ಮಕ್ಕಳ ವಿರುದ್ಧದ ಸೈಬರ್ ಅಪರಾಧ ಪ್ರಕರಣಗಳಲ್ಲಿ ಶೇ.400ರಷ್ಟು ಏರಿಕೆ: ಎನ್‌ ಸಿಆರ್‌ ಬಿ ವರದಿ

Update: 2021-11-14 18:40 GMT

ಹೊಸದಿಲ್ಲಿ, ನ. 14: 2019ನೇ ಇಸವಿಗೆ ಹೋಲಿಸಿದರೆ 2020ರಲ್ಲಿ ಮಕ್ಕಳ ವಿರುದ್ಧದ ಸೈಬರ್ ಅಪರಾಧ ಪ್ರಕರಣಗಳಲ್ಲಿ ಶೇ.400ಕ್ಕಿಂತಲೂ ಅಧಿಕ ಏರಿಕೆಯಾಗಿದೆ. ಅವುಗಳಲ್ಲಿ ಬಹುತೇಕ ಪ್ರಕರಣಗಳು ಅಪ್ರಾಪ್ತ ವಯಸ್ಸಿನ ಮಕ್ಕಳನ್ನು ಲೈಂಗಿಕವಾಗಿ ಬಿಂಬಿಸುವ ವಿಷಯಗಳನ್ನು ಪ್ರಕಟಿಸಿದ ಹಾಗೂ ಪ್ರಸಾರ ಮಾಡಿರುವುದಕ್ಕೆ ಸಂಬಂಧಿಸಿದ್ದಾಗಿವೆ ಎಂದು ರಾಷ್ಟ್ರೀಯ ಅಪರಾಧ ದಾಖಲೆಗಳ ವಿಭಾಗ (ಎನ್‌ ಸಿಆರ್‌ ಬಿ) ದ ವರದಿ ತಿಳಿಸಿದೆ.

ಮಕ್ಕಳ ವಿರುದ್ಧದ ಸೈಬರ್ ಅಪರಾಧ ಪ್ರಕರಣಗಳು ಗರಿಷ್ಠ ಸಂಖ್ಯೆಯಲ್ಲಿ ದಾಖಲಾಗಿರುವ ರಾಜ್ಯಗಳ ಸಾಲಿನಲ್ಲಿ ಉತ್ತರಪ್ರದೇಶ (170), ಕರ್ನಾಟಕ (144), ಮಹಾರಾಷ್ಟ್ರ (137), ಕೇರಳ (107) ಹಾಗೂ ಒಡಿಶಾ (71) ಕ್ರಮವಾಗಿ ಮೊದಲ ಐದು ಸ್ಥಾನಗಳಲ್ಲಿವೆ.
 
ಮಕ್ಕಳ ವಿರುದ್ಧದ ಆನ್ಲೈನ್ ಅಪರಾಧಗಳ 842 ಪ್ರಕರಣಗಳ ಪೈಕಿ 738 ಪ್ರಕರಣಗಳಲ್ಲಿ ಮಕ್ಕಳನ್ನು ಲೈಂಗಿಕವಾದ ಚಟುವಟಿಕೆಯಲ್ಲಿ ತೋರಿಸುವಂತಹ ವಿಷಯಗಳನ್ನು ಪ್ರಕಟಿಸಿದ ಅಥವಾ ಪ್ರಸಾರ ಮಾಡಿದ್ದಕ್ಕೆ ಸಂಬಂಧಿಸಿದ್ದಾಗಿದೆ.
  
2019ರಲ್ಲಿ 164 ಮಕ್ಕಳ ವಿರುದ್ಧದ ಸೈಬರ್ ಅಪರಾಧ ಪ್ರಕರಣಗಳು ವರದಿಯಾಗಿತ್ತು. 2018ರಲ್ಲಿ 117 ಹಾಗೂ 2017ರಲ್ಲಿ 79 ಅಂತಹ ಪ್ರಕರಣಗಳು ವರದಿಯಾಗಿದ್ದವು. 2020ರಲ್ಲಿ ಮಕ್ಕಳ ವಿರುದ್ಧ ಸೈಬರ್ ಅಪರಾಧದ ಪ್ರಕರಣಗಳ ಸಂಖ್ಯೆ ಸಣ್ಣದಾಗಿಯೇ ಉಳಿದಿದ್ದರೂ, ಅದು 2019ಕ್ಕಿಂತ ಅಧಿಕವಾಗಿರುವುದು ಕಳವಳಕಾರಿಯೆಂದು ಎನ್ಸಿಆರ್ಬಿ ವರದಿ ಅಭಿಪ್ರಾಯಿಸಿದೆ.
 
ಶಿಕ್ಷಣ ಹಾಗೂ ಇತರ ಸಂವಹನ ಉದ್ದೇಶಗಳಿಗಾಗಿ ಮಕ್ಕಳು ಅಧಿಕ ಸಮಯವನ್ನು ಅಂತರ್ಜಾಲದಲ್ಲಿ ಕಳೆಯುತ್ತಿರುವುದರಿಂದ ಮಕ್ಕಳು ಆನ್ಲೈನ್ ಲೈಂಗಿಕ ಕಿರುಕುಳ, ಲೈಂಗಿಕ ಆಮಿಷಕ್ಕೊಳಗಾಗುವಿಕೆ, ಲೈಂಗಿಕ ಸಂದೇಶಗಳ ರವಾನೆ, ಅಶ್ಲೀಲ ಚಿತ್ರಗಳ ವೀಕ್ಷಣೆ, ಸೈಬರ್ ಬೆದರಿಕೆ ಮತ್ತಿತರ ಹಲವಾರು ಅಪಾಯಗಳಿಗೆ ಸುಲಭವಾಗಿ ತುತ್ತಾಗುತ್ತಿದ್ದಾರೆಂದು ವರದಿ ಹೇಳಿದೆ.

ಕೋವಿಡ್19 ಹಾವಳಿಯ ಸಂದರ್ಭದಲ್ಲಿ ಸೋಂಕು ನಿಯಂತ್ರಣಕ್ಕಾಗಿ ಕಳೆದ ವರ್ಷ ದೇಶಾದ್ಯಂತ ಲಾಕ್ಡೌನ್ ಹೇರಿದ ಬಳಿಕ ದೇಶಾದ್ಯಂತ ಶಾಲೆಗಳನ್ನು ಮುಚ್ಚಲಾಗಿತ್ತು ಹಾಗೂ ಇದರ ಪರಿಣಾಮವಾಗಿ ಮಕ್ಕಳಿಗೆ ಆನ್ಲೈನ್ ಮೂಲಕ ಶಿಕ್ಷಣವನ್ನು ನೀಡುವ ವ್ಯವಸ್ಥೆ ಆರಂಭವಾಗಿತ್ತು. ಇದರಿಂದಾಗಿ ಮಕ್ಕಳಿಗೆ ಮನರಂಜನೆ, ಸಾಮಾಜಿಕ ಹಾಗೂ ಶೈಕ್ಷಣಿಕ ಉದ್ದೇಶಗಳಿಗಾಗಿ ಇನ್ನೂ ಹೆಚ್ಚಿನ ಸಮಯವನ್ನು ಆನ್ಲೈನ್ನಲ್ಲಿ ಕಳೆಯಲು ಸಾಧ್ಯವಾಯಿತು. ಇದರ ಜೊತೆ ಎದುರಾಗುವ ಅಪಾಯಗಳ ಬಗ್ಗೆ ಹೆಚ್ಚಿನ ಮಕ್ಕಳಿಗೆ ಅರಿವಿರಲಿಲ್ಲವೆಂದು ವರದಿ ಹೇಳಿದೆ.
 
ಕೊರೋನ ಹಾವಳಿ ಸಂದರ್ಭ ಲಾಕ್ಡೌನ್ ಹಾಗೂ ಶಾಲೆಗಳ ಮುಚ್ಚುಗಡೆಯಿಂದಾಗಿ ಮಕ್ಕಳು ಸಾಮಾಜಿಕವಾಗಿ ಬೆರೆಯುವ ಅವಕಾಶ ತಪ್ಪಿಹೋದುದು ಕೂಡ ಅವರ ಮನೋಸಾಮಾಜಿಕ ಯೋಗಕ್ಷೇಮದ ಮೇಲೆ ಪರಿಣಾಮ ಬೀರಿದೆಯೆಂದು ಮಕ್ಕಳ ಹಕ್ಕುಗಳ ಸಂಸ್ಥೆ ಕ್ರೈನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪೂಜಾ ಮರ್ವಾಹ ತಿಳಿಸಿದ್ದಾರೆ.

2020ರಲ್ಲಿ ಶೇ.13ರಷ್ಟು ಮಕ್ಕಳು ಹಾಗೂ 25 ವರ್ಷಕ್ಕಿಂತ ಕೆಳವಯಸ್ಸಿನವರು ಮನೆಯಲ್ಲಿ ಇಂಟರ್ನೆಟ್ ಸೌಲಭ್ಯವನ್ನು ಪಡೆದುಕೊಂಡಿದ್ದರು ಎಂದು ವಿಶ್ವಸಂಸ್ಥೆಯ ಮಕ್ಕಳ ಶಿಕ್ಷಣ ನಿಧಿ (ಯುನಿಸೆಫ್) ವರದಿ ಇತ್ತೀಚೆಗೆ ಬಹಿರಂಗಪಡಿಸಿತ್ತು. ಮಧ್ಯಮ ಆದಾಯದ ರಾಷ್ಟ್ರಗಳ ಶೇ.14ರಷ್ಟು ಶಾಲಾ ವಯಸ್ಸಿನ (3ರಿಂದ 17 ವರ್ಷ) ಮಕ್ಕಳು ಮನೆಯಲ್ಲಿ ಅಂತರ್ಜಾಲ ಸೌಲಭ್ಯ ಪಡೆದುಕೊಂಡಿದ್ದಾರೆಂದು ಅದು ತಿಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News