ಮಾರ್ಚ್ ಒಳಗೆ ಆಯಾ ಪ್ರದೇಶಗಳ ವಿಶಿಷ್ಟ ಜೀವವೈವಿಧ್ಯಗಳ ಉತ್ಸವ: ಸಂಜಯ್ ಮೋಹನ್

Update: 2021-11-17 15:44 GMT

ಕಾರ್ಕಳ, ನ.17: ರಾಜ್ಯದ ಜೀವವೈವಿಧ್ಯತೆಗಳನ್ನು ಸಂರಕ್ಷಿಸುವ ಉದ್ದೇಶ ದಿಂದ ಆಯಾ ಪ್ರದೇಶಗಳಲ್ಲಿ ವಿಶಿಷ್ಟವಾಗಿರುವ ಜೀವವೈವಿಧ್ಯಗಳ ಉತ್ಸವ ನಡೆಸಲು ನಿರ್ಧರಿಸಲಾಗಿದೆ ಎಂದು ರಾಜ್ಯ ಅರಣ್ಯ ಇಲಾಖೆಯ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಅರಣ್ಯ ಪಡೆಯ ಮುಖ್ಯಸ್ಥ ಸಂಜಯ್ ಮೋಹನ್ ಹೇಳಿದ್ದಾರೆ.

ಅರಣ್ಯ ಇಲಾಖೆ, ಕುದುರೆಮುಖ ವನ್ಯಜೀವಿ ವಿಭಾಗದ ಆಶ್ರಯದಲ್ಲಿ ಕುದುರೆಮುಖ ಪದ್ಮವತಿ ಹಾಲ್‌ನಲ್ಲಿ ಬುಧವಾರ ಆಯೋಜಿಸಲಾದ ಕರ್ನಾಟಕದ ಶೋಲಾ ಬಗ್ಗೆ ವಿಶೇಷ ಕಾರ್ಯಾಗಾರ ಶೋಲಾ ಉತ್ಸವವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಚಿಕ್ಕಮಗಳೂರು ಜಿಲ್ಲೆಯಲ್ಲಿ ಶೋಲಾ ಉತ್ಸವ, ಬೆಳಗಾವಿ ಜಿಲ್ಲೆಯಲ್ಲಿ ಹುಲ್ಲುಗಾವಲು ಉತ್ಸವ, ಬಳ್ಳಾರಿ ಜಿಲ್ಲೆಯಲ್ಲಿ ತೋಳ ಉತ್ಸವ, ಕಾವೇರಿ ನದಿ ತೀರದಲ್ಲಿ ಮಹಾಶೀರ್ ಮೀನು ಉತ್ಸವ, ಉತ್ತರ ಕನ್ನಡ ಜಿಲ್ಲೆಯಲ್ಲಿ ಕಡಲಾಮೆ, ಶರಾವತಿ ನದಿ ಹಿನ್ನೀರಿನಲ್ಲಿ ಕಪ್ಪೆ ಉತ್ಸವಗಳನ್ನು ಮಾರ್ಚ್ ತಿಂಗಳೊಳಗೆ ಅಯೋಜಿಸಲಾಗುವುದು ಎಂದರು.

ಜೀವವೈವಿಧ್ಯ ಎಂದರೇ ಕೇವಲ ಆನೆ, ಹುಲಿಯಂತಹ ದೊಡ್ಡ ಪ್ರಾಣಿಗಳು ಅಥವಾ ದೊಡ್ಡ ಮರಗಳಲ್ಲ. ಪರಿಸರದಲ್ಲಿರುವ ಚಿಕ್ಕ ಜೀವಿ ಸಸ್ಯಗಳು ಕೂಡ ಜೀವವೈವಿಧ್ಯದ ಪ್ರಾಮುಖ್ಯ ಭಾಗಗಳಾಗಿವೆ. ಆದುದರಿಂದ ಅವುಗಳನ್ನು ಉಳಿಸಲು, ಅವುಗಳ ಬಗ್ಗೆ ಜನರಲ್ಲಿ ಮುಖ್ಯವಾಗಿ ವಿದ್ಯಾರ್ಥಿ ಗಳಲ್ಲಿ ಜಾಗೃತಿ ಮೂಡಿಸಬೇಕಾಗಿದೆ. ಅದಕ್ಕಾಗಿ ಅವುಗಳು ಕಂಡುಬರುವ ಜಿಲ್ಲೆಗಳಲ್ಲಿಯೇ ಈ ಉತ್ಸವಗಳನ್ನು ಅಯೋಜಿಸಲಾಗುವುದು ಎಂದು ಅವರು ಹೇಳಿದರು.

ಪಶ್ಚಿಮ ಘಟ್ಟದ ಶೋಲಾ ಕಾಡುಗಳಲ್ಲಿ ರಾಜ್ಯದಲ್ಲಿ ಬೇರೆಲ್ಲಿಯೂ ಇಲ್ಲದ 1500ಕ್ಕೂ ಹೆಚ್ಚು ಪ್ರಬೇಧದ ಮರಗಳಿವೆ. ನೂರಾರು ಬಗೆಯ ಚಿಟ್ಟೆ, ಹಕ್ಕಿ, ಪ್ರಾಣಿಗಳಿವೆ. ಅವುಗಳ ಬಗ್ಗೆ ಸ್ಥಳೀಯರ ಜನರಲ್ಲಿ ಜಾಗೃತಿ ಮೂಡಿಸುವುಕ್ಕಾಗಿ ಈ ಶೋಲಾ ಉತ್ಸವವನ್ನು ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದರು.

ಮುಖ್ಯ ಅತಿಥಿಯಾಗಿ ಸುರತ್ಕಲ್ ಎನ್ಐಟಿಕೆಯ ಸೆಂಟರ್ ಫಾರ್ ಸಿಸ್ಟಮ್ ಡಿಸೈನ್‌ನ ಮುಖ್ಯಸ್ಥ ಪ್ರೊ.ಕೆ.ವಿ.ಗಂಗಾಧರ್ ಮಾತನಾಡಿ, ಅರಣ್ಯ ಇಲಾಖೆ ಜೀವವೈವಿಧ್ಯ ರಕ್ಷಣೆಗೆ ಸ್ಥಳೀಯ ಇಂಜಿನಿಯರಿಂಗ್ ಕಾಲೇಜುಗಳ ತಾಂತ್ರಿಕ ತಜ್ಞತೆಯನ್ನು ಬಳಸಿಕೊಳ್ಳಬಹುದಾಗಿದೆ. ಈ ನಿಟ್ಟಿನಲ್ಲಿ ಎನ್ಐಟಿಕೆ ನೆರವು ನೀಡುವುದಕ್ಕೆ ಸಿದ್ಧವಿದೆ ಎಂದು ಹೇಳಿದರು.

ಮಂಗಳೂರು ಅರಣ್ಯ ವೃತ್ತದ ಲಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಪ್ರಕಾಶ್ ನೆಟಲ್ಕರ್, ಕಾರ್ಕಳ ಕುದುರೆಮುಖ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಪಿ.ರುಥ್ರೇನ್, ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ನಝೀರ್ ಪೊಲ್ಯ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಶೋಲಾ ಕಾಡುಗಳ ಬಗ್ಗೆ ಛಾಯಾಚಿತ್ರ ಸಂಪುಟ ಹಾಗೂ ಶೋಲಾಸ್ ಆಫ್ ಕುದುರೆಮುಖ ಮತ್ತು ನಮ್ಮ ಶೋಲಾ ಎಂಬ ಸಾಕ್ಷ್ಯಚಿತ್ರಗಳನ್ನು ಬಿಡುಗಡೆ ಮಾಡಲಾಯಿತು. ಕುದುರೆಮುಖ ವನ್ಯಜೀವಿ ವಿಭಾಗ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕಾಜೋಲ್ ಪಾಟೀಲ್ ಸ್ವಾಗತಿಸಿದರು. ಸಿದ್ಧಾಪುರ ವನ್ಯಜೀವಿ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪ್ರಕಾಶ್ ಪೂಜಾರಿ ವಂದಿಸಿದರು. ಉಪ ವಲಯ ಅರಣ್ಯಾ ಧಿಕಾರಿ ಪೂಣಾನರ್ಂದ ಕಾರ್ಯಕ್ರಮ ನಿರೂಪಿಸಿದರು.

ಶೋಲಾ ಸಮೀಕ್ಷೆಗೆ 5 ಕೋಟಿ ಮೀಸಲು

ರಾಜ್ಯದಲ್ಲಿರುವ ಶೋಲಾ ಕಾಡುಗಳ ಸಮೀಕ್ಷೆ ಹಾಗೂ ಸಂರಕ್ಷಣೆಗಾಗಿ ರಾಜ್ಯ ಸರಕಾರ ಈ ಬಾರಿಯ ಬಜೆಟ್‌ನಲ್ಲಿ ಐದು ಕೋಟಿ ರೂ. ಮೀಸಲಿರಿಸಿದೆ ಎಂದು ಕಾರ್ಕಳ ಕುದುರೆಮುಖ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂಕ್ಷಣಾಧಿಕಾರಿ ಪಿ.ರುಥ್ರೇನ್ ತಿಳಿಸಿದ್ದಾರೆ.

ಸರಕಾರ ಈ ಕಾರ್ಯಕ್ಕೆ ಇಷ್ಟು ಮೊತ್ತದ ಅನುದಾನ ನೀಡುತ್ತಿರುವಾಗ ಅದರ ಪ್ರಾಮುಖ್ಯತೆಯನ್ನು ನಾವು ಅರ್ಥ ಮಾಡಿಕೊಳ್ಳಬೇಕಾಗಿದೆ. ಆದುದರಿಂದ ಈ ಕಾರ್ಯದಲ್ಲಿ ಅಧಿಕಾರಿಗಳು, ಸಂಶೋಧಕರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಸೇರಿದಂತೆ ಎಲ್ಲರ ಭಾಗವಹಿಸಬೇಕು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News