ವಂಚನೆ ಪ್ರಕರಣ:ನಟಿ ಶಿಲ್ಪಾ ಶೆಟ್ಟಿ,ರಾಜ್ ಕುಂದ್ರಾ ವಿರುದ್ಧ ಎಫ್‌ಐಆರ್

Update: 2021-11-14 08:05 GMT

ಮುಂಬೈ: ನಿತಿನ್ ಬಾರೈ ಎಂಬ ವ್ಯಕ್ತಿ ನೀಡಿದ ದೂರಿನ ಮೇರೆಗೆ ನಟಿ ಶಿಲ್ಪಾ ಶೆಟ್ಟಿ ಹಾಗೂ ಅವರ ಪತಿ ರಾಜ್ ಕುಂದ್ರಾ ವಿರುದ್ಧ ಬಾಂದ್ರಾ ಪೊಲೀಸ್ ಠಾಣೆಯಲ್ಲಿ ಶನಿವಾರ ಎಫ್‌ಐಆರ್ ದಾಖಲಾಗಿದೆ ಎಂದು ಪಿಟಿಐ ವರದಿ ಮಾಡಿದೆ.

ಜುಲೈ 2014 ರಲ್ಲಿ ಎಸ್‌ಎಫ್‌ಎಲ್ ಫಿಟ್‌ನೆಸ್ ಕಂಪನಿಯ ನಿರ್ದೇಶಕ ಕಾಶಿಫ್ ಖಾನ್, ಶೆಟ್ಟಿ, ಕುಂದ್ರಾ ಹಾಗೂ ಇತರರು ಲಾಭ ಗಳಿಸಲು ಉದ್ಯಮಕ್ಕೆ 1.51 ಕೋಟಿ ರೂಪಾಯಿ ಹೂಡಿಕೆ ಮಾಡುವಂತೆ ನನ್ನನ್ನು ಕೇಳಿದ್ದರು. ಎಸ್‌ಎಫ್‌ಎಲ್ ಫಿಟ್‌ನೆಸ್ ಕಂಪನಿಯು ನನಗೆ ಫ್ರಾಂಚೈಸಿಯನ್ನು ನೀಡುತ್ತದೆ ಹಾಗೂ  ನೆರೆಯ ಪುಣೆಯ ಹಡಪ್‌ಸರ್ ಮತ್ತು ಕೋರೆಗಾಂವ್‌ನಲ್ಲಿ ಜಿಮ್ ಮತ್ತು ಸ್ಪಾ ತೆರೆಯುತ್ತದೆ ಎಂದು ನನಗೆ ಭರವಸೆ ನೀಡಲಾಯಿತು ಎಂದು ದೂರುದಾರ ಹೇಳಿಕೊಂಡಿದ್ದಾನೆ. ಆದರೆ ಅದು ಕಾರ್ಯರೂಪಕ್ಕೆ ಬರಲಿಲ್ಲ ಎಂದು  ಎಫ್ ಐಆರ್ ನಲ್ಲಿ ತಿಳಿಸಲಾಗಿದೆ.

ದೂರುದಾರ ತನ್ನ ಹಣವನ್ನು ಮರಳಿ ಕೇಳಿದಾಗ ಆತನಿಗೆ ಬೆದರಿಕೆ ಹಾಕಲಾಗಿದೆ ಎಂದು ದೂರನ್ನು ಉಲ್ಲೇಖಿಸಿ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ದೂರಿನ ಆಧಾರದ ಮೇಲೆ ಬಾಂದ್ರಾ ಪೊಲೀಸರು 420 (ವಂಚನೆ), 120-ಬಿ (ಕ್ರಿಮಿನಲ್ ಪಿತೂರಿ), 506 (ಕ್ರಿಮಿನಲ್ ಬೆದರಿಕೆ) ಮತ್ತು 34 (ಸಾಮಾನ್ಯ ಉದ್ದೇಶ) ಸೇರಿದಂತೆ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News