ ಹಾಗೂ 1857ರ ಮೊದಲ ಸ್ವಾತಂತ್ರ್ಯ ಸಂಗ್ರಾಮದ ಕುರಿತು ಆಳವಾಗಿ ಅಧ್ಯಯನ ನಡೆಸಿದ್ದೇನೆ. ರಾಷ್ಟ್ರೀಯತೆ ಮೇಲೆದ್ದಿತ್ತು ಹಾಗೂ ಅಂತೆಯೇ ಬಲಪಂಥೀಯತೆ. ಆದರೆ ಅದೇಕೆ ಹಠಾತ್ ಆಗಿ ಸತ್ತಿತು? ಗಾಂಧಿ ಏಕೆ ಭಗತ್ ಸಿಂಗ್ ಅವರನ್ನು ಸಾಯಲು ಬಿಟ್ಟರು, ನೇತಾಜಿ ಬೋಸ್ ಏಕೆ ಹತ್ಯೆಗೀಡಾದರು ಮತ್ತು ಅವರು ಯಾವತ್ತೂ ಏಕೆ ಗಾಂಧೀಜಿಯ ಬೆಂಬಲ ಗಳಿಸಲಿಲ್ಲ? ವಿಭಜನೆಯ ಗೆರೆಯನ್ನು ಬಿಳಿಯ ವ್ಯಕ್ತಿ ಏಕೆ ಎಳೆದರು? ಸ್ವಾತಂತ್ರ್ಯವನ್ನು ಸಂಭ್ರಮಿಸುವ ಬದಲು ಭಾರತೀಯರು ಏಕೆ ಪರಸ್ಪರರನ್ನು ಹತ್ಯೆಗೈದರು? ಇವುಗಳ ಉತ್ತರವನ್ನು ಹುಡುಕುತ್ತಿದ್ದೇನೆ. ದಯವಿಟ್ಟು  ಉತ್ತರಗಳನ್ನು ಪಡೆಯಲು ಸಹಾಯ ಮಾಡಿ,'' ಎಂದು ಬರೆದಿರುವ ಅವರು "ಭೌತಿಕ ಸ್ವಾತಂತ್ರ್ಯ ನಮಗೆ ಹಿಂದೆಯೇ ದೊರಕಿರಬಹುದು ಆದರೆ ಆತ್ಮಸಾಕ್ಷಿಯ ಸ್ವಾತಂತ್ರ್ಯ 2014ರಲ್ಲಿ ದೊರಕಿತು. ಸತ್ತ ನಾಗರಿಕತೆಯೊಂದು ಮತ್ತೆ ಜೀವ ತಳೆದು ಈಗ ಎತ್ತರಕ್ಕೇರಿದೆ. ಈಗ ಮೊದಲ ಬಾರಿ ಇಂಗ್ಲಿಷ್ ಮಾತನಾಡದೇ ಇರುವುದಕ್ಕೆ ಯಾರೂ ನಮ್ಮನ್ನು ಅವಮಾನಿಸುವ ಹಾಗಿಲ್ಲ. ತಪ್ಪಿತಸ್ಥ ಭಾವನೆಯಿರುವವರಿಗೆ ಉರಿ ಅನುಭವವಾಗಬಹುದು, ಅದರ ಬಗ್ಗೆ ಏನೂ ಮಾಡುವ ಹಾಗಿಲ್ಲ, ಜೈ ಹಿಂದ್,'' ಎಂದು ಬರೆದಿದ್ದಾರೆ.

ಆಕೆಯ ಪ್ರಚೋದನಾತ್ಮಕ ಹೇಳಿಕೆಗಳಿಗೆ ಆಕೆಯ ವಿರುದ್ಧ ಪ್ರಕರಣ ದಾಖಲಿಸಬೇಕೆಂದು ಮುಂಬೈ ಪೊಲೀಸರನ್ನು ಆಪ್ ಆಗ್ರಹಿಸಿದರೆ, ಬಿಜೆಪಿ ಸಂಸದ ವರುಣ್ ಗಾಂಧಿ ಸಹಿತ ಹಲವರು ಆಕೆಯ ಹೇಳಿಕೆಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News