ಕಾಸಗಂಜ್ ಕಸ್ಟಡಿ ಸಾವು ಪ್ರಕರಣ: ಉ.ಪ್ರದೇಶ ಪೊಲೀಸರಿಂದ ಅಪರಿಚಿತ ಅಧಿಕಾರಿಗಳ ವಿರುದ್ಧ ಎಫ್ಐಆರ್

Update: 2021-11-14 15:17 GMT

ಲಕ್ನೋ,ನ.14: ಕಾಸಗಂಜ್ ಪೊಲೀಸ್ ಠಾಣೆಯಲ್ಲಿ 22ರ ಹರೆಯದ ಯುವಕನ ಸಾವಿಗೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಪೊಲೀಸರು ಅಪರಿಚಿತ ಪೊಲೀಸ್ ಅಧಿಕಾರಿಗಳ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.

ತನ್ನ ಮಗನನ್ನು ಪೊಲೀಸ್ ಕಸ್ಟಡಿಯಲ್ಲಿ ಕೊಲ್ಲಲಾಗಿದೆ ಎಂದು ಆರೋಪಿಸಿ ಮೃತ ಅಲ್ತಾಫ್ನ ತಂದೆ ಚಾಂದ್ ಮಿಯಾ ಅವರು ದೂರು ಸಲ್ಲಿಸಿದ ಬಳಿಕ ಪ್ರಕರಣವು ದಾಖಲಾಗಿದೆ.

ಹಿಂದು ಮಹಿಳೆಯೋರ್ವಳನ್ನು ಅಪಹರಿಸಿದ್ದ ಆರೋಪವನ್ನು ಹೊತ್ತಿದ್ದ ಅಲ್ತಾಫ್ನನ್ನು ಸೋಮವಾರ ವಿಚಾರಣೆಗಾಗಿ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿತ್ತು. ಮಂಗಳವಾರ ಸಂಜೆ ಆತನ ಶವವು ಠಾಣೆಯ ವಾಷ್ರೂಮಿನಲ್ಲಿ ಪತ್ತೆಯಾಗಿತ್ತು.

ಅಲ್ತಾಫ್ ತನ್ನ ಜಾಕೆಟ್ ನ ಹುಡ್ ನಲ್ಲಿಯ ದಾರವನ್ನು ಬಳಸಿ ವಾಷ್ರೂಮಿನಲ್ಲಿಯ ನೀರಿನ ನಲ್ಲಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿಕೊಂಡಿದ್ದಾರೆ. ಆದರೆ ಅಲ್ತಾಫ್ ನನ್ನು ಕಸ್ಟಡಿಯಲ್ಲಿ ಹತ್ಯೆ ಮಾಡಲಾಗಿದೆ ಎಂದು ಆತನ ಕುಟುಂಬವು ಆರೋಪಿಸಿದೆ.

ಪೊಲೀಸರ ಹೇಳಿಕೆಯನ್ನು ಪ್ರಶ್ನಿಸಿರುವ ಚಾಂದ್ ಮಿಯಾ,ಐದಡಿ ಎತ್ತರದ ವ್ಯಕ್ತಿ ಎರಡು ಅಡಿ ಎತ್ತರದ ನಲ್ಲಿಗೆ ನೇಣು ಬಿಗಿದುಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿರುವುದನ್ನು ಎಫ್ಐಆರ್ ಉಲ್ಲೇಖಿಸಿದೆ.
 
ಪೊಲೀಸರ ಬಲವಂತದಿಂದ ತಾನು ಪತ್ರವೊಂದಕ್ಕೆ ಸಹಿ ಹಾಕಿದ್ದೆ,ಅದರಲ್ಲೇನಿತ್ತು ಎನ್ನುವುದು ತನಗೆ ಗೊತ್ತಿರಲಿಲ್ಲ ಎಂದು ಚಾಂದ್ ಮಿಯಾ ಗುರುವಾರ ಹೇಳಿದ್ದರು.
ಉದ್ದೇಶಿತ ಪತ್ರದಲ್ಲಿ ಚಾಂದ್ ಮಿಯಾ ತನ್ನ ಮಗನ ಸಾವಿಗೆ ತಾನು ಉ.ಪ್ರ.ಪೊಲೀಸರನ್ನು ದೂರುತ್ತಿಲ್ಲ ಎಂದು ಹೇಳಿದ್ದರು.

ಅಲ್ತಾಫ್ ಖಿನ್ನತೆಗೊಳಗಾಗಿದ್ದ ಎಂದೂ ಪತ್ರದಲ್ಲಿ ಹೇಳಲಾಗಿತ್ತು. ಮಹಿಳೆಯ ಕುಟುಂಬದ ವ್ಯಕ್ತಿಯೋರ್ವ ತನ್ನ ಮಗನಿಗೆ ತಲೆಯನ್ನು ಕಡಿಯುವುದಾಗಿ ಬೆದರಿಕೆಯೊಡ್ಡಿದ್ದ ಎಂದು ಚಾಂದ್ ಮಿಯಾ ಹೇಳಿದ್ದನ್ನು ಮಾಧ್ಯಮಗಳು ರವಿವಾರ ವರದಿ ಮಾಡಿವೆ.

ತಾನು ಪೊಲೀಸ್ ಠಾಣೆಯನ್ನು ತಲುಪಿದಾಗ ತನ್ನ ಮಗನಿಗೆ ಚಿತ್ರಹಿಂಸೆ ನೀಡುತ್ತಿದ್ದಾರೆ ಎಂದು ತನಗೆ ಅನಿಸಿತ್ತು, ಆದರೆ ತನ್ನನ್ನು ಪೊಲೀಸರು ವಾಪಸ್ ಕಳುಹಿಸಿದ್ದರು.ತಾವು ಶವವನ್ನು ಪಡೆದುಕೊಂಡಾಗ ಪಾದಗಳು ಊದಿಕೊಂಡಿದ್ದವು ಮತ್ತು ಕುತ್ತಿಗೆಯಲ್ಲಿ ಗಾಯದ ಗುರುತಿತ್ತು ಎಂದೂ ಚಾಂದ್ ಮಿಯಾ ಹೇಳಿದ್ದಾರೆ.

ಐಪಿಸಿಯ ಕಲಂ 302ರಡಿ ಅಪರಿಚಿತ ಪೊಲೀಸರ ವಿರುದ್ಧ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ ಎಂದು ತಿಳಿಸಿದ ಕಾಸಗಂಜ್ ಎಸ್ಪಿ ಆರ್.ಪಿ.ಬೋತ್ರೆ ಅವರು,ಮೃತ ಅಲ್ತಾಫ್ ಮತ್ತು ಆತನ ಸ್ನೇಹಿತ ಅಪಹರಿಸಿದ್ದರು ಎನ್ನಲಾಗಿರುವ ಮಹಿಳೆ ಶುಕ್ರವಾರ ಸಂಜೆ ಪತ್ತೆಯಾಗಿದ್ದಾಳೆ. ನ್ಯಾಯಾಲಯವು ಆಕೆಯ ಹೇಳಿಕೆಯನ್ನು ದಾಖಲಿಸಿಕೊಳ್ಳಲಿದೆ ಎಂದು ಹೇಳಿದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಪೊಲಿಸರನ್ನು ಈಗಾಗಲೇ ಅಮಾನತುಗೊಳಿಸಲಾಗಿದೆ. ಕಸ್ಟಡಿ ಸಾವಿನ ಕುರಿತು 15 ದಿನಗಳಲ್ಲಿ ವರದಿಯನ್ನು ಸಲ್ಲಿಸುವಂತೆ ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗವು ಶುಕ್ರವಾರ ಉ.ಪ್ರದೇಶದ ಡಿಜಿಪಿ ಮತ್ತು ಮುಖ್ಯ ಕಾರ್ಯದರ್ಶಿಗಳಿಗೆ ನಿರ್ದೇಶ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News