ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ: 14 ರಾಜ್ಯಗಳಲ್ಲಿ ಸಿಬಿಐ ಶೋಧ

Update: 2021-11-16 16:25 GMT

ಸಾಂದರ್ಭಿಕ ಚಿತ್ರ

ಹೊಸದಿಲ್ಲಿ, ನ. 16: ಆನ್ಲೈನ್ ಮಕ್ಕಳ ಲೈಂಗಿಕ ಕಿರುಕುಳ ಆರೋಪಕ್ಕೆ ಸಂಬಂಧಿಸಿ ಸಿಬಿಐ 14 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ 76 ಸ್ಥಳಗಳಲ್ಲಿ ಮಂಗಳವಾರ ಶೋಧ ಕಾರ್ಯಾಚರಣೆ ನಡೆಸಿದೆ. 

ಆಂಧ್ರಪ್ರದೇಶ, ದಿಲ್ಲಿ, ಉತ್ತರಪ್ರದೇಶ, ಪಂಜಾಬ್, ಬಿಹಾರ್, ಒಡಿಶಾ, ತಮಿಳುನಾಡು, ರಾಜಸ್ಥಾನ, ಮಹಾರಾಷ್ಟ್ರ , ಗುಜರಾತ್, ಹರ್ಯಾಣ, ಚತ್ತೀಸ್ಗಢ, ಮಧ್ಯಪ್ರದೇಶ ಹಾಗೂ ಹಿಮಾಚಲಪ್ರದೇಶದಲ್ಲಿ ಸಿಬಿಐ ಶೋಧ ಕಾರ್ಯ ನಡೆಸಿದೆ. ಆನ್ಲೈನ್ ಮಕ್ಕಳ ಲೈಂಗಿಕಿರುಕುಳ ಹಾಗೂ ಶೋಷಣೆ ಕುರಿತು ಸಿಬಿಐ ಒಟ್ಟು 83 ಆರೋಪಿಗಳ ವಿರುದ್ಧ ನವೆಂಬರ್ 14ರಂದು ಪ್ರತ್ಯೇಕ 23 ಪ್ರಕರಣಗಳನ್ನು ದಾಖಲಿಸಿತ್ತು. 

ಸಾಮಾಜಿಕ ಮಾಧ್ಯಮದಲ್ಲಿ ಮಕ್ಕಳ ಅಶ್ಲೀಲಚಿತ್ರದ ಮಾರಾಟ ಹಾಗೂ ಖರೀದಿ ಆರೋಪದಲ್ಲಿ ಸಿಬಿಐ ಇಬ್ಬರನ್ನು ಈ ವರ್ಷ ಜನವರಿಯಲ್ಲಿ ಬಂಧಿಸಿತ್ತು. ಬಂಧಿತ ಆರೋಪಿಗಳಲ್ಲಿ ಓರ್ವ ಬಿಟೆಕ್ ಎಂಜಿನಿಯರ್ ನೀರಜ್ ಕುಮಾರ್ ಯಾದವ್ ಹಾಗೂ ಇನ್ನೋರ್ವನನ್ನು ಕುಲಜೀತ್ ಸಿಂಗ್ ಮಕಾನ್ ಎಂದು ಗುರುತಿಸಲಾಗಿತ್ತು. 

ಯಾದವ್ ಇನ್ನೋರ್ವ ಆರೋಪಿಯಾದ ಕುಲಜೀತ್ ಸಿಂಗ್ ಮಕಾನ್ ನಿಂದ ಮಕ್ಕಳ ಅಶ್ಲೀಲ ಚಿತ್ರ ಸೇರಿದಂತೆ ಆಕ್ಷೇಪಾರ್ಹ ವಸ್ತುಗಳ ದೊಡ್ಡ ಪ್ರಮಾಣದ ಡಾಟಾವನ್ನು ಖರೀದಿಸಿದ್ದ ಹಾಗೂ ಪೇಟಿಎಂ ಮೂಲಕ ಪಾವತಿ ಮಾಡಿದ್ದ ಎಂದು ಸಿಬಿಐ ಹೇಳಿದೆ. ಅನಂತರ ಆರೋಪಿ ಯಾದವ್ ಮಕ್ಕಳ ಅಶ್ಲೀಲ ಚಿತ್ರ ಸೇರಿದಂತೆ ಆಕ್ಷೇಪಾರ್ಹ ವಸ್ತುಗಳನ್ನು ಮಾರಾಟ ಮಾಡುವ ಬಗ್ಗೆ ಇನ್ಸ್ಟಾಗ್ರಾಂನಲ್ಲಿ ಜಾಹೀರಾತು ಪ್ರಕಟಿಸಿದ್ದ ಎಂದು ಸಿಬಿಐ ವಕ್ತಾರ ಆರ್.ಸಿ. ಜೋಷಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News