ಕಂಗನಾರ ಪದ್ಮಶ್ರೀ ಹಿಂಪಡೆಯಲು ಆಗ್ರಹಿಸಿ ರಾಷ್ಟ್ರಪತಿಗೆ ದಿಲ್ಲಿ ಮಹಿಳಾ ಆಯೋಗದ ಅಧ್ಯಕ್ಷೆ ಪತ್ರ

Update: 2021-11-14 17:55 GMT

 ಹೊಸದಿಲ್ಲಿ, ನ.14: ಬಾಲಿವುಡ್ ನಟಿ ಕಂಗನಾ ರಾಣಾವತ್ ಅವರಿಗೆ ನೀಡಿರುವ ಪದ್ಮಶ್ರೀ ಪ್ರಶಸ್ತಿಯನ್ನು ಹಿಂಪಡೆಯುಬೇಕೆಂದು ಕೋರಿ ದಿಲ್ಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ್ ಅವರು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ರವಿವಾರ ಪತ್ರ ಬರೆದಿದ್ದಾರೆ.

 ಬುಧವಾರ ನಡೆದ ಟೈಮ್ಸ್ ನೌ ಶೃಂಗಸಭೆಯಲ್ಲಿ ಮಾತನಾಡಿದ್ದ ಕಂಗನಾ ರಣಾವತ್ 1947ರಲ್ಲಿ ದೊರೆತಿದ್ದುದು ಸ್ವಾತಂತ್ರವಲ್ಲ. ಅದು ಭಿಕ್ಷೆಯಾಗಿತ್ತು. ನಿಜವಾದ ಸ್ವಾತಂತ್ರವು 2014ರಲ್ಲಿ ದೊರೆತಿದೆ’’ ಎಂದು ಕಂಗನಾ ಹೇಳಿದ್ದರು. ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರವು 2014ರಲ್ಲಿ ಕೇಂದ್ರದಲ್ಲಿ ಅಧಿಕಾರಕ್ಕೇರಿದ ವರ್ಷವನ್ನು ಉಲ್ಲೇಖಿಸಿ ಅವರು ಈ ಹೇಳಿಕೆಯನ್ನು ನೀಡಿದ್ದರು
 
ಕಂಗನಾ ರಾಣಾವತ್ ಅವರು ಗಾಂಧೀಜಿ, ಭಗತ್‌ ಸಿಂಗ್ ಅವರ ಹುತಾತ್ಮತೆಯನ್ನು ಅಣಕಿಸುತ್ತಿದ್ದಾರೆ ಮತ್ತು ಕೋಟ್ಯಂತರ ಜನರ ಬಲಿದಾನದಿಂದಾಗಿ ಪಡೆಯಲಾದ ಸ್ವಾತಂತ್ರವನ್ನು ಭಿಕ್ಷೆಯೆಂದು ಪರಿಗಣಿಸುತ್ತಿರುವ ಮಹಿಳೆ ಎಂದು ಮಾಲಿವಾಲ್ ರವಿವಾರ ಟ್ವೀಟ್ ಮಾಡಿದ್ದಾರೆ. ಕಂಗನಾ ಅವರಿಗೆ ಪ್ರಶಸ್ತಿಯಲ್ಲ ಚಿಕಿತ್ಸೆ ನೀಡಬೇಕಾಗಿದೆ ಎಂದು ಅವರು ಕಟಕಿಯಾಡಿದ್ದಾರೆ.

ಕಂಗನಾ ಅವರ ಹೇಳಿಕೆಯು ದೇಶದ್ರೋಹದ್ದಾಗಿದ್ದು, ಕೋಟ್ಯಂತರ ಜನತೆಗೆ ನೋವುಂಟು ಮಾಡಿದೆ ಎಂದು ಮಾಲಿವಾಲ್ ಅವರು ರಾಷ್ಟ್ರಪತಿಯವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

‘‘ 1857ರ ಸಿಪಾಯಿ ದಂಗೆ, ಚಂಪಾರಣ್ಯ ಸತ್ಯಾಗ್ರಹ, ಖಿಲಾಫತ್ ಚಳವಳಿ, ಕ್ವಿಟ್ ಇಂಡಿಯಾ ಚಳವಳಿ, ದಂಡಿ ಯಾತ್ರೆ, ಅಸಹಕಾರ ಚಳವಳಿ ಮತ್ತಿತರ ಅಸಂಖ್ಯಾತ ಪ್ರತಿಭಟನೆಗಳು ಹಾಗೂ ಕೋಟ್ಯಂತರ ಜನರ ಬಲಿದಾನಗಳನ್ನು ತನ್ನ ಅಸಂವೇದನಕಾರಿ ಹಾಗೂ ಚಿಂತನಾರಹಿತ ಸುಳ್ಳುಗಳ ಮೂಲಕ ಕಂಗನಾ ಅವರು ಕ್ಷುಲ್ಲಕಗೊಳಿಸಿದ್ದಾರೆ’ ಎಂದು ಮಲಿವಾಲ್ ಪತ್ರದಲ್ಲಿ ಹೇಳಿದ್ದಾರೆ.
  
ಬ್ರಿಟಿಶ್ ಆಳ್ವಿಕೆಯ ವಿರುದ್ಧ ಪ್ರತಿಭಟನೆ ನಡೆಸಲು ಜಲಿಯಾನಾವಾಲಾಭಾಗ್ನಲ್ಲಿ ಜಮಾಯಿಸಿದ ಜನರ ಹತ್ಯಾಕಾಂಡವನ್ನು ನಾವು ಮರೆಯಲು ಹೇಗೆ ಸಾಧ್ಯ?. ನಮ್ಮ ಇತಿಹಾಸದ ಈ ಅಧ್ಯಾಯಗಳು ಭಿಕ್ಷೆಯೇ ಎಂದು ಅವರು ಪ್ರಶ್ನಿಸಿದ್ದಾರೆ. ದೇಶದ್ರೋಹದ ಹೇಳಿಕೆ ನೀಡಿದ್ದಕ್ಕಾಗಿ ಕಂಗನಾ ವಿರುದ್ಧ ಎಫ್ಐಆರ್ ದಾಖಲಾಗುವಂತೆ ನೋಡಿಕೊಳ್ಳಬೇಕೆಂದು ಮಾಲಿವಾಲ್ಅವರು ಪತ್ರದಲ್ಲಿ ರಾಷ್ಟ್ರಪತಿಯವರನ್ನು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News