ಶ್ರೀನಗರ: ಎನ್ಕೌಂಟರ್ ನಲ್ಲಿ ಉದ್ಯಮಿಗಳಿಬ್ಬರು ಸಹಿತ ನಾಲ್ವರ ಸಾವು; ಉಗ್ರರಿಗೆ ನೆರವು ನೀಡುತ್ತಿದ್ದರೆಂಬ ಆರೋಪ

Update: 2021-11-16 17:30 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ,ನ.16: ಭದ್ರತಾಪಡೆಗಳು ಮಂಗಳವಾರ ಶ್ರೀನಗರದಲ್ಲಿ ನಡೆಸಿದ ಕಾರ್ಯಾಚರಣೆಯೊಂದರಲ್ಲಿ ಇಬ್ಬರು ಉದ್ಯಮಿಗಳು ಸೇರಿದಂತೆ ನಾಲ್ವರನ್ನು ಸಾವನ್ನಪ್ಪಿದ್ದಾರೆ. ಕಾರ್ಯಾಚರಣೆಯಲ್ಲಿ ಹತ್ಯೆಯಾದವರಲ್ಲಿ ಇಬ್ಬರು ಉಗ್ರರು ಮತ್ತು ಇನ್ನಿಬ್ಬರು ಭಯೋತ್ಪಾದಕರನ್ನು ಬೆಂಬಲಿಸುತ್ತಿದ್ದ ಉದ್ಯಮಿಗಳೆಂದು ಪೊಲೀಸರು ತಿಳಿಸಿದ್ದಾರೆ.

ಭದ್ರತಾಪಡೆಗಳ ಗುಂಡಿಗೆ ಬಲಿಯಾದ ಇಬ್ಬರು ಉದ್ಯಮಿಗಳನ್ನು ಡಾ. ಮುದಸ್ಸಿರ್ ಹಾಗೂ ಅಲ್ತಾಫ್ ಭಟ್ ಎಂದು ಗುರುತಿಸಲಾಗಿದೆ. ಇವರಿಬ್ಬರೂ ಶ್ರೀನಗರದ ಹೈದರ್ಪೋರಾ ಪ್ರದೇಶದಲ್ಲಿರುವ ವಾಣಿಜ್ಯ ಸಂಕೀರ್ಣವೊಂದರಲ್ಲಿ ಅಂಗಡಿ ಮಳಿಗೆಗಳನ್ನು ಹೊಂದಿದ್ದಾರೆಂದು ತಿಳಿದುಬಂದಿದೆ. ಸೋಮವಾರ ಸಂಜೆ ಈ ವಾಣಿಜ್ಯ ಸಂಕೀರ್ಣದಲ್ಲಿ ಎನ್ಕೌಂಟರ್ ಕಾರ್ಯಾಚರಣೆ ನಡೆದಿತ್ತು.

ದಂತವೈದ್ಯನಾದ ಮುದಸ್ಸಿರ್ ಗುಲ್, ಈ ವಾಣಿಜ್ಯ ಸಂಕೀರ್ಣದಲ್ಲಿ ಕಂಪ್ಯೂಟರ್ ಸೆಂಟರ್ ನಡೆಸುತ್ತಿದ್ದನೆನ್ನಲಾಗಿದೆ. ಇನ್ನೋರ್ವ ಉದ್ಯಮಿ ಅಲ್ತಾಫ್‌ ಭಟ್ ವಾಣಿಜ್ಯ ಸಂಕೀರ್ಣದ ಮಾಲಕನಾಗಿದ್ದು, ಆತ ಅಲ್ಲಿ ಹಾರ್ಡ್ವೇರ್ ಹಾಗೂ ಸಿಮೆಂಟ್ ಅಂಗಡಿ ಕೂಡಾ ನಡೆಸುತ್ತಿದ್ದನೆಂದು ತಿಳಿದುಬಂದಿದೆ.

ಹೈದರ್ಪೋರಾ ವಾಣಿಜ್ಯ ಸಂಕೀರ್ಣದಲ್ಲಿ ನಡೆದ ಎನ್ಕೌಂಟರ್ ಘಟನೆ ಬಗ್ಗೆ ಸಮಗ್ರ ತನಿಖೆಯಾಗಬೇಕೆಂದು ಮಾಜಿ ಮುಖ್ಯಮಂತ್ರಿ, ಪಿಡಿಪಿ ನಾಯಕಿ ಮೆಹಬೂಬಾ ಮುಫ್ತಿ ಆಗ್ರಹಿಸಿದ್ದಾರೆ.

‘‘ಅಮಾಯಕ ನಾಗರಿಕರನ್ನು ಮಾನವಗುರಾಣಿಗಳಾಗಿ ಬಳಸಿಕೊಂಡು, ಗುಂಡಿನ ಚಕಮಕಿಯಲ್ಲಿ ಅವರು ಸಾಯುವಂತೆ ಮಾಡುವುದು ಹಾಗೂ ತಮ್ಮ ಅನುಕೂಲಕ್ಕಾಗಿ ಅವರನ್ನು ಉಗ್ರರಿಗೆ ನೆರವು ನೀಡುತ್ತಿರುವವರು ಎಂದು ಹಣೆಪಟ್ಟಿ ಕಟ್ಟುವುದು, ಭಾರತ ಸರಕಾರದ ನಿಯಮಾವಳಿ ಪುಸ್ತಕದ ಭಾಗವಾಗಿ ಬಿಟ್ಟಿದೆ. ಈ ನಿಟ್ಟಿನಲ್ಲಿ ಸತ್ಯವನ್ನು ಹೊರಗೆಳೆಯಲು ವಿಶ್ವಸನೀಯವಾದ ನ್ಯಾಯಾಂಗ ತನಿಖೆ ನಡೆಯುವುದು ಹಾಗೂ ಸ್ವೇಚ್ಛಾಚಾರದ ವರ್ತನೆಗೆ ಕೊನೆಹಾಡಬೇಕಾಗಿದೆ’’ ಎಂದು ಮುಫ್ತಿ ಟ್ವೀಟ್ ಮಾಡಿದ್ದಾರೆ.

ಈ ಇಬ್ಬರು ಉದ್ಯಮಿಗಳನ್ನು ಪೊಲೀಸರೇ ಹತ್ಯೆ ಮಾಡಿದ್ದಾರೆಂದು ಅವರ ಕುಟುಂಬಿಕರು ಆಪಾದಿಸಿದ್ದಾರೆ. ಆದರೆ ಇವರಿಬ್ಬರೂ ಉಗ್ರರ ಗುಂಡಿನ ದಾಳಿಗೆ ಬಲಿಯಾಗಿದ್ದಾರೆ ಇಲ್ಲವೇ ಗುಂಡಿನ ಚಕಮಕಿ ಸಂದರ್ಭದಲ್ಲಿ ಸಾವನ್ನಪ್ಪಿರಬಹುದು ಎಂದು ಅವರ ಕುಟುಂಬಿಕರು ಆಪಾದಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News