ಚೀನಾ-ಅಮೆರಿಕ ನಡುವೆ ಪ್ರಾಮಾಣಿಕ ಸಂವಹನ ಅಗತ್ಯ: ಅಮೆರಿಕ ಅಧ್ಯಕ್ಷ ಬೈಡೆನ್

Update: 2021-11-16 15:46 GMT

ವಾಷಿಂಗ್ಟನ್, ನ.16: ಚೀನಾ ಮತ್ತು ಅಮೆರಿಕ ನಡುವೆ ಉತ್ತಮ ಮತ್ತು ಇನ್ನಷ್ಟು ಪ್ರಾಮಾಣಿಕ ಸಂವಹನದ ಅಗತ್ಯವಿದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ.

ವಿವೇಚನಾ ಶಕ್ತಿಯನ್ನು ಉಳಿಸಿಕೊಳ್ಳುವ ವ್ಯವಸ್ಥೆಯನ್ನು ರೂಪಿಸುವ ಜತೆಗೆ, ನಮ್ಮೊಳಗಿನ ಭಿನ್ನಾಭಿಪ್ರಾಯದ ಬಗ್ಗೆ ಸ್ಪಷ್ಟತೆ ಮತ್ತು ಪ್ರಾಮಾಣಿಕತೆ ಹೊಂದಿರುವುದು, ಪರಸ್ಪರ ಹಿತಾಸಕ್ತಿಗಳ ಮಧ್ಯೆ ಸಂಘರ್ಷದ ಪರಿಸ್ಥಿತಿಯಲ್ಲಿ , ವಿಶೇಷವಾಗಿ ಜಾಗತಿಕ ತಾಪಮಾನ ಏರಿಕೆಯಂತ ವಿಷಯಗಳಲ್ಲಿ ಜತೆಗೂಡಿ ಕಾರ್ಯನಿರ್ವಹಿಸುವ ಅಗತ್ಯವಿದೆ ಎಂದು ಬೈಡನ್ ಹೇಳಿರುವುದಾಗಿ ಶ್ವೇತಭವನದ ಮೂಲಗಳು ತಿಳಿಸಿದೆ.

ಪರಸ್ಪರ ಸಂವಹನ ಪ್ರಕ್ರಿಯೆಯು ಪ್ರಾಮಾಣಿಕವಾಗಿದ್ದರೆ ಆಗ ಇನ್ನೊಬ್ಬರು ಏನು ಯೋಚಿಸುತ್ತಿರಬಹುದು ಎಂದು ಊಹಿಸುತ್ತಾ ಈ ಬಗ್ಗೆ ತಲೆಕೆಡಿಸಿಕೊಳ್ಳುವ ಅಗತ್ಯ ಇರುವುದಿಲ್ಲ . ಅಲ್ಲದೆ ತೈವಾನ್ ಜಲಸಂಧಿಯಲ್ಲಿನ ಶಾಂತಿ ಮತ್ತು ಸ್ಥಿರತೆಯನ್ನು ಬದಲಾಯಿಸುವ ಏಕಪಕ್ಷೀಯ ಪ್ರಯತ್ನಗಳನ್ನು ಅಮೆರಿಕ ವಿರೋಧಿಸುತ್ತದೆ ಎಂದು ಬೈಡನ್ ಹೇಳಿದರು.

ಚೀನಾ ಅಧ್ಯಕ್ಷ ಕ್ಸಿ  ಜಿನ್ಪಿಂಗ್  ಮತ್ತು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ನಡುವೆ ಮೊದಲ ಬಾರಿಗೆ ವರ್ಚುವಲ್ ವೇದಿಕೆಯಲ್ಲಿ ನಡೆದ ದ್ವಿಪಕ್ಷೀಯ ಮಾತುಕತೆಯಲ್ಲಿ ಉಭಯ ಮುಖಂಡರೂ ನಿಕಟ ಸಂಬಂಧ ಸ್ಥಾಪನೆಯ ಅಗತ್ಯವನ್ನು ಒತ್ತಿಹೇಳಿದರು ಎಂದು ವರದಿಯಾಗಿದೆ. ಬೀಜಿಂಗ್ ನಿಂದ ಮಾತನಾಡಿದ ಕ್ಸಿ  ಜಿನ್ಪಿಂಗ್ ‘ಬೈಡನ್ ನನ್ನ ಹಳೆಯ ಮಿತ್ರನಾಗಿದ್ದು ಉಭಯ ದೇಶಗಳೂ ಹಲವು ಸವಾಲುಗಳನ್ನು ಎದುರಿಸಿವೆ. ಈಗ ಪ್ರತಿಸ್ಪರ್ಧಿಗಳು ಇನ್ನಷ್ಟು ನಿಕಟವಾಗುವ ಅಗತ್ಯವಿದೆ. ಚೀನಾ ಮತ್ತು ಅಮೆರಿಕದ ಮಧ್ಯೆ ಸಂವಹನ ಮತ್ತು ಸಹಕಾರ ಹೆಚ್ಚುವ ಅಗತ್ಯವಿದೆ’ ಎಂದರು.

ತೈವಾನ್, ಹಾಂಕಾಂಗ್ ವಿಷಯದಲ್ಲಿ ಚೀನಾದ ಆಕ್ರಮಣಕಾರಿ ಧೋರಣೆ ಹಾಗೂ ಉಯಿಗರ್ ಮುಸ್ಲಿಮರನ್ನು ಚೀನಾ ನಡೆಸಿಕೊಳ್ಳುತ್ತಿರುವ ರೀತಿಯ ಬಗ್ಗೆ ಅಮೆರಿಕ ಕಟುವಾಗಿ ಖಂಡಿಸುತ್ತಾ ಬಂದಿದ್ದು ಉಭಯ ದೇಶಗಳ ನಡುವಿನ ಸಂಬಂಧ ಹದಗೆಡುತ್ತಾ ಸಾಗಿರುವ ಸಂದರ್ಭದಲ್ಲೇ ಈ ಸಭೆ ನಡೆದಿದೆ.

ಸಭೆಗೂ ಮುನ್ನ ಮಾಧ್ಯಮದರೊಂದಿಗೆ ಮಾತನಾಡಿದ್ದ ಬೈಡನ್ ‘ ವಿಶ್ವದ 2 ಪ್ರಮುಖ ದೇಶಗಳಾಗ ಅಮೆರಿಕ ಮತ್ತು ಚೀನಾದ ಮಧ್ಯೆ ಸ್ಪರ್ಧೆ ನಿರೀಕ್ಷಿತವಾಗಿದೆ. ಆದರೆ ಈ ಪೈಪೋಟಿಯು ಬಿಕ್ಕಟ್ಟಿನ ರೂಪಕ್ಕೆ ತಿರುಗದಂತೆ ನೋಡಿಕೊಳ್ಳುವುದು ತನ್ನ ಹಾಗೂ ಕ್ಸಿ  ಜಿನ್ಪಿಂಗ್ ರ ಜವಾಬ್ದಾರಿಯಾಗಿದೆ’ ಎಂದಿದ್ದರು.

ಕಳೆದ ಮಾರ್ಚ್ ನಲ್ಲಿ ಚೀನಾದ ಉನ್ನತ ರಾಜತಾಂತ್ರಿಕ ಅಧಿಕಾರಿ ಯಾಂಗ್ ಜೇಚಿ ಮತ್ತು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕೆನ್ ಮಧ್ಯೆ ನಡೆದ ಮಾತುಕತೆ ಸಂದರ್ಭ, ಚೀನಾದ ಆಂತರಿಕ ವ್ಯವಹಾರದಲ್ಲಿ ಹಸ್ತಕ್ಷೇಪ ಮಾಡದಂತೆ ಚೀನಾದ ನಿಯೋಗ ಅಮೆರಿಕದ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News