×
Ad

ವಿಶ್ವಕಪ್ ಸೆಮಿ ಫೈನಲ್ ಪಂದ್ಯಕ್ಕಿಂತ ಮೊದಲು ಐಸಿಯುನಲ್ಲಿದ್ದ ರಿಝ್ವಾನ್ ಗೆ ಚಿಕಿತ್ಸೆ ನೀಡಿದ್ದ ಭಾರತದ ವೈದ್ಯ

Update: 2021-11-13 14:36 IST

ದುಬೈ:  ಆಸ್ಟ್ರೇಲಿಯ ವಿರುದ್ಧದ ಟ್ವೆಂಟಿ-20 ವಿಶ್ವಕಪ್ ಸೆಮಿಫೈನಲ್ ಪಂದ್ಯಕ್ಕೂ ಎರಡು ದಿನ ಐಸಿಯುನಲ್ಲಿದ್ದ ಪಾಕಿಸ್ತಾನದ ಆರಂಭಿಕ ಆಟಗಾರ ಮುಹಮ್ಮದ್ ರಿಝ್ವಾನ್ ಗೆ ಭಾರತದ ವೈದ್ಯರೊಬ್ಬರು ಚಿಕಿತ್ಸೆ ನೀಡಿದ್ದರು ಎಂದ ವಿಚಾರ ತಿಳಿದುಬಂದಿದೆ.

ತೀವ್ರವಾದ ಎದೆಯ ಸೋಂಕಿನಿಂದ ಬಳಲುತ್ತಿದ್ದ ವಿಕೆಟ್ ಕೀಪರ್ ಬ್ಯಾಟರ್ ರಿಝ್ವಾನ್ 2 ದಿನಗಳ ಕಾಲ ಐಸಿಯುನಲ್ಲಿ ಚಿಕಿತ್ಸೆ ಪಡೆದಿದ್ದರು. ಬಳಿಕ ಚೇತರಿಸಿಕೊಂಡು ಸೆಮಿ ಫೈನಲ್ ನಲ್ಲಿ ಆಡಿದ್ದರು. ಅನಾರೋಗ್ಯವನ್ನು ಲೆಕ್ಕಿಸದೆ ಮೈದಾನಕ್ಕಿಳಿದ ರಿಝ್ವಾನ್ ಅಮೋಘ ಅರ್ಧಶತಕ ಸಿಡಿಸಿದ್ದರು. 

ಪಾಕ್ ಕ್ರಿಕೆಟಿಗನಿಗೆ ಚಿಕಿತ್ಸೆ ನೀಡಿದ ದುಬೈನ ಮೆಡಿಯೊರ್ ಆಸ್ಪತ್ರೆಯ ಶ್ವಾಸಕೋಶ ತಜ್ಞರಾದ ಸಾಹೀರ್ ಸೈನಾಲಬ್ದೀನ್, ರಿಝ್ವಾನ್ ಶೀಘ್ರವಾಗಿ ಚೇತರಿಸಿಕೊಂಡ ಬಗ್ಗೆ ಆಶ್ಚರ್ಯಚಕಿತರಾದರು.  "ಮುಜೆ ಖೇಲ್ನಾ ಹೇ. ಟೀಮ್ ಕೆ ಸಾಥ್ ರೆಹನಾ ಹೇ, (ನಾನು ತಂಡದೊಂದಿಗೆ ಆಡಲು ಬಯಸುತ್ತೇನೆ)" ಎಂದು ರಿಝ್ವಾನ್ ಐಸಿಯುನಲ್ಲಿ ಚಿಕಿತ್ಸೆ ನೀಡಿದ ವೈದ್ಯರಿಗೆ ಹೇಳಿದ್ದರು.

"ನಿರ್ಣಾಯಕ ನಾಕೌಟ್ ಪಂದ್ಯದಲ್ಲಿ ರಿಝ್ವಾನ್ ಅವರು ತಮ್ಮ ರಾಷ್ಟ್ರಕ್ಕಾಗಿ ಆಡುವ ಬಲವಾದ ಆಸೆಯನ್ನು ಹೊಂದಿದ್ದರು. ಅವರು ಬಲಶಾಲಿ, ದೃಢನಿಶ್ಚಯ ಹಾಗೂ  ಆತ್ಮವಿಶ್ವಾಸ ಹೊಂದಿದ್ದರು. ಅವರು ಚೇತರಿಸಿಕೊಂಡ ವೇಗದಿಂದ ನಾನು ಆಶ್ಚರ್ಯಚಕಿತನಾಗಿದ್ದೇನೆ" ಎಂದು ಸಾಹೀರ್ ಹೇಳಿದರು.

ರಿಝ್ವಾನ್ ಆಸ್ಪತ್ರೆಗೆ ದಾಖಲಾಗುವ ಮೊದಲು 3-5 ದಿನಗಳಿಂದ ನಿರಂತರ ಜ್ವರ, ನಿರಂತರ ಕೆಮ್ಮು ಮತ್ತು ಎದೆಯ ಬಿಗಿತದಿಂದ ಬಳಲುತ್ತಿದ್ದರು. ವೈದ್ಯಕೀಯ ತಂಡವು ತಕ್ಷಣವೇ ಅವರನ್ನು ಸ್ಥಿರಗೊಳಿಸಿತು ಮತ್ತು  ನೋವನ್ನು ಕಡಿಮೆ ಮಾಡಲು ರೋಗಲಕ್ಷಣದ ಔಷಧಿಗಳನ್ನು ನೀಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News