"ನನಗೆ ಮುಹಮ್ಮದ್ ಶಮಿ ಚಾಂಪಿಯನ್": ಆನ್ ಲೈನ್ ನಿಂದನೆಗಳ ಕುರಿತು ರವಿಶಾಸ್ತ್ರಿ ಹೇಳಿಕೆ
ಹೊಸದಿಲ್ಲಿ: ಭಾರತೀಯ ಕ್ರಿಕೆಟ್ ತಂಡದ ಪ್ರಮುಖ ಬೌಲರ್ ಗಳಲ್ಲೊಬ್ಬರಾದ ಮುಹಮ್ಮದ್ ಶಮಿಯವರು ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ್ದಕ್ಕೆ ಅವರ ವಿರುದ್ಧ ವ್ಯಾಪಕ ಆನ್ ಲೈನ್ ನಿಂದನೆಗಳು ನಡೆದಿದ್ದವು. ಈ ಕುರಿತು ಮಾತನಾಡಿದ ಭಾರತೀಯ ಕ್ರಿಕೆಟ್ ತಂಡದ ಮಾಜಿ ಕೋಚ್ ರವಿಶಾಸ್ತ್ರಿ "ನನಗೆ ಮುಹಮ್ಮದ್ ಶಮಿ ಓರ್ವ ಚಾಂಪಿಯನ್. ನಾವು ಎಲ್ಲಾ ಸಂದರ್ಭಗಳಲ್ಲೂ ಒಗ್ಗಟ್ಟಿನಲ್ಲಿರುತ್ತೇವೆ" ಎಂದು ಹೇಳಿಕೆ ನೀಡಿದ್ದಾರೆ.
"ನಾನು ನ್ಯೂಸ್ ಗಳನ್ನು ಹೆಚ್ಚಾಗಿ ಓದುವುದಿಲ್ಲ. ನನಗೆ ಈ ವಿಚಾರ ತಡವಾಗಿ ತಿಳಿದು ಬಂತು ಮತ್ತು ನಾನು ಅಚ್ಚರಿಗೊಳಗಾದೆ. ನನಗೆ, ಮುಹಮ್ಮದ್ ಶಮಿ ಓರ್ವ ಚಾಂಪಿಯನ್. ಕಳೆದ ಐದು ವರ್ಷಗಳಿಂದ ಅವರು ನಮ್ಮ ತಂಡದ ಅವಿಭಾಜ್ಯ ಅಂಗವಾಗಿದ್ದಾರೆ. ನಮ್ಮ ಎಲ್ಲಾ ಗೆಲುವಿನಲ್ಲಿ ಮುಹಮ್ಮದ್ ಶಮಿ, ಇಶಾಂತ್, ಬುಮ್ರಾ, ಉಮೇಶ್ ಯಾದವ್ ಉತ್ತಮ ಪ್ರದರ್ಶನ ನೀಡಿದ್ದಾರೆ" ಎಂದು ಅವರು ಹೇಳಿದರು.
"ಆಟದಲ್ಲಿ ಓರ್ವನನ್ನು ಏಕಾಂಗಿಯಾಗಿಸುವುದು ತಪ್ಪು. ಪಾಕಿಸ್ತಾನ ಸೋತಾಗ ಓರ್ವ ಆಟಗಾರ ಕ್ಯಾಚ್ ಬಿಟ್ಟದ್ದೇ ತಪ್ಪು ಎಂದು ಹೇಳಲಾಯಿತು. ಇದೂ ಹಾಗೆಯೇ. ಕ್ರಿಕೆಟ್ ಒಂದು ತಂಡದ ಆಟ. ಇದು ನಡೆಯುತ್ತದೆ. ಇನ್ನು ತಂಡದ ಕಪ್ತಾನನಾಗಿ ವಿರಾಟ್ ಕೊಹ್ಲಿ ಪ್ರೆಸ್ ಕಾನ್ಫರೆನ್ಸ್ ನಲ್ಲಿ ಮುಹಮ್ಮದ್ ಶಮಿ ಪರ ನಿಂತಿರುವುದನ್ನು ನಾನು ಅಭಿನಂದಿಸುತ್ತೇನೆ. ಕಾನ್ಫರೆನ್ಸ್ ಗೂ ಮುನ್ನ ಈ ಕುರಿತು ಕೊಹ್ಲಿ ತೀವ್ರ ಅಸಮಧಾನ ವ್ಯಕ್ತಪಡಿಸಿದ್ದರು" ಎಂದು ಹೇಳಿಕೆ ನೀಡಿದ್ದಾರೆ.