ಮ್ಯಾನ್ಮಾರ್: ಸೂಕಿ ವಿರುದ್ಧ ಚುನಾವಣೆ ವಂಚನೆ ಪ್ರಕರಣ ದಾಖಲು

Update: 2021-11-16 15:58 GMT

ಯಾಂಗಾನ್, ನ.16: 2020ರಲ್ಲಿ ನಡೆದಿದ್ದ ಸಾರ್ವತ್ರಿಕ ಚುನಾವಣೆಯಲ್ಲಿ ವಂಚನೆ ಎಸಗಿರುವ ಆರೋಪದಲ್ಲಿ ಮ್ಯಾನ್ಮಾರ್‌ನ ಪದಚ್ಯುತ ನಾಯಕಿ ಆಂಗ್ ಸಾನ್ ಸೂಕಿ ಸಹಿತ 16 ಮಂದಿಯ ವಿರುದ್ಧ ಅಲ್ಲಿನ ಸೇನಾಡಳಿತ ಪ್ರಕರಣ ದಾಖಲಿಸಿದೆ ಎಂದು ಮ್ಯಾನ್ಮಾರ್‌ನ ಸರಕಾರಿ ಸ್ವಾಮ್ಯದ ಸುದ್ಧಿಸಂಸ್ಥೆ ಮಂಗಳವಾರ ವರದಿ ಮಾಡಿದೆ.

ಸೂಕಿ, ಮಾಜಿ ಅಧ್ಯಕ್ಷ ಉ ವಿನ್ ಮಿಂಟ್, ಚುನಾವಣಾ ಆಯೋಗದ ಮಾಜಿ ಅಧ್ಯಕ್ಷರ ಸಹಿತ ತಂಡವೊಂದು 2020ರ ನವೆಂಬರ್‌ನಲ್ಲಿ ನಡೆದಿದ್ದ ಚುನಾವಣೆಯಲ್ಲಿ ಚುನಾವಣಾ ವಂಚನೆ ಎಸಗಿದ ಜೊತೆಗೆ, ಕಾನೂನುಬಾಹಿರ ಕೃತ್ಯ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಚುನಾವಣೆಯಲ್ಲಿ ಸೂಕಿ ಅವರ ನ್ಯಾಷನಲ್ ಲೀಗ್ ಫಾರ್ ಡೆಮಾಕ್ರಸಿ ಪಕ್ಷ ಭರ್ಜರಿ ಗೆಲುವು ಸಾಧಿಸಿತ್ತು. ಈ 16 ಆರೋಪಿಗಳು 60 ವರ್ಷ ಮೀರಿದವರಿಗೆ ನಿಗದಿತ ದಿನದ ಮೊದಲೇ ಮತದಾನಕ್ಕೆ ಅವಕಾಶ, ಮತದಾನದ ಹಕ್ಕು ಇಲ್ಲದವರ ಹೆಸರನ್ನೂ ಮತಪತ್ರದಲ್ಲಿ ಸೇರಿಸಿರುವುದು ಮುಂತಾದ ಕೃತ್ಯದ ಮೂಲಕ ಚುನಾವಣೆಯ ನಿಯಮವನ್ನು ಉಲ್ಲಂಘಿಸಿದ್ದಾರೆ ಎಂದು ಉಲ್ಲೇಖಿಸಲಾಗಿದೆ.

ಫೆ.1ರಂದು ಕ್ಷಿಪ್ರಕ್ರಾಂತಿ ಮೂಲಕ ಅಧಿಕಾರ ಕೈವಶ ಮಾಡಿಕೊಂಡಿದ್ದ ಮ್ಯಾನ್ಮಾರ್ ಸೇನೆ ಆಂಗ್ ಸಾನ್ ಸ್ಯೂಕಿಯನ್ನು ಬಂಧನದಲ್ಲಿಟ್ಟಿದ್ದು ಅವರ ವಿರುದ್ಧ ಹಲವು ಪ್ರಕರಣ ದಾಖಲಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News