ಧನ್‍ಬಾದ್ ನ್ಯಾಯಾಧೀಶರನ್ನು ಆಟೋ ಹರಿಸಿ ಕೊಂದ ಪ್ರಕರಣ: 'ಆರೋಪಿಗಳಿಗೆ ಲೂಟಿ ಉದ್ದೇಶ ಮಾತ್ರ ಇತ್ತು' ಎಂದ ಸಿಬಿಐ ತನಿಖೆ

Update: 2021-11-16 11:59 GMT

ಹೊಸದಿಲ್ಲಿ: ಈ ವರ್ಷದ ಜುಲೈ 28ರಂದು ಧನ್‍ಬಾದ್‍ನ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ಉತ್ತಮ್ ಆನಂದ್ ಅವರ ಮೇಲೆ ಆಟೋರಿಕ್ಷಾ ಹರಿಸಿ ಕೊಂದ ಆರೋಪ ಎದುರಿಸುತ್ತಿರುವ ಇಬ್ಬರು  ವ್ಯಕ್ತಿಗಳು, ವಾಸ್ತವವಾಗಿ "ರಸ್ತೆಯಲ್ಲಿ ಜಾಗಿಂಗ್ ಮಾಡುತ್ತಿದ್ದ ವ್ಯಕ್ತಿಗೆ ಆಟೋ ಗುದ್ದುವಂತೆ ಮಾಡಿ ಅವರನ್ನು ಕೆಳಕ್ಕೆ ಬೀಳಿಸಿ ಲೂಟಿಗೈಯ್ಯಬೇಕೆಂದಿದ್ದರು ಆದರೆ ಆ ರಸ್ತೆಯಲ್ಲಿ ಬೈಕೊಂದು ಬರುತ್ತಿರುವುದನ್ನು ಗಮನಿಸಿದ ಅವರ ತಮ್ಮ ಮೊದಲಿನ ಯೋಜನೆ ಕೈಬಿಟ್ಟಿದ್ದರು" ಎಂದು ಸಿಬಿಐ ತನಿಖೆ ಕಂಡುಕೊಂಡಿದೆ.

ಆರೋಪಿಗಳಿಗೆ ತಾವು ಬೀಳಿಸಿ ಹತ್ಯೆಗೈದ ವ್ಯಕ್ತಿ ನ್ಯಾಯಾಧೀಶ ಎಂದು ತಿಳಿದಿರಲಿಲ್ಲ ಎಂದು ಸಿಬಿಐ ಮೂಲಗಳು ತಿಳಿಸಿವೆ. ಆರೋಪಿಗಳ ಮೇಲೆ ಗಾಂಧಿನಗರದ ವಿಧಿವಿಜ್ಞಾನ ನಿರ್ದೇಶನಾಲಯ ನಡೆಸಿದ ವಿಧಿವಿಜ್ಞಾನ ಪರೀಕ್ಷೆಯ ಆಧಾರದಲ್ಲಿ ಮೇಲಿನ ತೀರ್ಮಾನಕ್ಕೆ ಬರಲಾಗಿದೆ. ನ್ಯಾಯಾಧೀಶರನ್ನು ವಾಹನ ಹರಿಸಿ ಕೊಂದಿರುವ ಹಿಂದೆ ಯಾವುದಾದರೂ ಷಡ್ಯಂತ್ರವಿದೆಯೇ ಎಂದು ತಿಳಿಯುವ ಪ್ರಯತ್ನವನ್ನು ಸಿಬಿಐ ಮಾಡಿತ್ತು.

ಕಳೆದೆರಡು ತಿಂಗಳುಗಳಲ್ಲಿ ಆರೋಪಿಗಳಾದ ಲಖನ್ ವರ್ಮ ಮತ್ತು ರಾಹುಲ್ ಕುಮಾರ್ ವರ್ಮ ಪಾಲಿಗ್ರಾಫ್ ಪರೀಕ್ಷೆ, ಡಿಎನ್‍ಎ ಪ್ರೊಫೈಲಿಂಗ್ ಸಹಿತ ಹಲವಾರು ಪರೀಕ್ಷೆಗೊಳಪಟ್ಟಿದ್ದರು. ಇದರ ಹೊರತಾಗಿ ಕರೆ ಮಾಹಿತಿ ವಿವರಗಳನ್ನೂ ಪರಿಶೀಲಿಸಲಾಗಿತ್ತು ಹಾಗೂ ಅಂತಿಮವಾಗಿ ಈ ಘಟನೆಯ ಹಿಂದೆ ಲೂಟಿ ಯತ್ನ ಮಾತ್ರ ಇತ್ತು ಎಂದು ತಿಳಿದು ಬಂದಿದೆ.

ತಮಗಾಗಿ ವಾದಿಸಲು ವಕೀಲರನ್ನು ನೇಮಿಸುವಷ್ಟು ಆರೋಪಿಗಳು ಆರ್ಥಿಕವಾಗಿ ಸದೃಢರಾಗಿಲ್ಲದೇ ಇದ್ದುದರಿಂದ ನ್ಯಾಯಾಲಯವೇ ಅವರಿಗಾಗಿ ಒಬ್ಬ ವಕೀಲರನ್ನು ನೇಮಿಸಿತ್ತು.

ಪ್ರಕರಣದ ತನಿಖೆಯನ್ನು ಆರಂಭದಲ್ಲಿ ಧನಬಾದ್ ಪೊಲೀಸರು ನಡೆಸಿದ್ದರೆ ನಂತರ ಸಿಬಿಐ ತನಿಖೆಯ ಜವಾಬ್ದಾರಿ ಹೊತ್ತುಕೊಂಡು ಅಕ್ಟೋಬರ್ 20ರಂದು ಆರೋಪಿಗಳಿಬ್ಬರ ವಿರುದ್ಧ ಚಾರ್ಜ್‍ಶೀಟ್ ಸಲ್ಲಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News