ಅಮರಾವತಿಯಲ್ಲಿ ಹಿಂಸೆಗೆ ಪ್ರಚೋದನೆ: ಮಾಜಿ ಮಹಾರಾಷ್ಟ್ರ ಸಚಿವ ಬೋಂಡೆ ಸೆರೆ
ಅಮರಾವತಿ,ನ.15: ನಗರದಲ್ಲಿ ವಾರಾಂತ್ಯದಲ್ಲಿ ನಡೆದಿದ್ದ ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ್ದ ಆರೋಪದಲ್ಲಿ ಮಹಾರಾಷ್ಟ್ರದ ಮಾಜಿ ಸಚಿವ ಹಾಗೂ ಬಿಜೆಪಿ ನಾಯಕ ಡಾ.ಅನಿಲ ಬೋಂಡೆ ಮತ್ತು ಪಕ್ಷದ ಕೆಲವು ಕಾರ್ಯಕರ್ತರನ್ನು ಪೊಲೀಸರು,ತಲೆಮರೆಸಿಕೊಂಡಿರುವ ಇನ್ನೋರ್ವ ಬಿಜೆಪಿ ನಾಯಕ ಪ್ರವೀಣ ಪೋತೆಗಾಗಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ತ್ರಿಪುರಾದಲ್ಲಿ ಅಲ್ಪಸಂಖ್ಯಾತರ ಮೇಲಿನ ಹಿಂಸಾಚಾರವನ್ನು ವಿರೋಧಿಸಿ ಶುಕ್ರವಾರ ಅಮರಾವತಿಯಲ್ಲಿ ಮುಸ್ಲಿಂ ಗುಂಪುಗಳು ಪ್ರತಿಭಟನಾ ಜಾಥಾ ನಡೆಸಿದ್ದವು. ಈ ಸಂದರ್ಭದಲ್ಲಿ ಪೋತೆ ನಿವಾಸಕ್ಕೆ ಕಲ್ಲೆಸೆಯಲಾಗಿದ್ದು,ಕಿಟಕಿ ಗಾಜು ಹುಡಿಯಾಗಿ ಓರ್ವ ವ್ಯಕ್ತಿ ಗಾಯಗೊಂಡಿದ್ದ. ಇದಕ್ಕೆ ಪ್ರತಿಯಾಗಿ ಬಿಜೆಪಿ ಶನಿವಾರ ಅಮರಾವತಿ ಬಂದ್‌ಗೆ ಕರೆ ನೀಡಿತ್ತು. ಸುಮಾರು 6,000 ಬಿಜೆಪಿ ಕಾರ್ಯಕರ್ತರು ಹಾಗೂ ಬಜರಂಗ ದಳದಂತಹ ಸಂಘಟನೆಗಳು ಬೀದಿಗಿಳಿದಿದ್ದು,ಅಲ್ಪಸಂಖ್ಯಾತರಿಗೆ ಸೇರಿದ ಎರಡು ಅಂಗಡಿಗಳಿಗೆ ಬೆಂಕಿ ಹಚ್ಚಲಾಗಿತ್ತು.
ಬಂದ್‌ಗೆ ಕರೆನೀಡಿದ್ದ ಪ್ರಮುಖರಲ್ಲಿ ಬೋಂಡೆ ಮತ್ತು ಪೋತೆ ಸೇರಿದ್ದರು ಎಂದು ಅಧಿಕಾರಿಯೋರ್ವರು ತಿಳಿಸಿದರು. ಶುಕ್ರವಾರ ಮತ್ತು ಶನಿವಾರದ ಹಿಂಸಾಚಾರಗಳಿಗೆ ಸಂಬಂಧಿಸಿದಂತೆ ಈವರೆಗೆ 72 ಜನರನ್ನು ಬಂಧಿಸಲಾಗಿದೆ. ಹಿಂಸಾಚಾರದ ಬಳಿಕ ಅಮರಾವತಿಯಲ್ಲಿ ಕರ್ಫ್ಯೂ ಹೇರಲಾಗಿತ್ತು ಮತ್ತು ಅಂತರ್ಜಾಲವನ್ನು ಸ್ಥಗಿತಗೊಳಿಸಲಾಗಿತ್ತು. ಹಿರಿಯ ಪೊಲೀಸ್ ಅಧಿಕಾರಿಗಳು ನಗರದಲ್ಲಿ ಮೊಕ್ಕಾಂ ಹೂಡಿದ್ದಾರೆ.