ಮಳೆ ಹಾನಿ: ರೈತರಿಗೆ ಪರಿಹಾರ ಪ್ಯಾಕೇಜ್ ಘೋಷಿಸಿದ ಸ್ಟಾಲಿನ್

Update: 2021-11-16 16:39 GMT

 ಚೆನ್ನೈ,ನ.16: ರಾಜ್ಯಾದ್ಯಂತ ಇತ್ತೀಚೆಗೆ ಸುರಿದ ಭಾರೀ ಮಳೆಯಿಂದಾಗಿ ಹಾನಿಗೀಡಾದ ರಸ್ತೆಗಳು, ಕಾಲುವೆಗಳು ಹಾಗೂ ಇತರ ಮೂಲಸೌಕರ್ಯಗಳ ದುರಸ್ತಿಗೆ 300 ಕೋಟಿ ರೂ.ಅನುದಾನ ನೀಡುವುದಾಗಿ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಮಂಗಳವಾರ ಪ್ರಕಟಿಸಿದ್ದಾರೆ. ‌

ಮಳೆಯ ವಿಕೋಪದಿಂದಾಗಿ ಕಟಾವಿಗೆ ಸಿದ್ಧವಾಗಿದ್ದ ಕುರುವೈ ಬೆಳೆಯನ್ನು ಕಳೆದುಕೊಂಡ ರೈತರಿಗೆ ಪ್ರತಿ ಹೆಕ್ಟೇರ್‌ಗೆ 20 ಸಾವಿರ ರೂ. ನಂತೆ ಪರಿಹಾರ ನೀಡಲಾಗುವುದೆಂದು ಅವರು ಘೋಷಿಸಿದರು.

ನೆರೆಹಾನಿಯಿಂದಾಗಿ ಬೆಳೆನಷ್ಟವಾದ ರೈತರಿಗೆ ಅಲ್ಪಾವಧಿಯಲ್ಲಿ ಇಳುವರಿ ನೀಡುವ ತಳಿಯ ಭತ್ತದ ಬೀಜಗಳು (45 ಕೆ.ಜಿ., 1485 ರೂ.ಮೌಲ್ಯ), ಸೂಕ್ಷ್ಮ ಪೋಷಕಾಂಶಗಳು ( 25 ಕೆ.ಜಿ, 1235 ಮೌಲ್ಯ), ಯೂರಿಯಾ (60 ಕೆ.ಜಿ, 354 ರೂ. ಮೌಲ್ಯ ಹಾಗೂ ಡಿಎಪಿ (125 ಕೆ.ಜಿ, 2964 ರೂ. ಮೌಲ್ಯ) ಸೇರಿದಂತೆ 6038 ರೂ. ಬೆಲೆಬಾಳುವ ಕೃಷಿ ಸಾಮಾಗ್ರಿಗಳನ್ನು ನೀಡಲಾಗುವುದೆಂದು ತಿಳಿಸಿದರು. ಈ ಕೃಷಿ ಸಾಮಾಗ್ರಿಗಳು, ರೈತರಿಗೆ ಮತ್ತೆ ಬೇಸಾಯ ಮಾಡಲು ನೆರವಾಗಲಿದೆ ಎಂದು ಸ್ಟಾಲಿನ್ ತಿಳಿಸಿದರು.

ಐ.ಪೆರಿಸ್ವಾಮಿ ನೇತೃತ್ವದ ಆರು ಮಂದಿ ಹಿರಿಯ ಸಚಿವರ ತಂಡದ ಸಭೆಯ ಅಧ್ಯಕ್ಷತೆ ವಹಿಸಿದ ಬಳಿಕ ಮುಖ್ಯಮಂತ್ರಿಯವರು ಈ ಕ್ರಮಗಳನ್ನು ಪ್ರಕಟಿಸಿದರು. ಈ ಆರು ಮಂದಿ ಸದಸ್ಯರ ತಂಡವು ಕಾವೇರಿ ತಪ್ಪಲು ಪ್ರದೇಶಗಳಲ್ಲಿ ಮಳೆಯಿಂದ ಹಾನಿಗೀಡಾದ ಪ್ರದೇಶಳಿಗೆ ಬೇಟಿ ನೀಡಿತ್ತು.

ಕೃಷಿ ಸಚಿವ ಎಂ.ಆರ್.ಕೆ. ಪನೀರ್ಸೆಲ್ವಂ, ಮುಖ್ಯ ಕಾರ್ಯದರ್ಶಿ ವಿ. ಇರೈ ಆನ್ಬು ಹಾಗೂ ಹಿರಿಯ ಅಧಿಕಾರಿಗಳು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು. ಇದಕ್ಕೂ ಮೊದಲು ಆರು ಮಂದಿ ಸಚಿವರ ತಂಡವು ತಮ್ಮ ವರದಿಯನ್ನು ಮುಖ್ಯಮಂತ್ರಿಗೆ ಸಲ್ಲಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News