ಕೋವಿಡ್:ವಲಸೆ ಕಾರ್ಮಿಕರ ನಿರ್ಗಮನಕ್ಕೆ ಭಾರತದಲ್ಲಿಯ ‘ನಿಶ್ಚಲತೆ ಮೂಲಸೌಕರ್ಯ’ದ ಕೊರತೆ ಕಾರಣವಾಗಿತ್ತು;ತಜ್ಞರು

Update: 2021-11-13 17:58 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ,ನ.13: ಭಾರತದಲ್ಲಿ ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿ ವಲಸೆ ಕಾರ್ಮಿಕರ ನಿರ್ಗಮನಕ್ಕೆ ದೇಶದಲ್ಲಿ ‘ನಿಶ್ಚಲತೆ ಮೂಲಸೌಕರ್ಯ’ದ ಕೊರತೆಯು ಕಾರಣವಾಗಿತ್ತು ಎಂದು ಆಕ್ಸ್‌ಫರ್ಡ್ ವಿವಿಯ ಮಾಜಿ ಪ್ರೊಫೆಸರ್ ಹಾಗೂ ಹಾಲಿ ಜರ್ಮನಿಯ ‘ಮ್ಯಾಕ್ಸ್ ಪ್ಲಾಂಕ್ ಇನ್‌ಸ್ಟಿಟ್ಯೂಷನ್ ಫಾರ್ ಸೋಷಿಯಲ್ ಆ್ಯಂಥ್ರೊಪಾಲಜಿ’ಯ ನಿರ್ದೇಶಕ ಬಿಯಾವೊ ಝಿಯಾಂಗ್ ಅವರು ಹೇಳಿದರು.

 ಝಿಯಾಂಗ್ ‘ನಿಶ್ಚಲತೆ ಮೂಲಸೌಕರ್ಯ’ವನ್ನು ಲಾಕ್‌ಡೌನ್‌ಗಳ ಸಂದರ್ಭದಲ್ಲಿ ಚಲನವಲನಗಳು ಸೀಮಿತಗೊಂಡ ಸಮಯದಲ್ಲಿ ದೇಶಗಳ ಕಾರ್ಯ ನಿರ್ವಹಣೆಗೆ ನೆರವಾಗಲು ಹಲವಾರು ಸರಕಾರಗಳು ಸ್ಥಾಪಿಸಿದ್ದ ವ್ಯವಸ್ಥೆ ಎಂದು ಬಣ್ಣಿಸಿದರು. 2020 ಮಾರ್ಚ್ ಮತ್ತು ಮೇ ನಡುವೆ ಭಾರತದಲ್ಲಿ ಕೋಟ್ಯಂತರ ವಲಸೆ ಕಾರ್ಮಿಕರು ಕಾಲ್ನಡಿಗೆಯಲ್ಲಿ ತಮ್ಮ ಹುಟ್ಟೂರುಗಳಿಗೆ ತೆರಳುವಂತಾಗಿತ್ತು ಮತ್ತು ತನ್ನ ಅಭಿಪ್ರಾಯದಲ್ಲಿ ‘ನಿಶ್ಚಲತೆ ಮೂಲಸೌಕರ್ಯ’ದ ಕೊರತೆ ಇದಕ್ಕೆ ಕಾರಣವಾಗಿತ್ತು ಎಂದರು.

ಇನ್‌ಸ್ಟಿಟ್ಯೂಟ್ ಆಫ್ ಚೈನಾ ಸ್ಟಡೀಸ್ (ಐಸಿಎಸ್) ಶುಕ್ರವಾರ ಆಯೋಜಿಸಿದ್ದ ಚೀನಾ ಅಧ್ಯಯನಗಳ ಕುರಿತು ಅಖಿಲ ಭಾರತ ವರ್ಚುವಲ್ ಸಮ್ಮೇಳನದ ಅಂಗವಾಗಿ ‘ಕೋವಿಡ್‌ನಿಂದ ಚೀನಾ ಮತ್ತು ಭಾರತದಲ್ಲಿ ಉಂಟಾಗಿದ್ದ ಸಾಮಾಜಿಕ

ಆಯಾಮಗಳು ಮತ್ತು ವ್ಯತ್ಯಯಗಳು’ ವಿಚಾರಗೋಷ್ಠಿಯಲ್ಲಿ ಝಿಯಾಂಗ್ ಮಾತನಾಡುತ್ತಿದ್ದರು.

ಝಿಯಾಂಗ್ ಹೇಳುವಂತೆ ಚಲನಶೀಲತೆ ಮೂಲಸೌಕರ್ಯವು ಅಂತರ್‌ಸಂಪರ್ಕಿತ ತಂತ್ರಜ್ಞಾನಗಳು,ಸಂಸ್ಥೆಗಳು ಮತ್ತು ಚಲನಶೀಲತೆಗೆ ಅನುಕೂಲವನ್ನು ಕಲ್ಪಿಸುವ ಅಂಶಗಳ ವ್ಯವಸ್ಥೆಯಾಗಿದೆ. ಆದಾಗ್ಯೂ ಸಾಂಕ್ರಾಮಿಕ ಮತ್ತು ಲಾಕ್‌ಡೌನ್‌ಗಳಿಂದಾಗಿ ಸರಕಾರಗಳು ಇದಕ್ಕೆ ವಿಲೋಮವಾಗಿ ‘ನಿಶ್ಚಲತೆ ಮೂಲಸೌಕರ್ಯ’ದ ಬಗ್ಗೆ ಯೋಚಿಸುವಂತಾಗಿತ್ತು. ಗೋಷ್ಠಿಯಲ್ಲಿ ಭಾಗವಹಿಸಿದ್ದ ಇತರ ತಜ್ಞರು ಗ್ರಾಮೀಣ ಭಾರತದಲ್ಲಿ ಪೂರೈಕೆ ಸೇವೆಗಳು ಮತ್ತು ಸ್ಥಿತಿಗಳು ಹಾಗೂ ಮೂಲಸೌಕರ್ಯ ಬೆಂಬಲವನ್ನು ಮತ್ತು ಪರಿಹಾರವನ್ನು ಒದಗಿಸುವಲ್ಲಿ ಸರಕಾರದ ಪಾತ್ರದ ಕುರಿತು ಅವಲೋಕನವನ್ನು ನಡೆಸಿದರು.

ಆಹಾರ ಪೂರೈಕೆ ಸೇವೆಗಳ ಮೇಲೆ ವಿಶೇಷ ಗಮನದೊಂದಿಗೆ ಭಾರತ ಮತ್ತು ಚೀನಾದಲ್ಲಿ ಸಾಂಕ್ರಾಮಿಕದ ಸಂದರ್ಭದಲ್ಲಿ ಡಿಜಿಟಲ್ ಆರ್ಥಿಕತೆಯಲ್ಲಿನ ನಿಯಂತ್ರ ಮಾರ್ಗಸೂಚಿಗಳನ್ನು ಹೋಲಿಸಿದ ಸ್ವತಂತ್ರ ಪತ್ರಕರ್ತೆ ಸೌಮ್ಯಾ ಅಶೋಕ ಅವರು, ಸಾಂಕ್ರಾಮಿಕವು ಬದಲಿಸಿರುವ ಒಂದು ಪ್ರಮುಖ ಅಂಶವೆಂದರೆ,ಅದು ‘ಅಗೋಚರ ಕೆಲಸಗಾರ’ರಾದ ಡೆಲಿವರಿ ಬಾಯ್‌ಗಳನ್ನು ಮುಂಚೂಣಿ ಕಾರ್ಯಕರ್ತರನ್ನಾಗಿ ಒತ್ತು ನೀಡಿದೆ. ಚೀನಿ ಡಿಜಿಟಲ್ ಸೇವೆಗಳ ವೇದಿಕೆ ಮೀಚ್ಯುವಾನ್ ಮತ್ತು ಅದರ ಪ್ರತಿಸ್ಪರ್ಧಿ ಇಲೆ ಡಾಟ್ ಮಿ ಹಾಗೂ ಭಾರತದಲ್ಲಿ ಸ್ವಿಗ್ಗಿ ಮತ್ತು ರೊಮ್ಯಾಟೊ ಸಾಂಕ್ರಾಮಿಕದ ಸಂದರ್ಭದಲ್ಲಿ ಹೆಚ್ಚು ಲಾಭ ಗಳಿಸಿದ್ದವು,ಆದರೆ ಇದಕ್ಕಾಗಿ ಕಡಿಮೆ ಸಂಬಳವನ್ನು ಪಡೆದಿದ್ದ ಡೆಲಿವರಿ ಬಾಯ್‌ಗಳು ಬೆಲೆ ತೆತ್ತಿದ್ದರು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News